ಬೆಂಗಳೂರು : ಲೋಕಸಭಾ ಚುನಾವಣೆಗೆ ಮೊದಲ ಹಂತದ ಮತದಾನಕ್ಕೂ ಮುನ್ನ ರಾಜಧಾನಿಯಲ್ಲಿ ಆದಾಯ ತೆರಿಗೆ ಇಲಾಖೆ (ಐಟಿ) ಭರ್ಜರಿ ಕಾರ್ಯಾಚರಣೆ ನಡೆಸಿದೆ. ಈ ದಾಳಿ ವೇಳೆ ಈ ಹಿಂದೆ ವಿಧಾನಸಭಾ ಚುನಾವಣೆ ಹೊತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಐಡಿಎಲ್) ಲಂಚ ಪ್ರಕರಣದ ಕುರಿತು ಮಹತ್ವದ ಸುಳಿವು ಲಭಿಸಿದೆ ಎಂಬ ಕುತೂಹಲಕಾರಿ ಸಂಗತಿ ಬೆಳಕಿಗೆ ಬಂದಿದೆ.
ಐಟಿ ಕಾರ್ಯಾಚರಣೆ ಬಗ್ಗೆ ಚುನಾವಣಾ ಆಯೋಗಕ್ಕೆ ವರದಿ ನೀಡಲಾಗಿದ್ದು, ಕಿಕ್‌ಬ್ಯಾಕ್ ಕೊಟ್ಟಿರುವುದಕ್ಕೆ ಡಿಜಿಟಲ್ ಸಾಕ್ಷ್ಯ ಪತ್ತೆಯಾಗಿದೆ ಎಂದು ಐಟಿ ಹೇಳಿದೆ. ಚುನಾವಣಾ ಅಕ್ರಮ ಕಾರ್ಯಾಚರಣೆ ವೇಳೆ ಒಟ್ಟು 22.5 ಕೋಟಿ ರು. ಅಕ್ರಮ ಹಣ ಪತ್ತೆಯಾಗಿದ್ದು, 6.5 ಕೋಟಿ ರು. ನಗದು ಮತ್ತು 16 ಕೋಟಿ ರು. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ನಿಗಮಕ್ಕೆ ರಾಸಾಯನಿಕ ಪೂರೈಕೆ ಗುತ್ತಿಗೆ ನೀಡಿಕೆ ಸಂಬಂಧ ಲಂಚ ಸ್ವೀಕರಿಸುವಾಗ ಆಗಿನ ಕೆಎಸ್‌ಐಡಿಎಲ್‌ನ ಅಧ್ಯಕ್ಷ ಹಾಗೂ ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಅವರ ಪುತ್ರ ಮತ್ತು ಜಲಮಂಡಳಿಯ ಆರ್ಥಿಕ ಅಧಿಕಾರಿ ಪ್ರಶಾಂತ್ ಮಾಡಾಳ್ ಸೇರಿದಂತೆ ಐವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಅಂದು ಸಂಜಯನಗರದಲ್ಲಿದ್ದ ಮಾಜಿ ಶಾಸಕರ ಮನೆ ಹಾಗೂ ಕುಮಾರಕೃಪ ಸಮೀಪದಲ್ಲಿದ್ದ ಅವರ ಪುತ್ರನ ಕಚೇರಿಯಲ್ಲಿ 2 ಕೋಟಿ ರು.ಗೂ ಅಧಿಕ ಹಣ ಜಪ್ತಿಯಾಗಿತ್ತು. ಈ ಪ್ರಕರಣದ ತನಿಖೆ ಲೋಕಾಯುಕ್ತ ಪೊಲೀಸರು ಮುಂದುವರೆಸಿದ್ದಾರೆ.
ಆದರೆ ಈ ಪ್ರಕರಣದ ಹಣಕಾಸು ವ್ಯವಹಾರದ ಮೇಲೆ ನಿಗಾವಹಿಸಿದ್ದ ಐಟಿ ಅಧಿಕಾರಿಗಳಿಗೆ ಈಗ ಲೋಕಸಭಾ ಚುನಾವಣೆ ಸಮರಕ್ಕೆ ಬಂಡವಾಳ ಹೂಡಿದವರ ಮಾಹಿತಿ ಸಿಕ್ಕಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಈ ಸುಳಿವು ಆಧರಿಸಿ ಕಪ್ಪು ಹಣದ ಶೋಧನೆಗಿಳಿದ ಐಟಿ ಅಧಿಕಾರಿಗಳಿಗೆ ಮತ್ತಷ್ಟು ಡಿಜಿಟಲ್ ಪುರಾವೆ ಸಿಕ್ಕಿದೆ. ಈ ಮಾಹಿತಿ ಲಭಿಸಿದ ಕೂಡಲೇ ಐಟಿ ಅಧಿಕಾರಿಗಳು, ಕೆಎಸ್‌ಐಡಿಎಲ್ ರಾಸಾಯನಿಕ ಪೂರೈಕೆದಾರರೂ ಆಗಿರುವ ಕೆಲ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಹೀಗೆ ದಾಳಿಗೊಳಗಾದ ಉದ್ಯಮಿಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೆಲೆಸಿದ್ದು, ಬೊಮ್ಮನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಂಪನಿ ಹೊಂದಿದ್ದರು ಎಂದು ತಿಳಿದು ಬಂದಿದೆ.
ಈ ಉದ್ಯಮಿಗಳ ಮನೆಯಲ್ಲಿ ಹಣ ಮಾತ್ರವಲ್ಲದೆ ಲಕ್ಷಾಂತರ ರು. ಮೌಲ್ಯದ ಚಿನ್ನಾಭರಣ ಸಹ ಪತ್ತೆಯಾಗಿದೆ. ಈ ಹಣ ಹಾಗೂ ಬಂಗಾರದ ಭಂಡಾರದ ಮೂಲದ ಪತ್ತೆ ಐಟಿ ತನಿಖೆ ಮುಂದುವರೆಸಿದ್ದು, ಕೆಲವು ಪ್ರಭಾವಿ ರಾಜಕಾರಣಿಗಳಿಗೆ ನಡುಕ ಹುಟ್ಟಿಸಿದೆ ಎನ್ನಲಾಗಿದೆ.