ಗೋಕರ್ಣ: ಗಂಗಾವಳಿ- ಮಂಜುಗುಣಿ ನಡುವಣ ಸಂಪರ್ಕ ಕಲ್ಪಿಸುವ ಗಂಗಾವಳಿ ಅಡ್ಡಲಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಇದುವರೆಗೂ ಪೂರ್ಣಗೊಂಡಿಲ್ಲ. ಇದು ಸರ್ಕಾರ ಮತ್ತು ಜಿಲ್ಲಾಡಳಿತದ ಈ ನಿರ್ಲಕ್ಷ್ಯಕ್ಕೆ ಇಲ್ಲಿನ ಗೋಕರ್ಣ, ಹನೇಹಳ್ಳಿ, ನಾಡುಮಾಸ್ಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದಿದ್ದಾರೆ.
ಈಗಾಗಲೇ ಹಲವು ಬಾರಿ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಲಾಗಿದ್ದು, ಜನರಿಗೆ ಕೊಟ್ಟ ಭರವಸೆ ಮಾತ್ರ ಹಾಗೆ ಉಳಿದಿದೆ. ಇದರಿಂದ ಬೇಸತ್ತ ಸಾರ್ವಜನಿಕರು ವಿವಿಧೆಡೆ ಸಭೆ ನಡೆಸುತ್ತಿದ್ದು, ಮತದಾನದಿಂದ ಹಿಂದೆ ಸರಿಯಲು ತಯಾರಿ ನಡೆಸಿದ್ದಾರೆ.ಆರು ವರ್ಷಗಳಿಂದ ಪ್ರವಾಸಿ ತಾಣ ಗೋಕರ್ಣ ಹಾಗೂ ಕುಮಟಾ ಹಾಗೂ ಅಂಕೋಲಾದ ವಿವಿಧ ಹಳ್ಳಿಗಳನ್ನು ಸಂಪರ್ಕ ಬೆಸೆಯುವ ಸೇತುವೆ ಕಾಮಗಾರಿ ಕುಂಟುತ್ತಾ ಸಾಗಿದ್ದು, ಕಳೆದ ವರ್ಷ ಸೇತುವೆ ಪೂರ್ಣಗೊಂಡರೂ ರಸ್ತೆ ನಿರ್ಮಿಸದೆ ಗುತ್ತಿಗೆ ಕಂಪನಿ ಸತಾಯಿಸುತ್ತಿದ್ದು, ಇದರಿಂದ ನಿತ್ಯ ಓಡಾಡುವ ಜನರು ತೊಂದರೆ ಅನುಭವಿಸುತ್ತಿದ್ದಾರೆ.
ಉಸ್ತುವಾರಿ ಸಚಿವರಿಂದ ಹಿಡಿದು ಎಲ್ಲ ಅಧಿಕಾರಿ ವರ್ಗಗಳವರೆಗೂ ಜನರ ತಮ್ಮ ಅಳಲನ್ನು ತೋಡಿಕೊಂಡರೂ ಪ್ರಯೋಜನವಾಗಿಲ್ಲ. ಇನ್ನು ಮಾರ್ಚ್ ತಿಂಗಳ ಒಳಗೆ ಸೇತುವೆ ಪೂರ್ಣಗೊಳಿಸಿ ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ ಎಂದು ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದರು. ಆದರೆ ಇವರ ಮಾತಿಗೆ ಕಿಮ್ಮತ್ತು ನೀಡದ ಗುತ್ತಿಗೆ ಕಂಪನಿ ಕೆಲಸ ಪ್ರಾರಂಭಿಸದೆ ಬಿಟ್ಟಿದ್ದಾರೆ.ನಿತ್ಯ ನೂರಾರು ಜನರು ಅರಬರೆ ಸೇತುವೆ ಮೇಲೆ ಜೀವಾಪಾಯದಿಂದ ಓಡಾಡುತ್ತಿದ್ದು, ಇವರ ತೊಂದರೆ ಕೇಳುವವರೆ ಇಲ್ಲವಾಗಿದ್ದು, ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳುತ್ತದೆಯೇ ಎಂಬುದು ಕಾದು ನೋಡಬೇಕಿದೆ.
ಪೂರ್ಣಗೊಳ್ಳುವುದು ಅನುಮಾನ: ಜನರ ಹೋರಾಟದ ಪರಿಣಾಮ ಅಪೂರ್ಣ ಸೇತುವೆ ಮೇಲೆ ಪಾದಾಚಾರಿಗಳಿಗೆ ಮತ್ತು ಬೈಕ್‌ನಲ್ಲಿ ತೆರಳಲು ಅವಕಾಶ ನೀಡಲಾಗಿದೆ. ಆದರೆ ಕೆಲಸ ಪೂರ್ಣಗೊಳಿಸಿ ಮಳೆಗಾಲದ ಒಳಗೆ ಎಲ್ಲ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕಿತ್ತು. ಈ ವರ್ಷವೂ ಸೇತುವೆ ಪೂರ್ಣಕೊಳ್ಳುವುದು ಅಸಾಧ್ಯವಾಗಿದೆ.ಕ್ರಮ ಕೈಗೊಳ್ಳುತ್ತಿಲ್ಲ: ಕಳೆದ 6 ವರ್ಷದಿಂದ ಪ್ರಾರಂಭವಾದ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ.ಈ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಮಂತ್ರಿಗಳವರೆಗೂ ಮನವಿ ಮಾಡಿದ್ದು, ಆದರೆ ಯಾವುದೇ ಪ್ರಯೋಜನವಿಲ್ಲ. ಇನ್ನು ಪ್ರತಿಭಟನೆ ಸಹ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಅದಕ್ಕಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗಂಗಾವಳಿಯ ಜಗದೀಶ್ ಅಂಬಿಗ ತಿಳಿಸಿದರು.ಕಳೆದ 6 ವರ್ಷದಿಂದ ಪ್ರಾರಂಭವಾದ ಸೇತುವೆ ಕಾಮಗಾರಿ ಇನ್ನೂ ಪೂರ್ಣಗೊಳಿಸಿಲ್ಲ.ಈ ಬಗ್ಗೆ ಸಂಬಂಧಿಸಿದ ಇಲಾಖೆ ಹಾಗೂ ಮಂತ್ರಿಗಳವರೆಗೂ ಮನವಿ ಮಾಡಿದ್ದು, ಆದರೆ ಯಾವುದೇ ಪ್ರಯೋಜನವಿಲ್ಲ. ಇನ್ನು ಪ್ರತಿಭಟನೆ ಸಹ ಮಾಡಿದರೂ ಕ್ರಮ ಕೈಗೊಳ್ಳುತ್ತಿಲ್ಲ. ಅದಕ್ಕಾಗಿಯೇ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಗಂಗಾವಳಿಯ ಜಗದೀಶ್ ಅಂಬಿಗ ತಿಳಿಸಿದರು.