ಕನ್ನಡಪ್ರಭ ವಾರ್ತೆ, ತುರುವೇಕೆರೆ ವರ್ಷವಿಡೀ ಆದಾಯ ತರುವ ಹೆಬ್ಬಾಳ ಅವರೆ ಬೆಳೆದಲ್ಲಿ ರೈತರು ಸುಖೀಜೀವನ ನಡೆಸಬಹುದು ಎಂದು ಕೊನೆಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನಿ ಡಾ.ಪದ್ಮನಾಬ್ ಹೇಳಿದರು. ದೇವಿಹಳ್ಳಿಯಲ್ಲಿ ನಡೆದ ಅಡಿಕೆ ಬೆಳೆಯಲ್ಲಿ ಅಂತರ್ ಬೆಳೆಯಾಗಿ ಹೆಬ್ಬಾಳ ಅವರೆ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅವರೆ ಬೆಳೆ ಹೊಸದೇನಲ್ಲ, ಹಿಂಗಾರಿನಲ್ಲಿ ಬಿತ್ತನೆ ಬೆಳೆ ಅವರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಈ ಹೆಬ್ಬಾಳ ಅವರೆ ವರ್ಷದ ಎಲ್ಲಾ ಕಾಲಮಾನದಲ್ಲಿಯೂ ಬೆಳೆಯಬಹುದಾದ ಬೆಳೆಯಾಗಿದೆ. ಹೆಬ್ಬಾಳ ಅವರೆ ಹೆಚ್ಚಿನ ಇಳುವರಿ ಬರುವ ಬೆಳೆ ಬರುವುದು ಮಾತ್ರವಲ್ಲದೇ ಕೇವಲ ಮೂರು ತಿಂಗಳ ಅವಧಿಯಲ್ಲಿ ಉತ್ತಮ ಫಸಲು ನೀಡಲಾರಂಭಿಸುತ್ತದೆ. ಕಡಿಮೆ ನೀರನ್ನು ಬಳಕೆ ಮಾಡಿಕೊಂಡು ಬೆಳೆಯಬಹುದಾದ ಬೆಳೆ ಇದಾಗಿದೆ. ಮೂರು ತಿಂಗಳ ನಂತರ ಗಿಡವನ್ನು ಕಟಾವು ಮಾಡಿ ಕೊಳೆ ಗಿಡಕ್ಕೆ ನೀರು ಹಾಯಿಸಿದರೆ ಮತ್ತೆ ಚಿಗುರೊಡೆದು ಹೂಬಿಟ್ಟು ಅವರೆಕಾಯಿ ಬಿಡಲಾರಂಭಿಸುತ್ತದೆ. ಬೆಳವಣಿಗೆ ಹಂತದಲ್ಲಿರುವ ಅಡಿಕೆ ಬೆಳೆಯ ನಡುವೆ ಅವರೆ ಬೆಳೆಯುವುದು ರೈತರಿಗೆ ಅನುಕೂಲ ಎಂದು ಮಾಹಿತಿ ನೀಡಿದರು. ವಿಜ್ಞಾನಿ ಕೀರ್ತಿಶಂಕರ್ ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರಗಳು ಹೊಸ ಬೆಳೆ ಆವಿಷ್ಕರಿಸಿ ರೈತರಿಗೆ ಉಚಿತ ಬೀಜ ನೀಡಿ ಬೆಳೆಯಲು ಪ್ರೋತ್ಸಾಹಿಸುತ್ತಿವೆ, ರೈತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಪಡೆದು ಉತ್ತಮ ಬೆಳೆ ಬೆಳೆದು ಬೀಜಗಳನ್ನು ಸಂಸ್ಕರಿಸಿ ಆಸುಪಾಸಿನ ರೈತರಿಗೂ ಪರಿಚಯಿಸಬೇಕೆಂದು ಸಲಹೆ ನೀಡಿದರು. ಹೆಬ್ಬಾಳ ಅವರೆಯನ್ನು ಬೆಳೆದು ಯಶಸ್ವಿಯಾದ ರಾಜಕುಮಾರ್ ರುಕ್ಮಿಣಿ ದಂಪತಿಗೆ ದೇವಿಹಳ್ಳಿ ರೈತ ಶಕ್ತಿ ಗುಂಪಿನ ವತಿಯಿಂದ ಸನ್ಮಾನಿಸಲಾಯಿತು. ಸುವರ್ಣಭೂಮಿ ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷ ದೇವಿಹಳ್ಳಿ ಬಸವರಾಜು, ಪ್ರಗತಿಪರ ಕೃಷಿಕ ಕೊಪ್ಪ ನಾಗೇಶ್, ಮಾರುತಿ ರೈತ ಶಕ್ತಿ ಗುಂಪಿನ ಚಲುವೇಗೌಡ ಹಾಗೂ ದೇವಿಹಳ್ಳಿ ಆಸುಪಾಸಿನ ರೈತರು ಹಾಜರಿದ್ದರು. ೨೭ ಟಿವಿಕೆ ೧ - ತುರುವೇಕೆರೆ ತಾಲೂಕಿನ ದೇವಿಹಳ್ಳಿಯಲ್ಲಿ ಅಡಿಕೆ ಬೆಳೆಯಲ್ಲಿ ಅಂತರ್ ಬೆಳೆಯಾಗಿ ಹೆಬ್ಬಾಳ ಅವರೆ ಬೆಳೆ ಕ್ಷೇತ್ರೋತ್ಸವ ನಡೆಸಲಾಯಿತು.