ಶಿಷ್ಟಾಚಾರ ಉಲ್ಲಂಘಿಸಿ ಕಾಮಗಾರಿ ಉದ್ಘಾಟನೆ ಖಂಡನೀಯ: ದಿನೇಶ್‌ ಗುಂಡೂರಾವ್‌

KannadaprabhaNewsNetwork | Published : Feb 16, 2025 1:45 AM

ಸಾರಾಂಶ

ಕಾಮಗಾರಿಗಳನ್ನು ತರಾತುರಿಯಲ್ಲಿ ಯಾರಿಗೂ ಹೇಳದೆ ಬಿಜೆಪಿಯವರು ಉದ್ಘಾಟನೆ ಮಾಡಿದ್ದು ಖಂಡನೀಯ. ಇದು ಸರ್ಕಾರದ ಆಸ್ತಿ ಹಾಗೂ ಸರ್ಕಾರದ ಹಣದಿಂದ ಮಾಡಿದ ಕಾಮಗಾರಿ. ಹೇಳದೆ ಕೇಳದೆ ಉದ್ಘಾಟಿಸಲು ಬಿಜೆಪಿಯವರ ಸ್ವಂತ ಆಸ್ತಿಯಲ್ಲ ಎಂದು ಗುಂಡೂರಾವ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ನಗರದ ಮಂಗಳಾದೇವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಮಂಗಳೂರು ಸ್ಮಾರ್ಟ್‌ ಸಿಟಿ ಮತ್ತು ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ, ಪಶು ವೈದ್ಯಕೀಯ ಆಸ್ಪತ್ರೆ ಕಟ್ಟಡ, ಪಾಲಿಕೆ ಸಿಬ್ಬಂದಿ ವಸತಿ ಗೃಹ, ಬಸ್‌ ತಂಗುದಾಣ ಮತ್ತಿತರ ಕಾಮಗಾರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಶನಿವಾರ ಉದ್ಘಾಟಿಸಿದರು.ಈ ಕಾಮಗಾರಿಗಳನ್ನು ಬಿಜೆಪಿ ಜನಪ್ರತಿನಿಧಿಗಳು ಕಳೆದ ಭಾನುವಾರ ಉದ್ಘಾಟಿಸಿದ್ದರು. ಶಿಷ್ಟಾಚಾರದಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಥವಾ ಸಚಿವರ ಕಚೇರಿಗೂ ಮಾಹಿತಿ ನೀಡದೆ ಉದ್ಘಾಟಿಸಿದ್ದನ್ನು ಪ್ರಶ್ನಿಸಿ, ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದಿನೇಶ್‌ ಗುಂಡೂರಾವ್‌ ಸೂಚನೆ ನೀಡಿದ್ದರು. ಇದರ ಬೆನ್ನಲ್ಲೇ ಸಚಿವರು ಸ್ವತಃ ಆಗಮಿಸಿ ಉದ್ಘಾಟನೆ ನೆರವೇರಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ಬಿಜೆಪಿ ಶಾಸಕರು, ಸಂಸದರು, ಮೇಯರ್‌, ಸ್ಥಳೀಯ ಕಾರ್ಪೊರೇಟರ್‌ ಗೈರು ಹಾಜರಾಗಿದ್ದರು.

ಹೇಳದೆ ಉದ್ಘಾಟಿಸಲು ಸ್ವಂತ ಆಸ್ತಿಯಲ್ಲ:

ಬಳಿಕ ಮಾತನಾಡಿದ ದಿನೇಶ್‌ ಗುಂಡೂರಾವ್‌, ಈ ಕಾಮಗಾರಿಗಳನ್ನು ತರಾತುರಿಯಲ್ಲಿ ಯಾರಿಗೂ ಹೇಳದೆ ಬಿಜೆಪಿಯವರು ಉದ್ಘಾಟನೆ ಮಾಡಿದ್ದು ಖಂಡನೀಯ. ಇದು ಸರ್ಕಾರದ ಆಸ್ತಿ ಹಾಗೂ ಸರ್ಕಾರದ ಹಣದಿಂದ ಮಾಡಿದ ಕಾಮಗಾರಿ. ಹೇಳದೆ ಕೇಳದೆ ಉದ್ಘಾಟಿಸಲು ಬಿಜೆಪಿಯವರ ಸ್ವಂತ ಆಸ್ತಿಯಲ್ಲ. ಸರ್ಕಾರದ ಆಸ್ತಿ ಆಗಿರುವುದರಿಂದ ಉದ್ಘಾಟನೆಯೂ ಶಿಷ್ಟಾಚಾರ ಪ್ರಕಾರವೇ ಆಗಬೇಕು. ಎಲ್ಲರೂ ಸೇರಿ ಜನರ ಕೆಲಸ ಮಾಡುವ ಕಾರ್ಯ ಆಗಬೇಕು. ನಾನು 2-3 ತಿಂಗಳಿಗೊಮ್ಮೆ ಬರುವ ಉಸ್ತುವಾರಿ ಸಚಿವನಲ್ಲ. ಆಗಾಗ ಬರುತ್ತಿರುತ್ತೇನೆ. ಉದ್ಘಾಟನೆಗೆ ದಿನಾಂಕ ಗೊತ್ತುಪಡಿಸುವಂತೆ ಕೇಳುವ ಸೌಜನ್ಯವೂ ಇಲ್ಲದಿದ್ದರೆ ನಾಗರಿಕ ವರ್ತನೆ ಅನ್ನಿಸಿಕೊಳ್ಳುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜ ಮಾತನಾಡಿ, ಆರೋಗ್ಯ ಸಚಿವರ ಇಲಾಖೆಗೇ ಸೇರಿದ ಕಾಮಗಾರಿಯನ್ನು ಅವರಿಗೇ ಹೇಳದೆ ಉದ್ಘಾಟಿಸೋದು ಉತ್ತಮ ಬೆಳವಣಿಗೆಯಲ್ಲ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕರಾದ ಹರೀಶ್‌ ಕುಮಾರ್‌, ಜೆ.ಆರ್‌. ಲೋಬೊ, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕಾರ್ಪೊರೇಟರ್‌ಗಳಾದ ಶಶಿಧರ ಹೆಗ್ಡೆ, ಅನಿಲ್‌ ಕುಮಾರ್‌, ಎ.ಸಿ. ವಿನಯರಾಜ್‌, ಲತೀಫ್‌, ಅಬ್ದುಲ್‌ ರವೂಫ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರವಿಚಂದ್ರ ಮತ್ತಿತರರಿದ್ದರು.

---------ವೆನ್ಲಾಕ್‌ ಮಾಸ್ಟರ್‌ ಪ್ಲ್ಯಾನ್‌ಗೆ ಸಿದ್ಧತೆ: ದಿನೇಶ್‌ ಗುಂಡೂರಾವ್‌

ಜಿಲ್ಲಾ ಸರ್ಕಾರಿ ವೆನ್ಲಾಕ್‌ ಆಸ್ಪತ್ರೆಯ ಸಮಗ್ರ ಅಭಿವೃದ್ಧಿಗೆ ಮಾಸ್ಟರ್‌ ಪ್ಲಾನ್‌ ನಿರ್ಮಿಸುವ ಸಲುವಾಗಿ ತಜ್ಞರೊಬ್ಬರನ್ನು ಇದೇ ತಿಂಗಳಲ್ಲಿ ಮಂಗಳೂರಿಗೆ ಕಳುಹಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ವೆನ್ಲಾಕ್‌ ಆಸ್ಪತ್ರೆಯನ್ನು ಪ್ರಾದೇಶಿಕ ಆಸ್ಪತ್ರೆಯಾಗಿ ಅಭಿವೃದ್ಧಿ ಮಾಡಬೇಕೆನ್ನುವುದು ಹಲವು ವರ್ಷಳ ಬೇಡಿಕೆ ಇದೆ. ಈ ನಿಟ್ಟಿನಲ್ಲೂ ಚಿಂತನೆ ನಡೆಯುತ್ತಿದೆ. ಸರ್ಕಾರ ಬಂದ ಮೇಲೆ ಡಯಾಲಿಸಿಸ್‌ ಸೌಲಭ್ಯ ಸುಧಾರಣೆ ಮಾಡಲಾಗಿದೆ. ಸೂಪರ್‌ ಸ್ಪೆಷಾಲಿಟಿ ವ್ಯವಸ್ಥೆ ಆರಂಭಿಸಿದ್ದು, ಬೇಕಾದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.

ಕೆಲವು ತಾಲೂಕು ಆಸ್ಪತ್ರೆಗಳಿಗೆ ಸೀಮಿತವಾಗಿದ್ದ ಪುನೀತ್‌ ರಾಜ್‌ ಹೃದಯ ಜ್ಯೋತಿ ಯೋಜನೆಯನ್ನು ಇಡೀ ರಾಜ್ಯದ ಎಲ್ಲ ತಾಲೂಕುಗಳಿಗೆ ವಿಸ್ತರಿಲಾಗುವುದು ಎಂದು ಪ್ರಕಟಿಸಿದ ಸಚಿವರು, ದಕ್ಷಿಣ ಕನ್ನಡ ಮತ್ತು ಮಂಗಳೂರು ನಗರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಬೇಕಾದ ಯೋಜನೆಗಳ ಬಗ್ಗೆ ಸೋಮವಾರ ಕೆಡಿಪಿ ಸಭೆಯಲ್ಲಿ ಚರ್ಚಿಸಲಿದ್ದೇನೆ, ಅದಕ್ಕೆ ಎಲ್ಲ ಶಾಸಕರನ್ನು ಆಹ್ವಾನಿಸಿದ್ದೇನೆ ಎಂದು ಹೇಳಿದರು.

Share this article