ನಿರಂತರ ಮಳೆಗೆ ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Jul 26, 2024, 01:32 AM IST
ಪೋಟೋ 3 * 4: ದಾಬಸ್‌ಪೇಟೆ ಪಟ್ಟಣದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಛತ್ರಿ ಹಿಡಿದು ಓಡಾಡುತ್ತಿರುವುದು | Kannada Prabha

ಸಾರಾಂಶ

ಪಟ್ಟಣದಲ್ಲಿ ಕಳೆದ ಐದಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದು, ಬೀದಿ ಬದಿ ವ್ಯಾಪಾರಸ್ಥರು ಮಳೆಯಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಪಟ್ಟಣದಲ್ಲಿ ಕಳೆದ ಐದಾರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿ ಜಿಟಿ ಮಳೆಯಿಂದ ವಾಹನ ಸವಾರರು ಹೈರಾಣಾಗಿದ್ದು, ಬೀದಿ ಬದಿ ವ್ಯಾಪಾರಸ್ಥರು ಮಳೆಯಿಂದಾಗಿ ತೀವ್ರ ನಷ್ಟ ಅನುಭವಿಸುವಂತಾಗಿದೆ.

ಮಳೆಯಿಂದ ರಸ್ತೆಗಳಲ್ಲಿ ಜನರ ಓಡಾಟವಿಲ್ಲದೆ ಬಿಕೋ ಎನ್ನುತ್ತಿದ್ದ ದೃಶ್ಯ ಸಾಮಾನವಾಗಿತ್ತು, ಉತ್ತಮ ಮಳೆಯಾಗದಿದ್ದರೂ ತುಂತುರು ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಭಾಗದ ಜನರಿಗೆ ದಿನನಿತ್ಯದ ಕಾರ್ಯಗಳನ್ನು ನಡೆಸಲು ಅಡಚಣೆ ಉಂಟಾಗಿತ್ತು. ಕೊಂಚವೂ ಬಿಡುವಿಲ್ಲದಂತೆ ಸುರಿಯುತ್ತಿರುವ ಮಳೆಯ ಕಾರಣ ಸಾರ್ವಜನಿಕರು ಹೈರಾಣಾಗಿದ್ದಾರೆ.

ಬೆಳಗ್ಗೆಯಿಂದಲೇ ಆರಂಭಗೊಂಡ ಜಿಟಿ ಜಿಟಿ ಮಳೆಯಿಂದ ಕೆಲಸಕ್ಕೆ ತೆರಳುವವರಿಗೆ ಹಾಗೂ ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನಾನುಕೂಲ ಉಂಟಾಗಿ ಛತ್ರಿ ಹಿಡಿದು ಓಡಾಡಬೇಕಾಯಿತು. ಸಂತೆ ಮಾರುಕಟ್ಟೆ, ಉದ್ದಾನೇಶ್ವರ ವೃತ್ತ, ಶಿವಗಂಗೆ ವೃತ್ತದಲ್ಲಿ ವ್ಯಾಪಾರಸ್ಥರು ಹಾಗೂ ರೈತರ ವ್ಯಾಪಾರ ವಹಿವಾಟಿಗೆ ತೊಂದರೆ ಉಂಟಾಯಿತಲ್ಲದೆ ಬೀದಿ ಬದಿಯ ವ್ಯಾಪಾರಿಗಳು ಮಳೆಯಲ್ಲಿಯೇ ನೆನೆದು ವ್ಯಾಪಾರ ಮಾಡಬೇಕಾಯಿತು.

ಕೆಸರು ಗದ್ದೆಯಂತಾದ ರಸ್ತೆಗಳು:ಮಳೆಯಿಂದಾಗಿ ಹೋಬಳಿಯ ವಿವಿಧ ಹಳ್ಳಿಗಳ ರಸ್ತೆಗಳು ಅರ್ಧಬರ್ಧ ನಡೆದ ಕಾಮಗಾರಿ ಹಾಗೂ ಎಲ್ಲೆಂದರಲ್ಲಿ ಅಗೆದ ಹಳ್ಳಗಳಿಂದ ಕೆಸರು ಗದ್ದೆಯಂತಾಗಿವೆ. ರಸ್ತೆ ಕಾಮಗಾರಿ ಸರಿಯಾಗಿ ನಿರ್ವಹಿಸದ ಅಧಿಕಾರಿಗಳ ವಿರುದ್ಧ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿ ತಿನಿಸುಗಳ ಮೊರೆ:

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ದಾಬಸ್‌ಪೇಟೆ ಪಟ್ಟಣ ಕೂಲ್ ಆಗಿದ್ದು, ಚಳಿಗೆ ಜನರು ಬಿಸಿ ಬಿಸಿ ತಿನಿಸುಗಳಾದ ಬಜ್ಜಿ, ಬೋಂಡ, ಪಾನೀಪುರಿ ಸೇರಿ ಹಲವು ಬಗೆಯ ತಿಂಡಿ- ತಿನಿಸುಗಳ ಮೊರೆ ಹೋಗಿದ್ದು ಸರ್ವೇ ಸಾಮಾನ್ಯವಾಗಿತ್ತು.

ಡೆಂಘೀ ಭಯ:

ಜಿಟಿ ಜಿಟಿ ಮಳೆಯಿಂದ ಕಸದ ರಾಶಿ ಹಾಗೂ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ಸೊಳ್ಳೆಗಳು ಉತ್ಪತ್ತಿಗೆ ಕಾರಣವಾಗಿದೆ. ಇದರಿಂದ ಸದ್ಯ ಎಲ್ಲೆಡೆ ಹರಡುತ್ತಿರುವ ಡೆಂಘೀ ಜ್ವರ ಸಾರ್ವಜನಿಕರಲ್ಲಿ ಭಯ ಉಂಟುಮಾಡಿದೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ