ಸಿರಿಧಾನ್ಯಗಳ ಜಾಗೃತಿ ವಾಕಥಾನ್‌ದಲ್ಲಿ ಜಂಟಿ ಕೃಷಿ ನಿರ್ದೇಶಕ ಡಾ.ಕಿರಣಕುಮಾರ ಕನ್ನಡಪ್ರಭ ವಾರ್ತೆ ಧಾರವಾಡ
ಜಿಲ್ಲೆಯಲ್ಲಿ ಸಿರಿಧಾನ್ಯ ಬೆಳೆ ಬೆಳೆಯಲು ರೈತರಿಗೆ ಪ್ರೋತ್ಸಾಹ ನೀಡುತ್ತಿದ್ದು, ಸದ್ಯ ಸುಮಾರು 800-1000 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಕೃಷಿ ಇಲಾಖೆಯ ರೈತಸಿರಿ ಯೋಜನೆ ಮೂಲಕ ಸಿರಿಧಾನ್ಯ ರೈತರಿಗೆ ನೆರವು ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ.ಕಿರಣಕುಮಾರ ಎಂ. ಹೇಳಿದರು.ಕೃಷಿ ಇಲಾಖೆಯಿಂದ ಸಿರಿಧಾನ್ಯಗಳ ಬಳಕೆಯ ಕುರಿತು ಜಾಗೃತಿ ಮೂಡಿಸಲು ಶುಕ್ರವಾರ ಸಿರಿಧಾನ್ಯಗಳ ಜಾಗೃತಿ ವಾಕ್‌ಥಾನ್‌ಗೆ ಕಲಾಭವನದ ಆವರಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ಸಿರಿ ಧಾನ್ಯಗಳೆಂದರೆ ರಾಗಿ, ಹಾರಕ, ನವಣೆ, ಸಾಮೆ, ಬರಗು, ಕೊರಲೆ ಊದಲು, ಸಜ್ಜೆ ಮತ್ತು ಜೋಳಗಳ ಸಮೂಹ. ಇವುಗಳಿಗೆ ಸುಮಾರು ಐದು ಸಾವಿರ ವರ್ಷಗಳ ಬೇಸಾಯದ ಇತಿಹಾಸವಿದೆ. ಸಿರಿಧಾನ್ಯಗಳು ಪ್ರಸ್ತುತ ಸನ್ನಿವೇಶದಲ್ಲಿ ಪ್ರಮುಖ ಆಹಾರ ಬೆಳೆಗಳಾಗುತ್ತಿವೆ. ಅತೀ ಕಡಿಮೆ ಮಳೆ ಇರುವ ಪ್ರದೇಶಗಳಲ್ಲಿ, ಶುಷ್ಕ, ಒಣ ಪರಿಸ್ಥಿತಿಗಳಲ್ಲಿ, ಕಡಿಮೆ ಫಲವತ್ತತೆ ಇರುವ ಮಣ್ಣಿನಲ್ಲಿ ಸಹ ಬೆಳೆಯಬಹುದಾಗಿದೆ. ಇದಕ್ಕೆ ಕನಿಷ್ಠ ಕೃಷಿ ಪರಿಕರಗಳ ಬಳಕೆ ಆಗುತ್ತದೆ ಎಂದರು.ನಾರು, ಕಬ್ಬಿಣಾಂಶಗಳು, ಕಾರ್ಬೊಹೈಡ್ರೆಟ್‌ಗಳು ಮತ್ತು ಕೊಬ್ಬಿನಾಂಶಗಳು ಬೇರೆಯ ಧಾನ್ಯಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಇವುಗಳಲ್ಲಿ ಶಕ್ತಿಶಾಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಮತ್ತು ರೋಗ ನಿರೋದಕ ಶಕ್ತಿ ಇರುತ್ತದೆ. ಆದ್ದರಿಂದ ಇವು ಪೌಷ್ಟಿಕತೆಗಳ ಕಣಜಗಳೇ ಆಗಿವೆ. ಆಹಾರ ಕ್ರಮದಲ್ಲಿ ವಿವಿಧ ಆಹಾರ ಪದಾರ್ಥಗಳನ್ನು ಪಡೆಯಲು ಸಾಧ್ಯವಾಗದ ಜನಸಾಮಾನ್ಯರಿಗೆ ಪೌಷ್ಠಿಕಾಂಶದ ಭದ್ರತೆಯನ್ನು ಇವು ಖಾತರಿಪಡಿಸುತ್ತವೆ ಎಂದರು.
ಈ ಬೆಳೆ ಬೆಳೆದ ರೈತರಿಗೆ ಪ್ರತಿ ಹೆಕ್ಟೆರ್‌ಗೆ ₹10 ಸಾವಿರ ನೇರ ನಗದು ವರ್ಗಾವಣೆ ಮೂಲಕ ಪ್ರೋತ್ಸಾಹ ಧನವನ್ನು ಗರಿಷ್ಠ ಎರಡು ಹೆಕ್ಟೇರ್‌ಗೆ ಸೀಮಿತವಾಗುವಂತೆ ನೀಡಲಾಗುತ್ತಿದೆ. ಸಿರಿಧಾನ್ಯಗಳ ಕ್ಷೇತ್ರದಲ್ಲಿ ಸಂಸ್ಕರಣೆಯೇ ಅತೀ ಹೆಚ್ಚು ಸಮಸ್ಯಾತ್ಮಕ ವಿಷಯವಾಗಿದ್ದು, ಸಿರಿಧಾನ್ಯಗಳ ಪ್ರಾಥಮಿಕ ಸಂಸ್ಕರಣ ಘಟಕಗಳ ಸ್ಥಾಪನೆಗಾಗಿ ಪ್ರೋತ್ಸಾಹ ಇದ್ದು ಸ್ಥಳೀಯ ಕೃಷಿ ಇಲಾಖೆ ಸಂಪರ್ಕ ಮಾಡಬಹುದು.ಜಿಲ್ಲಾ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿ, ಸಿರಿಧಾನ್ಯ ಆಹಾರಗಳಿಗೆ ಇಂದು ಬೇಡಿಕೆ ಹೆಚ್ಚಾಗಿದ್ದು, ಆರೋಗ್ಯಕ್ಕಾಗಿ ಸಿರಿಧಾನ್ಯ ಅಡುಗೆಯನ್ನು ಬಳಸಲು ಆಸಕ್ತಿ ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಸಿರಿಧಾನ್ಯ ಮಾರಾಟಮೇಳ ಮತ್ತು ಉತ್ತಮವಾದ ಒಂದು ಕ್ಯಾಂಟಿನ್ ಸ್ಥಾಪಿಸುವ ಅಗತ್ಯವಿದೆ ಎಂದರು.
ಕೃಷಿ ಕಾಲೇಜು ಡೀನ್ ಡಾ. ಎಚ್.ಬಿ. ಬಬಲಾದ ಮಾತನಾಡಿದರು. ವಿಠ್ಠಲರಾವ್ ಸ್ವಾಗತಿಸಿದರು. ಕೃಷಿ ಸಹಾಯಕ ನಿರ್ದೇಶಕ ರಾಜಶೇಖರ ಅಣಗೌಡರ ನಿರೂಪಿಸಿದರು. ಕೃಷಿ ಇಲಾಖೆಯ ಉಪನಿರ್ದೇಶಕಿ ಜಯಶ್ರೀ ಹಿರೇಮಠ ವಂದಿಸಿದರು. ಅಧಿಕಾರಿಗಳಾದ ಸಂದೀಪ್ ಆರ್.ಜಿ., ಎಸ್.ಎಫ್. ಕಟ್ಟೆಗೌಡರ್, ಸುಷ್ಮಾ ಮಳಿಮಠ, ತಿಪ್ಪೇಸ್ವಾಮಿ, ಭಾರತಿ ಮೆಣಸಿನಕಾಯಿ, ಗೀತಾ ಕಡಪಟ್ಟಿ, ಮಂಜುನಾಥ ಹೂಗಾರ, ವಿಜಯಕುಮಾರ ಹಾಲಗತ್ತಿ, ಮಹಾದೇವ ಸರಶೆಟ್ಟಿ ಮತ್ತಿತರರು ಇದ್ದರು. ಜಾಗೃತಿ ಜಾಥಾ ಕಲಾಭವನದಿಂದ, ಕಾರ್ಪೊರೇಷನ್ ವೃತ್ತ, ಸಿಬಿಟಿ, ಜುಬಿಲಿ ವೃತ್ತ ಮಾರ್ಗವಾಗಿ ಕೆಸಿಡಿ ವೃತ್ತದವರೆಗೆ ನಡೆಯಿತು.