ಕನ್ನಡಪ್ರಭ ವಾರ್ತೆ ನಾಪೋಕ್ಲು
ಅಸಹಾಯಕರನ್ನು ಗುರುತಿಸಿ ಅವರ ನೆರವಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಬಲರನ್ನಾಗಿ ಮಾಡಲಾಗುತ್ತಿದೆ ಎಂದು ಗ್ರಾಮ ಅಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.ಇಲ್ಲಿಗೆ ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಭಗವತಿ ಕಾಲೋನಿಯ ನಿವಾಸಿ ಅಸಹಾಯಕಿ ವೃದ್ಧೆ ಹೆಚ್.ಬಿ. ಬೊಮ್ಮಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನ ವಿಕಾಸ ಯೋಜನೆಯ ಮೂಲಕ ನಿರ್ಮಾಣ ಮಾಡಿಕೊಟ್ಟ ವಾತ್ಸಲ್ಯ ಗೃಹ ಉದ್ಘಾಟನೆ ಮಾಡಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಗ್ರಾಮ ಅಭಿವೃದ್ಧಿ ಯೋಜನೆಯ ಮೂಲಕ ಹೆಚ್.ಬಿ. ಬೊಮ್ಮಿ ಅವರನ್ನು ಗುರುತಿಸಿ ಕೇವಲ 20 ದಿನಗಳಲ್ಲಿ ಮನೆ ನಿರ್ಮಾಣ ಮಾಡಿ ಇಂದು ಅವರಿಗೆ ಹಸ್ತಾಂತರಿಸಲಾಗಿದೆ ಎಂದ ಅವರು ರಾಜ್ಯದಲ್ಲಿ 78,023.ಮಾಸಾಶನ ನೀಡಲಾಗುತ್ತಿದೆ. ಸರ್ಕಾರಿ ಶಾಲೆಗಳಿಗೆ ಡೆಸ್ಕ್ ಮತ್ತು ಬೆಂಚ್ ಗೆ ಶ್ರೀ ಕ್ಷೇತ್ರದಿಂದ ಶೇಕಡ 80. ಶಾಲಾ ಅಭಿವೃದ್ಧಿ ಸಂಘದಿಂದ ಶೇಕಡ 20 ಸಹಾಯಧನದೊಂದಿಗೆ ರಾಜ್ಯದಲ್ಲಿ ಒಟ್ಟು 73534 ಸೆಟ್ ಡೆಸ್ಕ್ ಮತ್ತು ಬೆಂಚ್ ವಿತರಿಸಲಾಗಿದೆ. ಈ ವರ್ಷ ಕೊಡಗು ಜಿಲ್ಲೆಗೆ 10 ಕೋಟಿ ರು. ವೆಚ್ಚದಲ್ಲಿ 850 ಸೆಟ್ಟು ಡೆಸ್ಕ್ ಬೆಂಚುಗಳು, ಶಾಲಾ ಕಟ್ಟಡಗಳ ನಿರ್ಮಾಣಕ್ಕೆ 6826 ಶಾಲೆಗಳಿಗೆ 10 ಕೋಟಿ, ಬೋಧನಾ ಸಾಮಗ್ರಿಗಳಿಗೆ25 ಲಕ್ಷ ರು., ಕ್ರೀಡಾ ಸಾಮಗ್ರಿಗಳಿಗೆ 21 ಲಕ್ಷ ರು. ನೆರವು ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್. ಕೆ. ಹಂಸ ವಹಿಸಿ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಇನ್ನು ಹೆಚ್ಚಿನ ಸಹಕಾರ ಸಿಗುವಂತಾಗಲಿ ಎಂದು ಶುಭ ಹಾರೈಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಈ ಸಂದರ್ಭ ಪಂಚಾಯಿತಿ ಸದಸ್ಯ ಅನಿತಾ, ಮಾಜಿ ಸದಸ್ಯರಾದ ತ್ಯಾಗಿ ಅಕ್ಕವ್ವ, ನಿವೃತ ಶಿಕ್ಷಕಿ ಯಶೋಧ, ಯೋಜನೆಯ ಜಿಲ್ಲಾಧಿಕಾರಿ ದಿನೇಶ್, ಒಕ್ಕೂಟದ ಅಧ್ಯಕ್ಷರಾದ ನವ್ಯ, ಉಪಾಧ್ಯಕ್ಷರಾದ ಹಂಸವತಿ, ಒಕ್ಕೂಟದ ಕಾರ್ಯದರ್ಶಿ ಚೇತನ, ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಶ್ರೇಯಾ, ಸೇವಾ ಪ್ರತಿನಿಧಿ ಮಮ್ತಾಜ್, ಮೇಲ್ವಿಚಾರಕರಾದ ಪ್ರತಾಪ್, ಸೇವಾ ಪ್ರತಿನಿಧಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.