ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮುಖ್ಯಮಂತ್ರಿ ಸಿದ್ದರಾಮಯ್ಯ ಡಿ.೭ರಂದು ಕೊಳ್ಳೇಗಾಲ ತಾಲೂಕಿನ ಸತ್ತೇಗಾಲದಲ್ಲಿ ದಾನಿಗಳ ಸಹಕಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸರ್ಕಾರಿ ಶಾಲೆಯ ೧೨ ಕೊಠಡಿಗಳನ್ನು ಉದ್ಘಾಟಿಸಲಿದ್ದು, ಯಳಂದೂರು ಪಟ್ಟಣದಲ್ಲಿ ಸೂಪರ್ ಸ್ಪೆಷಾಲಿಟಿ ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲಿದ್ದಾರೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿರುವ ಲಕ್ಷ್ಮಮ್ಮ ಸೊಸಯ್ಯನ ಸಿದ್ದಯ್ಯ ಸರ್ಕಾರಿ ಶಾಲೆಯು ಸುಮಾರು ೭೫ ವರ್ಷಗಳಷ್ಟು ಹಳೆಯದಾಗಿದ್ದು ಇಲ್ಲಿ ಓದಿದ ಅನೇಕರು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ ಎಂದರು.ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿ ಶಾಲಾ ನಿರ್ಮಾಣ ದಾನಿಗಳಾದ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಸ್.ಮರಿಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸತ್ತೇಗಾಲ ಗ್ರಾಮ ಅಭಿವೃದ್ಧಿ ಸಂಘ ಎಂದು ಸ್ಥಾಪಿಸಿಕೊಂಡು ಸುಮಾರು ೨ ಕೋಟಿ ರು. ವೆಚ್ಚದಲ್ಲಿ ಗ್ರಾಮದ ಕೂಲಿ ಕಾರ್ಮಿಕರಿಂದ ಹಿಡಿದು ಪ್ರತಿಯೊಂದು ಕುಟುಂಬವು ತಮ್ಮ ಕೈಲಾದ ಸಹಾಯ ನೀಡಿ ಈ ಶಾಲೆಯಲ್ಲಿ ಸುವ್ಯವಸ್ಥಿತವಾಗಿ ಸರ್ಕಾರದ ಅನುದಾನವಿಲ್ಲದೆ ಸುಮಾರು ೧೨ ಕೊಠಡಿಗಳನ್ನು ನಿರ್ಮಿಸಿದ್ದಾರೆ ಎಂದರು.ಇದು ರಾಜ್ಯಕ್ಕೆ ಮಾದರಿಯಾಗಿದ್ದು ಡಿ.೭ರಂದು ಬೆಳಗ್ಗೆ ೧೦ ಕ್ಕೆ ಸಿಎಂ ಸಿದ್ದರಾಮಯ್ಯ ೧೨ ಕೊಠಡಿಗಳನ್ನು ಉದ್ಘಾಟಿಸಲಿದ್ದು ನಂತರ ಸಾರ್ವಜನಿಕ ಸಮಾರಂಭ ನಡೆಯಲಿದ್ದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಶಿಕ್ಷಣ ಸಚಿವ ಮಧು ಬಂಗಾರಪ್ಪ, ಸಂಸದ ಸುನೀಲ್‌ಬೋಸ್, ಶಾಸಕ ಎಂ.ಆರ್.ಮಂಜುನಾಥ್ ಇತರರು ಭಾಗವಹಿಸಲಿದ್ದಾರೆ ಎಂದರು.
ಮಧ್ಯಾಹ್ನದ ಬಳಿಕ ಯಳಂದೂರು ಪಟ್ಟಣಕ್ಕೆ ಭೇಟಿ ಕೊಡಲಿರುವ ಮುಖ್ಯಮಂತ್ರಿ ನಮ್ಮ ಬಹುದಿನದ ಕನಸಾದ ಸೂಪರ್ ಸ್ಪೆಷಾಲಿಟಿ ೧೦೦ ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು. ಯಳಂದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಸಮಾರಂಭ ನಡೆಯಲಿದ್ದು ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವ ದಿನೇಶ್ ಗುಂಡೂರಾವ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ, ಸಂಸದ ಸುನೀಲ್‌ಬೋಸ್, ಜಿಲ್ಲೆಯ ಶಾಸಕರು, ಮಾಜಿ ಶಾಸಕರು, ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.ಸಮಾವೇಶಕ್ಕೆ ೨೦ ಸಾವಿರ ಮಂದಿ:ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಡಿ.೫ ರಂದು ಹಾಸನದಲ್ಲಿ ನಡೆಯುವ ಜನಕಲ್ಯಾಣ ಸಮಾವೇಶಕ್ಕೆ ಜಿಲ್ಲೆಯಿಂದ ೧೫-೨೦ ಸಾವಿರ ಜನರು ೩೦೦ಕ್ಕೂ ಹೆಚ್ಚು ಬಸ್‌ಗಳ ಮೂಲಕ ಸಮಾವೇಶಕ್ಕೆ ತೆರಳಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಆರ್. ಮಹದೇವ್, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಟೇಶ್, ಮುಖಂಡರ ನಂಜುಂಡಸ್ವಾಮಿ, ರಾಜಗುರು ಇದ್ದರು.