ಜೂ.೧೩ಕ್ಕೆ ಜಿಲ್ಲೆಯ ಮೊದಲ ರೈತ ಬಜಾರ್ ಉದ್ಘಾಟನೆ

KannadaprabhaNewsNetwork |  
Published : Jun 11, 2026, 12:15 AM IST
೧೦ಕೆಎಂಎನ್‌ಡಿ-೧ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಸ್ಟ್ ಸರ್ಕಲ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ಮಾತನಾಡಿದರು. | Kannada Prabha

ಸಾರಾಂಶ

ರೈತ ಬಜಾರ್ ಅಧಿವೇಶನದಲ್ಲಿ ನೂರಕ್ಕೂ ಹೆಚ್ಚು ಕೃಷಿ ಉದ್ದಿಮೆದಾರರು, ಸಾಧಕ ರೈತರು ಪಾಲ್ಗೊಳ್ಳಲಿದ್ದಾರೆ. ಕೃಷಿ ಯಂತ್ರೋಪಕರಣಗಳು, ಹೊಸ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಸಾಧ್ಯತೆಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಖರೀದಿದಾರರು ಮತ್ತು ಮಾರಾಟಗಾರರ ನಡುವೆ ನೇರ ಸಂವಹನಕ್ಕೆ ಈ ಅಧಿವೇಶನ ಸಾಕ್ಷಿಯಾಗಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೃಷಿ ಇಲಾಖೆ, ಫಸ್ಟ್ ಸರ್ಕಲ್ ಮತ್ತು ಬೆಲ್ಲದ ನಾಡು ರೈತ ಉತ್ಪಾದಕ ಕಂಪನಿಗಳ ಒಕ್ಕೂಟ ಸಂಯುಕ್ತವಾಗಿ ಮಂಡ್ಯದಲ್ಲಿ ಮೊದಲ ಬಾರಿಗೆ ಜೂ.೧೩ ಮತ್ತು ೧೪ ರಂದು ಜಿಲ್ಲಾ ಪಂಚಾಯ್ತಿ ಪಕ್ಕದ ಆವರಣದಲ್ಲಿ ರೈತ ಬಜಾರ್ ಉದ್ಘಾಟನೆಯಾಗಲಿದೆ ಎಂದು ಮಂಡ್ಯ ಫಸ್ಟ್ ಸರ್ಕಲ್ ಅಧ್ಯಕ್ಷ ಡಾ.ಬಿ.ಶಿವಲಿಂಗಯ್ಯ ತಿಳಿಸಿದರು.

ಮುನ್ನಡೆ ಮಂಡ್ಯ ವಿಷನ್-೨೦೩೫ ಶೀರ್ಷಿಕೆಯಡಿ ಎರಡು ದಿನಗಳ ಕೃಷಿ ಅಧಿವೇಶನವನ್ನು ಆಯೋಜಿಸಿದೆ. ರೈತ ಉತ್ಪನ್ನಗಳ ಖರೀದಿದಾರರು ಮತ್ತು ಮಾರಾಟಗಾರರ ಸಮಾವೇಶವೂ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಅಧಿವೇಶನದಲ್ಲಿ ನೂರಕ್ಕೂ ಹೆಚ್ಚು ಕೃಷಿ ಉದ್ದಿಮೆದಾರರು, ಸಾಧಕ ರೈತರು ಪಾಲ್ಗೊಳ್ಳಲಿದ್ದಾರೆ. ಕೃಷಿ ಯಂತ್ರೋಪಕರಣಗಳು, ಹೊಸ ಮಾರುಕಟ್ಟೆ ಸೃಷ್ಟಿಸಿಕೊಳ್ಳುವ ಸಾಧ್ಯತೆಗಳು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಖರೀದಿದಾರರು ಮತ್ತು ಮಾರಾಟಗಾರರ ನಡುವೆ ನೇರ ಸಂವಹನಕ್ಕೆ ಈ ಅಧಿವೇಶನ ಸಾಕ್ಷಿಯಾಗಲಿದೆ ಎಂದು ನುಡಿದರು.

ಜಿಲ್ಲೆಯು ಅಪಾರ ಕೃಷಿ ಸಾಮರ್ಥ್ಯ ಹೊಂದಿದ್ದರೂ ಕಚ್ಚಾ ಉತ್ಪನ್ನಗಳು ಸಂಸ್ಕರಣೆಯಿಲ್ಲದೆ ಹೊರಹೋಗುತ್ತಿವೆ. ಮೌಲ್ಯ, ಲಾಭ, ಉದ್ಯೋಗಗಳು ಬೇರೆಡೆ ಸೃಷ್ಟಿಯಾಗುತ್ತಿವೆ. ಈ ಸಮಸ್ಯೆಗೆ ರಚನಾತ್ಮಕ ಪರಿಹಾರ ಕಂಡುಕೊಳ್ಳಲು ರೈತರು, ಉದ್ಯಮಿಗಳು, ಸರ್ಕಾರ ಮತ್ತು ಹೂಡಿಕೆದಾರರನ್ನು ಒಂದೆಡೆ ಸೇರಿಸಲಾಗುತ್ತಿದೆ ಎಂದರು.

ರೈತ ಬಜಾರ್‌ನಲ್ಲಿ ಏನಿರಲಿದೆ?

ರೈತ ಬಜಾರ್‌ನಲ್ಲಿ ರಾಜ್ಯದಲ್ಲಿರುವ ೧೨೦೦ ರೈತ ಉತ್ಪಾದಕ ಕಂಪನಿಗಳ ಪೈಕಿ ಸುಮಾರು ೨೦ ಜಿಲ್ಲೆಗಳ ರೈತ ಉತ್ಪಾದಕ ಕಂಪನಿಗಳಿಂದ ೨೦ಕ್ಕೂ ಹೆಚ್ಚು ಉತ್ಪನ್ನಗಳಿಗೆ ಬ್ರ್ಯಾಂಡ್ ರೂಪ ನೀಡಿ ಮಾರಾಟಕ್ಕಿಡಲಾಗುವುದು. ಜಿಲ್ಲಾ ಮಹಿಳಾ ಸ್ವಸಹಾಯ ಸಂಘಗಳು, ಸ್ತ್ರೀಶಕ್ತಿ ಸಂಘಗಳು, ಸಂಜೀವಿನಿ ಒಕ್ಕೂಟದವರು ತಯಾರಿಸುವ ಆಹಾರೋತ್ಪನ್ನಗಳನ್ನು ಪ್ಯಾಕಿಂಗ್ ಮಾಡಿ ಮಾರಾಟ ಮಾಡಲಾಗುವುದು. ಬೆಲ್ಲ, ಅಕ್ಕಿ, ಅಡುಗೆ ಎಣ್ಣೆ, ತರಕಾರಿ, ಹಣ್ಣು ಸೇರಿದಂತೆ ಎಲ್ಲ ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರದಲ್ಲಿ ಗ್ರಾಹಕರಿಗೆ ನೀಡುವುದಾಗಿ ಹೇಳಿದರು.

ಉದ್ಘಾಟನೆ:

ರೈತ ಬಜಾರ್‌ನ ಉದ್ಘಾಟನೆಯನ್ನು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೆರವೇರಿಸುವರು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಳ್ಳುವರು. ಶಾಸಕ ಪಿ.ರವಿಕುಮಾರ್ ಅಧ್ಯಕ್ಷತೆ ವಹಿಸುವರು. ಫಸ್ಟ್ ಸರ್ಕಲ್ ಮಾರ್ಗದರ್ಶಕ ಜಯರಾಂ ರಾಯಪುರ, ಚೆಸ್ಕಾಂ ಅಧ್ಯಕ್ಷ ರಮೇಶ್ ಬಂಡಿಸಿದ್ದೇಗೌಡ ಮಳಿಗೆಗಳನ್ನು ಉದ್ಘಾಟಿಸುವರು. ಅಧಿವೇಶನಕ್ಕೆ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಚಾಲನೆ ನೀಡುವರು ಎಂದರು.

ವೇದಿಕೆ ಕಾರ್ಯಕ್ರಮದ ಬಳಿಕ ಖರೀದಿದಾರ-ಮಾರಾಟಗಾರರ ಸಮಾವೇಶ ಜರುಗಲಿದೆ. ಮಧ್ಯಾಹ್ನ ೨ ರಿಂದ ೩.೩೦ರವರೆಗೆ ತಾಲೂಕುವಾರು ಬೆಳೆಗಳು ಮತ್ತು ಸಂಸ್ಕರಣಾ ಉದ್ಯಮಗಳು, ಸಂಜೆ ೪ ರಿಂದ ೫.೩೦ರವರೆಗೆ ಮಾರುಕಟ್ಟೆ ಕೇಳುವುದನ್ನು ಬೆಳೆಯರಿ-ಬೇಡಿಕೆ ಆಧಾರಿತ ಕೃಷಿ ವಿಷಯವಾಗಿ ಗೋಷ್ಠಿಗಳು ನಡೆಯಲಿವೆ.

ಜೂ.೧೪ರಂದು ಬೆಳಗ್ಗೆ ೧೦.೩೦ ರಿಂದ ೧೧.೩೦ರವರೆಗೆ ಕೃಷಿ ಖರೀದಿದಾರ-ಮಾರಾಟಗಾರರ ಸಮಾವೇಶ ೧೧.೪೫ ರಿಂದ ಮಧ್ಯಾಹ್ನ ೧.೧೫ರವರೆಗೆ ಕೃಷಿ ಆಟೋಮೆಷನ್-ಯಂತ್ರಗಳ ಯುಗಕ್ಕೆ ಮಂಡ್ಯ ಪ್ರವೇಶ, ಕೊನಯದಾಗಿ ಮಂಡ್ಯ ಜಿಡಿಪಿ ಸುಧಾರಣೆ, ರೈತ, ಎಫ್‌ಪಿಒ, ಉದ್ಯಮ, ಸಮುದಾಯ, ಸರ್ಕಾರದ ಪಾತ್ರ ಕುರಿತು ವಿಚಾರ ಮಂಡನೆಯಾಗಲಿದೆ ಎಂದರು.

ಜೂ.೧೪ರಂದು ಸಂಜೆ ೪ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭಾಗವಹಿಸುವರು. ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಮಾರೋಪ ಭಾಷಣ ಮಾಡುವರು. ಜಯರಾಂ ರಾಯಪುರ ದಿಕ್ಸೂಚಿ ಭಾಷಣ ಮಾಡುವರು ಎಂದರು.

ಗೋಷ್ಠಿಯಲ್ಲಿ ವಿ.ಎಸ್.ಅಶೋಕ್, ಡಾ.ಹರಿಣಿಕುಮಾರ್, ಕಾರಸವಾಡಿ ಮಹದೇವು, ಪ್ರೊ.ಬಿ.ಜಯಪ್ರಕಾಶಗೌಡ, ನಾಗರೇವಕ್ಕ, ಹೆಮ್ಮಿಗೆ ಕಾಳೇಗೌಡ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಯಶಸ್ವಿಗೊಳಿಸಿ
ಅಧಿಕಾರಿಗಳ ವರ್ಗಾವಣೆಗೆ ಶಾಸಕ ಚಿಮ್ಮನಕಟ್ಟಿ ಸೂಚನೆ