ಹಲವೆಡೆ ಪೂರ್ವ ಮುಂಗಾರಿನ ಅಬ್ಬರ । ಇಂದು ರೆಡ್ ಅಲರ್ಟ್, ನಾಳೆ ಯೆಲ್ಲೋ ಅಲರ್ಟ್ । ಶೇ.60 ಹೆಚ್ಚುವರಿ ಮಳೆ ವಿವಿಧೆಡೆ ಧರೆಗುರುಳಿದ ಮರಗಳು । ಸಂಚಾರದಲ್ಲಿ ವ್ಯತ್ಯಯ । ಅನೇಕ ಕಡೆ ಧರೆ ಕುಸಿತ । ಹಲವು ಕೆರೆಗಳು ಭರ್ತಿ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಜಿಲ್ಲೆಯಲ್ಲಿ ದಿನೇ ದಿನೇ ಪೂರ್ವ ಮುಂಗಾರಿನ ಅಬ್ಬರ ಜೋರಾಗುತ್ತಿದೆ. ಕೆಲವೆಡೆ ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರವೂ ಮುಂದುವರಿದಿತ್ತು. ಮಲೆನಾಡಿನ ಹಲವೆಡೆ ತೇವಾಂಶ ಹೆಚ್ಚಾಗಿ ಸಣ್ಣಪುಟ್ಟ ಧರೆ ಕುಸಿತ ಉಂಟಾಗಿದ್ದರೆ, ಮತ್ತೊಂದೆಡೆ ಮಿನಿ ಬಸ್ ಹಾಗೂ ಬೈಕಿನ ಮೇಲೆ ಮರ ಬಿದ್ದಿರುವ ಘಟನೆಯೂ ಕೂಡ ನಡೆದಿದೆ.
ಮಳೆ ಬಿಡುವಿಲ್ಲದೆ ಸುರಿಯುತ್ತಿದೆ. ಇದೇ ವಾತಾವರಣ ಇನ್ನೆರಡು ದಿನ ಮುಂದುವರಿಯುವ ಹಿನ್ನೆಲೆ ಜಿಲ್ಲೆಯಲ್ಲಿ ಮೇ 21 ರಂದು ರೆಡ್ ಅಲರ್ಟ್ ಹಾಗೂ ಮೇ 22 ರಂದು ಯೆಲ್ಲೋ ಅಲರ್ಟ್ ಘೋಷಣೆ ಮಾಡಿ ರಾಜ್ಯ ಹವಮಾನ ಇಲಾಖೆ ಮುನ್ನೂಚನೆ ನೀಡಿದೆ. ಈ ಹಿನ್ನೆಲೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಲವು ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ತಿಳಿಸಿದ್ದಾರೆ.ಬಯಲುಸೀಮೆಯ ತರೀಕೆರೆ, ಅಜ್ಜಂಪುರ, ಕಡೂರು ತಾಲೂಕುಗಳಲ್ಲಿ ಚದುರಿದಂತೆ ಮಳೆ ಬರುತ್ತಿತ್ತು. ಆದರೆ, ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಸೋಮವಾರ ರಾತ್ರಿ ಆರಂಭವಾದ ಮಳೆ ಮಂಗಳವಾರ ಮಧ್ಯಾಹ್ನ 3 ಗಂಟೆಯ ವೇಳೆ ಬಿಡುವು ನೀಡಿತಾದರೂ ಮತ್ತೆ ವರುಣನ ಆರ್ಭಟ ಜೋರಾಗಿತ್ತು. ಭಾರೀ ಮಳೆಯಿಂದಾಗಿ ಕೆರೆಗಳು ಭರ್ತಿಯಾಗಿದ್ದು, ಮಲೆನಾಡಿನ ಹಲವೆಡೆ ಹಳ್ಳಗಳು ತುಂಬಿ ಹರಿಯುತ್ತಿವೆ. ನಿರಂತರ ಮಳೆಯಿಂದಾಗಿ ರಸ್ತೆಯಲ್ಲಿ ಜನರ ಓಡಾಟ ಇಳಿಮುಖವಾಗಿತ್ತು. ಚರಂಡಿಗಳು ಭರ್ತಿಯಾಗಿ ರಸ್ತೆಗಳ ಮೇಲೆ ನೀರು ಹರಿಯುತ್ತಿತ್ತು. ತಗ್ಗಿನ ಪ್ರದೇಶಗಳಲ್ಲಿ ಹಲವೆಡೆ ನೀರು ನಿಂತಿತ್ತು.
ಮೂಡಿಗೆರೆ, ಗೋಣಿಬೀಡು, ಚಾರ್ಮಾಡಿ ಘಾಟ್ ಸೇರಿದಂತೆ ಸುತ್ತಮುತ್ತ ಬಲವಾಗಿ ಗಾಳಿ ಬೀಸುತ್ತಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ- ಕಸಳ ರಸ್ತೆಯಲ್ಲಿರುವ ಸುಂಕಸಾಲೆ ಬಳಿ ಮಿನಿ ಬಸ್ ಹಾಗೂ ಬೈಕ್ ಮೇಲೆ ಬೃಹತ್ ಮರ ಬಿದ್ದಿದೆ. ಬೈಕ್ ಸವಾರನಿಗೆ ಗಾಯವಾಗಿದ್ದು, ಮಿನಿ ಬಸ್‌ನ ಮುಂಭಾಗ ಜಖಂಗೊಂಡಿದೆ. ಹೀಗಾಗಿ ಈ ಮಾರ್ಗದಲ್ಲಿ ವಾಹನಗಳು ಮಳೆಯಲ್ಲೇ ಗಂಟೆಗಟ್ಟಲೆ ನಿಂತಿದ್ದವು.ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಭಾರೀ ಮಳೆ ಬರುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ದಟ್ಟವಾದ ಮೋಡ, ನಿರಂತರವಾಗಿ ಬರುತ್ತಿರುವ ಮಳೆ ಮುಂಗಾರು ಮಳೆಯ ವಾತಾವರಣವನ್ನು ಸೃಷ್ಟಿ ಮಾಡಿದೆ. ಭದ್ರಾ ಹಾಗೂ ಹೇಮಾವತಿ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಶೃಂಗೇರಿ, ಕೆರೆಕಟ್ಟೆ, ನೆಮ್ಮಾರ್, ಕೊಪ್ಪ ತಾಲೂಕಿನ ಹರಿಹರಪುರ, ಜಯಪುರ, ಬಸರೀಕಟ್ಟೆ, ಎನ್.ಆರ್.ಪುರ, ಬಾಳೆಹೊನ್ನೂರು ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.
ಶೇ. 60 ರಷ್ಟು ಹೆಚ್ಚುವರಿ ಮಳೆ:ಕಳೆದ ವರ್ಷದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗಿತ್ತು. ಸದ್ಯದ ವಾತಾವರಣ ನೋಡಿದರೆ ಈ ವರ್ಷವೂ ನಿರೀಕ್ಷೆಗೂ ಮೀರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕಳೆದ ಜನವರಿ 1ರಿಂದ ಮೇ 20ರ ವರೆಗೆ ಜಿಲ್ಲೆಯ ಸರಾಸರಿ ವಾಡಿಕೆ ಮಳೆ 127.7 ಮಿ.ಮೀ., ಆದರೆ, ಈ ಅವಧಿಯಲ್ಲಿ ಬಿದ್ದಿರುವ ಮಳೆ 204.8 ಅಂದರೆ, ಶೇ. 60 ರಷ್ಟು ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯ ಎಲ್ಲಾ 9 ತಾಲೂಕುಗಳಲ್ಲೂ ಉತ್ತಮ ಮಳೆಯಾಗಿದೆ. ಪೂರ್ವ ಮುಂಗಾರಿನಲ್ಲಿ ಈ ಮಟ್ಟದಲ್ಲಿ ಜನರು ಮಳೆಯನ್ನು ನಿರೀಕ್ಷೆ ಮಾಡಿರಲಿಲ್ಲ. ಮಳೆಯಿಂದಾಗಿ ಕೆಲವೆಡೆ ಕೆರೆಗಳಲ್ಲಿ ನೀರು ತುಂಬಿದೆ. ಹಳ್ಳಗಳಲ್ಲೂ ನೀರು ಹರಿಯುತ್ತಿದೆ.ಸಾರ್ವಜನಿಕರು ಮುಂದಿನ ಎರಡು ದಿನಗಳು ಅಥವಾ ಮಳೆ ಕಡಿಮೆಯಾಗುವವರೆಗೆ ನದಿಗಳಿಗೆ ಅಥವಾ ತಗ್ಗು ಪ್ರದೇಶಗಳಿಗೆ ತೆರಳದಂತೆ ಕಟ್ಟೆಚ್ಚರ ವಹಿಸಬೇಕು. ಮಳೆಯಿಂದಾಗಿ ಧರೆ, ಗುಡ್ಡ ಕುಸಿತ ಉಂಟಾಗುವ ಸಂಭವವಿರುವುದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು.
ಮೀನಾ ನಾಗರಾಜ್, ಜಿಲ್ಲಾಧಿಕಾರಿ.