ಬಾಳೆಹೊನ್ನೂರಲ್ಲಿ ಬಿಡುವು ನೀಡದ ಮಳೆ, ಗಾಳಿಗೆ ಹಾನಿ ಅಪಾರ ಹಾನಿ

KannadaprabhaNewsNetwork |  
Published : Jul 26, 2024, 01:40 AM IST
೨೫ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಅಯ್ಯಪ್ಪನಗರದ ಸ್ಟೆಲ್ಲಾ ಗ್ರೆಗೋರಿ ಡಿಸೋಜಾ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ. | Kannada Prabha

ಸಾರಾಂಶ

ಬಾಳೆಹೊನ್ನೂರು, ಬಾಳೆಹೊನ್ನೂರು ಪಟ್ಟಣ ಸೇರಿ ಹೋಬಳಿ ವಿವಿಧೆಡೆ ಪುಷ್ಯ ಮಳೆಯ ಭಾರೀ ಗಾಳಿ ಅಬ್ಬರ ಗುರುವಾರವೂ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಮರಗಳು ಮನೆ ಮೇಲೆ ಬಿದ್ದು ಹಾನಿಯೂ ಸಂಭವಿಸಿದೆ.

ವಿವಿಧೆಡೆ ಮನೆಗಳ ಮೇಲೆ ಮರ ।

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಬಾಳೆಹೊನ್ನೂರು ಪಟ್ಟಣ ಸೇರಿ ಹೋಬಳಿ ವಿವಿಧೆಡೆ ಪುಷ್ಯ ಮಳೆಯ ಭಾರೀ ಗಾಳಿ ಅಬ್ಬರ ಗುರುವಾರವೂ ಮುಂದುವರಿದಿದ್ದು, ಹಲವು ಕಡೆಗಳಲ್ಲಿ ಮರಗಳು ಮನೆ ಮೇಲೆ ಬಿದ್ದು ಹಾನಿಯೂ ಸಂಭವಿಸಿದೆ.

ಬಿ.ಕಣಬೂರು ಗ್ರಾಪಂನ ಅಯ್ಯಪ್ಪನಗರದ ಸ್ಟೆಲ್ಲಾ ಗ್ರೆಗೋರಿ ಡಿಸೋಜಾ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾದರೆ, ಅಕ್ಷರ ನಗರದ ಶೋಭಾ ಆರ್ಮುಗಂ ಮನೆ ಮೇಲ್ಚಾವಣಿಯೇ ಕುಸಿದಿದ್ದು ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ನಾಡಕಚೇರಿ ವಿ.ಎ ಸಮೀಕ್ಷಾ, ಬಿ. ಕಣಬೂರು ಗ್ರಾಪಂ ಅಧ್ಯಕ್ಷ ಸದಾಶಿವ ಆಚಾರ್ಯ, ಪಿಡಿಒ ಕಾಶಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬನ್ನೂರು ಗ್ರಾಪಂ ವ್ಯಾಪ್ತಿಯ ಬನ್ನೂರಿನ ಸರೋಜಮ್ಮ ಅವರ ಮನೆ ಹಾಗೂ ಆಡುವಳ್ಳಿ ಗ್ರಾಪಂ ವ್ಯಾಪ್ತಿಯ ಬಂಡಿಹೊಳೆಯ ರವಿ ಅವರ ಮನೆ ಮೇಲೆ ಮರ ಮುರಿದು ಬಿದ್ದು ಮೇಲ್ಚಾವಣಿ ಶೀಟುಗಳಿಗೆ ಹಾನಿಯಾಗಿದೆ. ಹಲಸೂರು ಸಮೀಪದ ಮುಖ್ಯರಸ್ತೆಯಲ್ಲಿ ವಿದ್ಯುತ್ ಲೈನ್ ಮೇಲೆ ಬೃಹತ್ ಮರ ಉರುಳಿ ಬಿದ್ದು ಹಾನಿಯಾಗಿದ್ದಲ್ಲದೆ, ರಸ್ತೆಯಲ್ಲಿ ವಾಹನಗಳು ತೆರಳಲು ಸಮಸ್ಯೆಯಾಗಿತ್ತು. ಸ್ಥಳಕ್ಕೆ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂ ಸೇವಕರು ತೆರಳಿ ಮರ ತೆರವುಗೊಳಿಸಿದರು.

ಗುರುವಾರ ಬೆಳ್ಳಂ ಬೆಳಿಗ್ಗೆಯೇ ಭಾರೀ ಗಾಳಿಯೊಂದಿಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದರು. ಗಾಳಿಗೆ ಲೆಕ್ಕವಿಲ್ಲದಷ್ಟು ಮರಗಳು, ಕೊಂಬೆಗಳು ಅಲ್ಲಲ್ಲಿ ಮುರಿದು ಬೀಳುತ್ತಿದ್ದು, ಮುಖ್ಯ ರಸ್ತೆಯಲ್ಲಿ ವಾಹನ ಚಾಲಕರು ಆತಂಕದಲ್ಲಿಯೇ ವಾಹನ ಚಲಾಯಿಸುತ್ತಿದ್ದಾರೆ.

ಕಳೆದ ಹಲವು ದಿನಗಳಿಂದ ವ್ಯತ್ಯಯವಾಗಿದ್ದ ವಿದ್ಯುತ್ ಬುಧವಾರ ಮಧ್ಯಾಹ್ನ ಕೆಲವು ಗ್ರಾಮಗಳಲ್ಲಿ ಕೆಲವು ನಿಮಿಷಗಳ ಕಾಲ ಬಂದಿದ್ದರೂ ಸಹ ಭಾರೀ ಗಾಳಿ ಹಿನ್ನೆಲೆಯಲ್ಲಿ ಮತ್ತೆ ವಿದ್ಯುತ್ ಕಡಿತಗೊಂಡಿದ್ದು, ಪುನಃ ಕತ್ತಲೆಯಲ್ಲಿ ದಿನ ದೂಡುವಂತಾಗಿದೆ.

ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕೆಲವರು ಪಟ್ಟಣದಲ್ಲಿ ದೊರೆವ ನೀರಿನ ಕ್ಯಾನ್‌ಗಳ ಮೊರೆ ಹೋಗಿದ್ದರೆ,ಇನ್ನೂ ಹಲವರು ಮಳೆ ನೀರನ್ನೇ ನಿತ್ಯದ ಕೆಲಸಗಳಿಗೆ ಬಳಸುತ್ತಿದ್ದಾರೆ. ವಿದ್ಯುತ್ ಇಲ್ಲದೇ ಗ್ರಾಮೀಣ ಭಾಗದ ಬಿಎಸ್‌ಎನ್‌ಎಲ್ ಟವರ್‌ಗಳು ಸಂಪೂರ್ಣ ಬಂದ್ ಆಗಿದೆ. ಗುರುವಾರ ಸುರಿದ ಧಾರಾಕಾರ ಮಳೆಗೆ ಭದ್ರಾನದಿಯಲ್ಲಿ ನೀರಿನ ಹರಿವು ಏರಿಕೆಯಾಗಿದೆ.೨೫ಬಿಹೆಚ್‌ಆರ್ ೨: ಬಾಳೆಹೊನ್ನೂರಿನ ಅಯ್ಯಪ್ಪನಗರದ ಸ್ಟೆಲ್ಲಾ ಗ್ರೆಗೋರಿ ಡಿಸೋಜಾ ಎಂಬುವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಮೇಲ್ಚಾವಣಿಗೆ ಹಾನಿಯಾಗಿದೆ.೨೫ಬಿಹೆಚ್‌ಆರ್ ೩: ಬಾಳೆಹೊನ್ನೂರಿನ ಅಕ್ಷರನಗರದ ಶೋಭಾ ಆಮುರ್ಗಂ ಎಂಬುವರ ಮನೆಯ ಮೇಲ್ಚಾವಣಿಗೆ ಧಾರಾಕಾರ ಮಳೆಗೆ ಕುಸಿದಿರುವುದು.

--

ವಿದ್ಯುತ್ ಲೈನ್ ಜೋಡಿಸಲು ನದಿಯಲ್ಲಿ ಈಜಿದ ಲೈನ್‌ಮೆನ್

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಕಳೆದ ಎರಡು ವಾರಗಳಿಂದ ನಿರಂತರವಾಗಿ ಗಾಳಿ ಮಳೆಯಾಗುತ್ತಿರುವ ಮಲೆನಾಡು ಭಾಗದ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು, ಲೈನ್ ತುಂಡಾಗಿ ಸಂಪರ್ಕ ಕಡಿತಗೊಂಡಿದ್ದನ್ನು ಪುನಃ ಜೋಡಿಸಿ ಸಂಪರ್ಕ ನೀಡಲು ಲೈನ್‌ಮೆನ್ ಒಬ್ಬರು ತುಂಬಿ ಹರಿಯುತ್ತಿದ್ದ ನದಿಯಲ್ಲಿ ಈಜಿ ವೈರ್ ಸರಿ ಮಾಡಿ ಗ್ರಾಮಸ್ಥರ ಪ್ರಶಂಸೆಗೆ ಪಾತ್ರರಾಗಿದ್ದಾರೆ.ಚಿಕ್ಕಮಗಳೂರು ತಾಲೂಕಿನ ಹುಯಿಗೆರೆ ಗ್ರಾಪಂತಿ ವ್ಯಾಪ್ತಿಯ ಹುಯಿಗೆರೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹಲವು ದಿನಗಳಿಂದ ವಿದ್ಯುತ್ ವ್ಯತ್ಯಯವಾಗಿತ್ತು. ಹುಯಿಗೆರೆ ಸಮೀಪದ ಹುಲಿಗೆಹಳ್ಳದ ಹೊಳೆ ಬಳಿ ಹಾದು ಹೋಗಿದ್ದ ವಿದ್ಯುತ್ ವೈರ್ ಮರ ಬಿದ್ದು ತುಂಡಾಗಿ ಹೊಳೆಯ ಮದ್ಯಭಾಗದಲ್ಲಿ ಸಿಲುಕಿತ್ತು.ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದನ್ನು ಗಮನಿಸಿದ ಮೆಸ್ಕಾಂ ಲೈನ್‌ಮೆನ್ ರವಿ ಕುಮಾರ್ ಸ್ಥಳಕ್ಕೆ ತೆರಳಿ, ಪರಿಶೀಲಿಸಿದಾಗ ವಿದ್ಯುತ್ ವೈರ್ ನದಿ ಮದ್ಯಭಾಗದಲ್ಲಿರುವುದು ಕಂಡುಬಂದಿದೆ. ಹುಯಿಗೆರೆ ಗ್ರಾಮಕ್ಕೆ ಹೇಗಾದರೂ ಮಾಡಿ ವಿದ್ಯುತ್ ಸಂಪರ್ಕ ಪುನರ್ ಕಲ್ಪಿಸಬೇಕೆಂದು ತೀರ್ಮಾನಿಸಿದ ರವಿಕುಮಾರ್ ತುಂಬಿ ಹರಿಯುತ್ತಿದ್ದ ಹುಲಿಗೆಹಳ್ಳದ ಹೊಳೆ ಯಲ್ಲಿ ಈಜಿ ಮದ್ಯಭಾಗದಲ್ಲಿ ಬಿದ್ದಿದ್ದ ವಿದ್ಯುತ್ ವೈರನ್ನು ಇತ್ತಲಿನ ದಡಕ್ಕೆ ತಂದು ಜೋಡಿಸಿದ್ದಾರೆ.ಲೈನ್‌ಮೆನ್ ರವಿಕುಮಾರ್ ಕೆಲಸಕ್ಕೆ ಮೆಸ್ಕಾಂನ ಇತರ ಲೈನ್‌ಮೆನ್‌ಗಳಾದ ಪುನೀತ್, ಶಿವು ಸಹ ಕೈ ಜೋಡಿಸಿದ್ದಾರೆ. ರವಿಕುಮಾರ್ ಈಜುತ್ತಾ ವಿದ್ಯುತ್ ವೈರ್ ತರುತ್ತಿರುವ ವಿಡಿಯೋವನ್ನು ಸ್ಥಳೀಯರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಗ್ರಾಮಸ್ಥರಿಗಾಗಿ ತನ್ನ ಜೀವದ ಹಂಗು ತೊರೆದು ಹೊಳೆಯಲ್ಲಿ ಈಜಿರುವ ಲೈನ್‌ಮೆನ್ ರವಿಕುಮಾರ್ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

೨೫ಬಿಹೆಚ್‌ಆರ್ ೬:

ಬಾಳೆಹೊನ್ನೂರು ಸಮೀಪದ ಹುಯಿಗೆರೆ ಗ್ರಾಮದಲ್ಲಿ ತುಂಬಿ ಹರಿಯುತ್ತಿರುವ ಹುಲಿಗೆಹಳ್ಳದ ಹೊಳೆಯಲ್ಲಿ ವಿದ್ಯುತ್ ವೈರ್ ಜೋಡಿಸಲು ಈಜುತ್ತಿರುವ ಲೈನ್‌ಮೆನ್ ರವಿಕುಮಾರ್೨೫ಬಿಹೆಚ್‌ಆರ್ ೪: ಬಾಳೆಹೊನ್ನೂರಿನ ಬನ್ನೂರು ಗ್ರಾಮದ ಸರೋಜಮ್ಮ ಎಂಬುವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿರುವುದು.೨೫ಬಿಹೆಚ್‌ಆರ್ ೫: ಬಾಳೆಹೊನ್ನೂರು ಸಮೀಪದ ಹಲಸೂರು ಗ್ರಾಮದಲ್ಲಿ ವಿದ್ಯುತ್ ಲೈನ್ ಮೇಲೆ ಬಿದ್ದ ಮರವನ್ನು ಶೌರ್ಯ ವಿಪತ್ತು ಘಟಕದವರು ತೆರವುಗೊಳಿಸುತ್ತಿರುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!