ಕೊಟ್ಟೂರು: ಮೌಲ್ಯಯುತ ಶಿಕ್ಷಣದ ಜತೆಗೆ ಸಂಸ್ಕೃತಿ, ಸಂಸ್ಕಾರ ಉಳಿಸಿ ಬೆಳೆಸುವತ್ತ ಕಳೆದ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುರುದೇವ ವಿದ್ಯಾ ಪ್ರಸಾರ ಪರಿಷತ್‌ನಂತಹ ಸಾಧನೆ ನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಮಾದರಿಯಾಗಿದೆ ಎಂದು ಸಂಡೂರು ವಿಧಾನಸಭಾ ಸದಸ್ಯೆ ಇ. ಅನ್ನಪೂರ್ಣಾ ತುಕಾರಾಮ ಹೇಳಿದರು.
ಕಲಿಕೆಯ ಜತೆಗೆ ವಿದ್ಯಾರ್ಥಿಗಳು ನೈತಿಕ ಮೌಲ್ಯಯುತ ನಡವಳಿಕೆ ರೂಢಿಸಿಕೊಂಡರೆ ಭವಿಷ್ಯತ್ತಿನಲ್ಲಿ ಉತ್ತಮ ನಾಯಕತ್ವ ರೂಪಿಸಿಕೊಳ್ಳಬಹುದಾಗಿದೆ. ಈ ನಿಟ್ಟಿನತ್ತ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು ಎಂದರು.
ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಮಾತನಾಡಿ, ಒತ್ತಡರಹಿತ ಕಲಿಕೆಗೆ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕೆ ಹೊರತು ಹೆಚ್ಚು ಅಂಕ ಗಳಿಸುವುದೇ ಆದ್ಯತೆ ಆಗಬಾರದು ಎಂದರು.ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಿ. ಮರಿಸ್ವಾಮಿ, ಎಂ.ಎಂ.ಜೆ. ವಸುಧಾ, ಗುರುದೇವ ಸಂಸ್ಥೆಯ ಸೌಮ್ಯಾ ರವಿತೇಜ ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ, ಎಂ.ಜಿ. ರುದ್ರಯ್ಯ ಉಪಸ್ಥಿತರಿದ್ದರು.
ಮುಖ್ಯಗುರು ಪ್ರಕಾಶ ಕೋಡಿಹಳ್ಳಿ ಸ್ವಾಗತಿಸಿದರು. ಶಿಕ್ಷಕ ಹಾಲೇಶ ಪಿ. ವಂದಿಸಿದರು. ಪ್ರವೀಣ ಸಂಗಮ್ ಕಾರ್ಯಕ್ರಮ ನಿರೂಪಿಸಿದರು.