ನಿರಂತರ ಮಳೆ ಹೇಮಾವತಿ ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ

KannadaprabhaNewsNetwork |  
Published : Oct 24, 2024, 12:38 AM IST
23ಕೆಎಂಎನ್ ಡಿ25  | Kannada Prabha

ಸಾರಾಂಶ

ತಾಲೂಕಿನ ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ 800 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ದಾಸನಕೆರೆ ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿ ಬುಧವಾರ ಬೆಳಗ್ಗೆ ಕೋಡಿ ಬಿದ್ದಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನಾದ್ಯಂತ ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಜೊತೆಗೆ ಹೇಮಾವತಿ ಜಲಾಶಯದಿಂದ ಹೆಚ್ಚಿನ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಬಹುತೇಕ ಕೆರೆ- ಕಟ್ಟೆಗಳು ತುಂಬಿ ತುಳುಕುತ್ತಿವೆ.

ತಾಲೂಕಿನ ಅಣೆಚನ್ನಾಪುರ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ಹೆಚ್ಚುವರಿ ನೀರು ರಸ್ತೆಯಲ್ಲಿ ಹರಿಯುತ್ತಿದ್ದ ವೇಳೆ ರಸ್ತೆ ದಾಟುತ್ತಿದ್ದ ಬೈಕ್ ಸವಾರ ನೀರಿನಲ್ಲಿ ಕೊಚ್ಚಿ ಹೋಗಿರುವ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ.

ತಾಲೂಕಿನ ಕಂಬದಹಳ್ಳಿ ಮಾಯಣ್ಣಗೌಡರ ಪುತ್ರ ಕೆ.ಎಂ.ರಾಮಚಂದ್ರೇಗೌಡ(67) ರಸ್ತೆಯಲ್ಲಿ ಹರಿಯುತ್ತಿದ್ದ ಭಾರೀ ಪ್ರಮಾಣದ ನೀರಿನಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ದುರ್ದೈವಿ. ಸ್ವಗ್ರಾಮ ಕಂಬದಹಳ್ಳಿಯಿಂದ ಕಾರ್ಯನಿಮಿತ್ತ ಬೆಳ್ಳೂರು ಕಡೆಗೆ ತನ್ನ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಅಣೆ ಚನ್ನಾಪುರದ ಕೆರೆ ಭರ್ತಿಯಾಗಿ ಕೋಡಿ ಬಿದ್ದು ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿತ್ತು. ನೀರಿನ ರಭಸ ಅರಿಯದ ರಾಮಚಂದ್ರೇಗೌಡ ತಮ್ಮ ಬೈಕ್‌ನೊಂದಿಗೆ ರಸ್ತೆ ದಾಟಲು ಹೋಗಿದ್ದಾರೆ. ಈ ವೇಳೆ ಬೈಕ್‌ನ ಇಂಜಿನ್‌ಗೆ ನೀರು ತಂಬಿದ ಕಾರಣ ಬೈಕ್ ನೀರಿನಲ್ಲಿಯೇ ನಿಂತಿತು. ನೀರಿನ ರಭಸಕ್ಕೆ ರಾಮಚಂದ್ರೇಗೌಡ ಕೊಚ್ಚಿ ಹೋದರೆಂದು ಸ್ಥಳೀಯ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಂಡಿಗನವಿಲೆ ಠಾಣೆಯ ಪೋಲಿಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ರಾಮಚಂದ್ರೇಗೌಡರ ಮೃತ ದೇಹಕ್ಕಾಗಿ ಶೋಧಕಾರ್ಯ ನಡೆಸಿದರು. ಬುಧವಾರ ಸಂಜೆ ವೇಳೆಗೆ ರಾಮಚಂದ್ರೇಗೌಡರ ಮೃತ ದೇಹ ಮತ್ತು ಬೈಕ್ ಬಹಳ ದೂರದ ನೀರಿನಲ್ಲಿ ಪತ್ತೆಯಾಯಿತು.

ನಂತರ ರಾಮಚಂದ್ರೇಗೌಡರ ಮೃತದೇಹವನ್ನು ತಾಲೂಕಿನ ಬಿ.ಜಿ. ನಗರದ ಆದಿಚುಂಚನಗಿರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಘಟನೆ ಸಂಬಂಧ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನವಿ ಮಾಡಿದರೂ ಪ್ರಯೋಜನವಾಗಿಲ್ಲ :

ಅಣೆಚನ್ನಾಪುರ ಗ್ರಾಮದ ಕೆರೆ ಭರ್ತಿಯಾಗಿ ಕೋಡಿ ಬಿದ್ದಾಗ ಇಂತಹ ಅವಘಡಗಳು ಸಂಭವಿಸುತ್ತವೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಕೆರೆ ಕೋಡಿ ಬಿದ್ದಾಗಲೂ ಕೂಡ ಗೂಡ್ಸ್‌ಟೆಂಪೋ ಹಾಗೂ ಆಟೋ ಕೊಚ್ಚಿ ಹೋಗಿದ್ದವು. ಆದರೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ರಸ್ತೆಯ ಎರಡೂ ಬದಿಯಲ್ಲಿ ವೈಜ್ಞಾನಿಕವಾಗಿ ಸೇತುವೆ ನಿರ್ಮಾಣ ಮಾಡುವಂತೆ ಲೋಕೋಪಯೋಗಿ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈಗಲಾದರೂ ಸರ್ಕಾರ ಇತ್ತ ಗಮನಹರಿಸಿ ಅಗತ್ಯ ಕ್ರಮವಹಿಸಬೇಕು ಎಂದು ಸ್ಥಳೀಯ ಜನರು ಆಗ್ರಹಿಸಿದ್ದಾರೆ.

ಕೋಡಿಬಿದ್ದ ಕೆರೆಗಳು:

ತಾಲೂಕಿನ ಬೆಳ್ಳೂರು ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ 800 ಎಕರೆಗೂ ಹೆಚ್ಚು ವಿಸ್ತೀರ್ಣವಿರುವ ದಾಸನಕೆರೆ ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿ ಬುಧವಾರ ಬೆಳಗ್ಗೆ ಕೋಡಿ ಬಿದ್ದಿದೆ.

ಕೆರೆ ಕೋಡಿಯಲ್ಲಿ ಭೋರ್ಗರೆದು ಹರಿಯುತ್ತಿರುವ ನೀರಿನ ದೃಶ್ಯ ನೋಡಿ ಕಣ್ತುಂಬಿಕೊಳ್ಳಲು ಸ್ಥಳೀಯ ಜನರು ತಂಡೋಪ ತಂಡವಾಗಿ ಬಂದು ಮೊಬೈಲ್‌ನಲ್ಲಿ ಸೆಲ್ಪಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡುಬಂತು. ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಮಾಚನಾಯಕನಹಳ್ಳಿ, ಅಣೆಚನ್ನಾಪುರ, ಬಿಂಡಿಗನವಿಲೆ, ದಾಸರಹಳ್ಳಿ, ಖರಡ್ಯ, ಸಾತೇನಹಳ್ಳಿ ಸೇರಿ ಹಲವು ಕೆರೆಗಳು ತುಂಬಿ ತುಳುಕಿ ಕೋಡಿ ಬಿದ್ದಿವೆ. ಮಳೆಯ ಜೊತೆಗೆ ಹೇಮಾವತಿ ಜಲಾಶಯದ ನೀರು ನಾಲೆಗಳಲ್ಲಿ ಹರಿದು ಬರುತ್ತಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಸೂಳೆಕೆರೆ ಸೇರಿದಂತೆ ಬಹುತೇಕ ಕೆರೆ- ಕಟ್ಟೆಗಳು ಪೂರ್ಣಪ್ರಮಾಣದಲ್ಲಿ ಭರ್ತಿಯಾಗಿವೆ.

PREV

Recommended Stories

ವಿಶ್ವಾದ್ಯಂತ ಒಂದೇ ದಿನ ಕಾಂತಾರ ಚಾಪ್ಟರ್ 1 ಬಿಡುಗಡೆ
ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!