ಅಕ್ಷರ ದಾಸೋಹ ವೇತನ ಹೆಚ್ಚಿಸಿ: ಸೈಯ್ಯದ್ ಬೇಗಂ

KannadaprabhaNewsNetwork | Published : Feb 6, 2025 11:48 PM

ಸಾರಾಂಶ

Increase Akshara Dasoha Salary: Syed Begum

-ಸುರಪುರದಲ್ಲಿ ಅಕ್ಷರ ದಾಸೋಹ ನೌಕರರು ಕೇಂದ್ರ ಬಜೆಟ್ ದಹಿಸಿ ಆಕ್ರೋಶ

----

ಕನ್ನಡಪ್ರಭ ವಾರ್ತೆ ಸುರಪುರ

ಕೇಂದ್ರ ಸರ್ಕಾರ ಫೆಬ್ರವರಿಯಲ್ಲಿ ಬಜೆಟ್ ಮಂಡಿಸಿದ್ದು, ಕಾರ್ಪೊರೇಟ್ ಕಂಪನಿಗಳ ಪರವಾದ ಬಜೆಟ್ ಇದಾಗಿದ್ದು, ಕಾರ್ಮಿಕರನ್ನು ಸಂಪೂರ್ಣ ಕಡೆಗಣಿಸಿದೆ. ದೇಶದ ಪ್ರಗತಿಯಲ್ಲಿ ಕಾರ್ಮಿಕರ ಶ್ರಮ ಅಪಾರವಾದುದು. ಶ್ರೀಮಂತರ ಒಲೈಕೆಗಾಗಿ ಬಜೆಟ್ ಮಂಡಿಸಿದಂತಾಗಿದೆ ಎಂದು ಅಕ್ಷರ ದಾಸೋಹ ನೌಕರ ಸಂಘದ ತಾಲೂಕ ಅಧ್ಯಕ್ಷೆ ಸೈಯ್ಯದ್ ಬೇಗಂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಮಹಾತ್ಮಾಗಾಂಧೀಜಿ ವೃತ್ತದಲ್ಲಿ ಸಿಐಟಿಯು ನೇತೃತ್ವದಲ್ಲಿ ಕೇಂದ್ರ ಬಜೆಟ್ ಪ್ರತಿಯನ್ನು ದಹಿಸಿ ಮಾತನಾಡಿದ ಅವರು, ಬಹುತೇಕ ಸರ್ಕಾರಿ ಶಾಲೆಗಳಲ್ಲಿ ರೈತರು, ಕಾರ್ಮಿಕರು ಮತ್ತು ಕೃಷಿ ಕೂಲಿಕಾರರ ಮಕ್ಕಳು ಓದುತ್ತಿದ್ದಾರೆ. ಯೋಜನೆ ಜಾರಿಯಾದ ನಂತರ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಉತ್ತಮಗೊಂಡಿದೆ. ಆದರೆ, ಈಗ ಆ ಯೋಜನೆ ದುರ್ಬಲಗೊಳಿಸುವ ಮತ್ತು ಬಿಸಿಯೂಟ ನೌಕರರ ಉದ್ಯೋಗ ಕಿತ್ತುಕೊಳ್ಳುವ ವ್ಯವಸ್ಥಿತ ಪ್ರಯತ್ನ ನಡೆದಿದೆ ಎಂದು ವಿವರಿಸಿದರು.

ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳಕ್ಕೆ ಹಲವು ಬಾರಿ ಮನವಿ ಮಾಡಿದರೂ ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಬಡ ಮಕ್ಕಳಿಗೆ ಉಪಯುಕ್ತವಾಗುವ ಯೋಜನೆ ಉತ್ತೇಜಿಸಲು ಮತ್ತು ಸೌಲಭ್ಯಗಳನ್ನು ವಿಸ್ತರಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. 21 ವರ್ಷಗಳಿಂದ ಅಕ್ಷರ ದಾಸೋಹ ನೌಕರರು ಶಾಲೆಗಳಲ್ಲಿ ಅಡುಗೆ ತಯಾರಿಸುತ್ತಿದ್ದಾರೆ. ಅಡುಗೆ ಕೆಲಸದ ಜೊತೆ ಶಾಲೆಯಲ್ಲಿ ಸ್ವಚ್ಛತೆ, ಕೈತೋಟದ ನಿರ್ವಹಣೆ ಇತ್ಯಾದಿ ಕೆಲಸವನ್ನೂ ನಿರ್ವಹಿಸುತ್ತಿದ್ದಾರೆ. ಆದರೆ ಸರ್ಕಾರ ನೌಕರರಿಗೆ ಅಗತ್ಯ ಸವಲತ್ತು ಕಲ್ಪಿಸದೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಪ್ರತಿಭಟನೆ ನಿರತರು ಆರೋಪಿಸಿದರು.

2023ರ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಬಿಸಿಯೂಟ ನೌಕರರಿಗೆ ಒಂದು ಸಾವಿರ ಗೌರವಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ, ಈವರೆಗೆ ಅನುಷ್ಠಾನವಾಗಿಲ್ಲ. ವೇತನ ಹೆಚ್ಚಳವನ್ನೂ ಮಾಡಿಲ್ಲ. ಸೇವಾ ಭದ್ರತೆ ಸೇರಿದಂತೆ ಯಾವುದೇ ಸವಲತ್ತು ಕಲ್ಪಿಸಿಲ್ಲ ಎಂದು ದೂರಿದರು. ಈ ಕೂಡಲೇ ವೇತನವನ್ನು 12 ಸಾವಿರಕ್ಕೆ ಹೆಚ್ಚಿಸಬೇಕು. ಮಾರ್ಗಸೂಚಿಯಲ್ಲಿ ಕೆಲಸದ ಅವಧಿ ನಾಲ್ಕು ಗಂಟೆ ಇದ್ದು, ಅದನ್ನು 6 ಗಂಟೆ ಎಂದು ತಿದ್ದುಪಡಿ ಮಾಡಬೇಕು. ನಿವೃತ್ತಿಯಾದ ನೌಕರರಿಗೆ 1 ಲಕ್ಷ ನೀಡಬೇಕು. ಜಂಟಿ ಖಾತೆ ಜವಾಬ್ದಾರಿ ಈ ಹಿಂದಿನಂತೆ ಮುಖ್ಯ ಅಡುಗೆಯವರಿಗೆ ನೀಡಬೇಕು ಎಂದು ಆಗ್ರಹಿಸಿದರು. ಕೃಷಿ ಕೂಲಿ ಕಾರ್ಮಿಕ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನಧಾಫ್‌, ಅಕ್ಷರ ದಾಸೋಹ ಸಂಘದ ಗೌರವಾಧ್ಯಕ್ಷ ಪ್ರಕಾಶ ಆಲ್ದಾಳ, ಅಂಗನವಾಡಿ ನೌಕರರ ಸಂಘದ ಕಾರ್ಯದಶಿ ಸುರೇಖಾ ಎಸ್. ಕುಲಕರ್ಣಿ ಜಿಲ್ಲಾ ಕಾರ್ಮಿಕ ಮುಖಂಡ ನಿಂಗಣ್ಣ ನಾಟೇಕಾರ್, ಮಂಜುಳಾ ಕಲಿಕೇರಿ ದೇವಾಪುರ, ಸಿಐಟಿಯು ತಾಲೂಕು ಸಂಚಾಲಕ ಮಲ್ಲಯ್ಯ ಪೋಲಂಪಲ್ಲಿ, ಸೌಭಾಗ್ಯ ಮಾಲಗತ್ತಿ ಇದ್ದರು.

----

ಫೋಟೊ: 6ವೈಡಿಆರ್9: ಸುರಪುರ ನಗರದ ಗಾಂಧಿವೃತ್ತದಲ್ಲಿ ಸಿಐಟಿಯು ನೇತೃತ್ತದಲ್ಲಿ ಅಕ್ಷರ ದಾಸೋಹ ನೌಕರರು ಕೇಂದ್ರ ಬಜೆಟ್ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Share this article