ಮಕ್ಕಳ ಹಾಜರಾತಿ ಅಧಿಕಗೊಳಿಸಿ, ಗುಣಾತ್ಮಕ ಶಿಕ್ಷಣಕ್ಕೆ ಪ್ರಥಮಾದ್ಯತೆ ಇರಲಿ-ಮಧು ಬಂಗಾರಪ್ಪ

KannadaprabhaNewsNetwork |  
Published : Jul 09, 2025, 12:18 AM IST
ಸಭೆಯಲ್ಲಿ ಸಚಿವ ಎಸ್.ಮಧು ಬಂಗಾರಪ್ಪ ಮಾತನಾಡಿದರು. | Kannada Prabha

ಸಾರಾಂಶ

ಶಿಕ್ಷಣ ಇಲಾಖೆಯಲ್ಲಿ ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.

ಗದಗ: ಶಿಕ್ಷಣ ಇಲಾಖೆಯಲ್ಲಿ ಕಳೆದ ಬಾರಿಗಿಂತ ಹಾಜರಾತಿ ಕಡಿಮೆ ಇದ್ದ ಶಾಲೆಗಳ ಬಗ್ಗೆ ಗಮನ ವಹಿಸಿ ಮಕ್ಕಳನ್ನು ಶಾಲೆಗೆ ಕರೆತಂದು ಗುಣಾತ್ಮಕ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದರು.ನಗರದ ಜಿಪಂ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಯಲ್ಲಿ ಶೇ. 97 ಪ್ರತಿಶತ ಮಕ್ಕಳ ಹಾಜರಾತಿ ಕಡ್ಡಾಯ ಇರುವಂತೆ ಶಿಕ್ಷಕರು ಮುತುವರ್ಜಿ ವಹಿಸಬೇಕು ಎಂದರು.

ವಸತಿ ಶಾಲೆ, ವಸತಿ ಮತ್ತು ಶೈಕ್ಷಣಿಕ ಕೊಠಡಿ ಒಂದೇ ಆಗಿದ್ದು, ಮೂಲ ಭೂತ ಸೌಕರ್ಯ ಇಲ್ಲದಿರುವ ಶಾಲೆಗಳ ಬಗ್ಗೆ ನನ್ನ ಗಮನಕ್ಕೆ ತರಬೇಕು ಎಂದರು.

ಗೊಜನೂರು ಕಸ್ತೂರಿ ಬಾ ವಸತಿ ಶಾಲೆ ಸಮಸ್ಯೆ ಬಗ್ಗೆ ಗಂಭೀರ ಚರ್ಚೆ ಜರುಗಿತು. ಈ ಬಗ್ಗೆ ಬೆಂಗಳೂರಿನಲ್ಲಿ ಗುರುವಾರ ಸಭೆ ನಡೆಸಿ ಅಗತ್ಯ ಸೌಲಭ್ಯ ಒದಗಿಸಿ ಕೊಡಲಾಗುವುದು. ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬನ್ನಿ ಎಂದು ಡಿಡಿಪಿಐ ಅವರಿಗೆ ಶಿಕ್ಷಣ ಸಚಿವ ಬಂಗಾರಪ್ಪ ಸೂಚಿಸಿದರು.ರಾಜ್ಯದಲ್ಲಿ ಸರ್ಕಾರದಿಂದ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ಕಳೆದ ವರ್ಷ ಕಲ್ಯಾಣ ಕರ್ನಾಟಕದಲ್ಲಿ ಆರಂಭಿಸಲಾಗಿತ್ತು. ಈ ಬಾರಿ ರಾಜ್ಯದ ಉಳಿದ ಭಾಗಗಳಲ್ಲಿ 4000 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲಾಗುತ್ತಿದೆ. ಗದಗ ಜಿಲ್ಲೆಯಲ್ಲಿ 65 ಎಲ್.ಕೆ.ಜಿ, ಯುಕೆಜಿ ಅನುಮೋದನೆ ನೀಡಲಾಗಿತ್ತು. ಇನ್ನೂ ಹೆಚ್ಚಿನ ಎಲ್.ಕೆ.ಜಿ, ಯುಕೆಜಿಗೆ ಅನುಮೋದನೆ ನೀಡಲಾಗುವುದು ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಗದಗ ನಗರದಲ್ಲಿ ಕಳೆದ ಬಾರಿಯ ದಾಖಲಾತಿಗಿಂತ 700ಕ್ಕೂ ಅಧಿಕ ಮಕ್ಕಳ ಪ್ರವೇಶ ಆಗುವುದು ಬಾಕಿ ಇದೆ. ಶಿರಹಟ್ಟಿ ತಾಲೂಕಿನಲ್ಲೂ ಕಳೆದ ಬಾರಿಗಿಂತ 1300ಕ್ಕೂ ಹೆಚ್ಚು 1ನೇ ತರಗತಿಗೆ ಪ್ರವೇಶ ಬಾಕಿ ಇದೆ. ಅದೇ ರೀತಿ ರೋಣ, ಮುಂಡರಗಿಯಲ್ಲಿ ಇದೇ ಪರಿಸ್ಥಿತಿ ಇದೆ. ಜುಲೈ ತಿಂಗಳೊಳಗಾಗಿ ಪ್ರವೇಶ ಪ್ರಕ್ರಿಯೆ ಅಧಿಕಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.ಶಿರಹಟ್ಟಿ ಶಾಸಕ ಚಂದ್ರು ಲಮಾಣಿ ಮಾತನಾಡಿ, ಆದ್ರಳ್ಳಿಯಲ್ಲಿರುವ ಶಾಲೆಯಲ್ಲಿ 650ಕ್ಕೂ ಹೆಚ್ಚು ಅಧಿಕ ಮಕ್ಕಳು ದಾಖಲಾತಿಯಿದೆ. ಆದಕಾರಣ ಆ ಶಾಲೆಯನ್ನು ಕೆಪಿಎಸ್ (ಕರ್ನಾಟಕ ಪಬ್ಲಿಕ ಶಾಲೆಯನ್ನಾಗಿ) ಮಾಡಬೇಕು ಎಂದು ಸಚಿವರ ಗಮನಕ್ಕೆ ತಂದರು.

ರೋಣ ಶಾಸಕ ಜಿ.ಎಸ್.ಪಾಟೀಲ ಮಾತನಾಡಿ, ದ್ವಿಭಾಷಾ ನೀತಿ ಸ್ವಾಗತಾರ್ಹವಾಗಿದೆ. ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದೊಂದು ಸರ್ಕಾರದ ಉತ್ತಮ ನಿರ್ಧಾರವಾಗಿದೆ ಎಂದರು.ವಿಪ ಶಾಸಕ ಎಸ್.ವಿ.ಸಂಕನೂರ ಮಾತನಾಡಿ, ಕಳೆದ ವಾರ ದೀಯುದಮನ್ ದ್ವೀಪಕ್ಕೆ ತೆರಳಿದಾಗ ಒಂದೇ ಸರ್ಕಾರಿ ಶಾಲೆಯಲ್ಲಿ 12000 ಕ್ಕೂ ಅಧಿಕ ವಿದ್ಯಾರ್ಥಿಗಳಿರುವುದು ಗಮನಿಸಲಾಗಿದೆ. ಅಲ್ಲಿರುವ ಮೂಲಭೂತ ಸೌಕರ್ಯ, ವ್ಯವಸ್ಥೆ ಉತ್ತಮವಾಗಿತ್ತು. ಅದರಂತೆ ರಾಜ್ಯದಲ್ಲಿ ಹೆಚ್ಚು ಮಕ್ಕಳಿರುವ ಶಾಲೆಗಳಲ್ಲಿ ಹೆಚ್ಚಿನ ಒತ್ತು ನೀಡುವಂತಾಗಲಿ ಎಂದರು.ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಬುರುಡಿ ಮಾತನಾಡಿ, 2025-26ನೇ ಸಾಲಿಗೆ ಜಿಲ್ಲೆಯಲ್ಲಿ ಒಟ್ಟು 1,120 ಶಾಲೆಗಳಿವೆ. ಆ ಪೈಕಿ 698 ಶಿಕ್ಷಣ ಇಲಾಖೆಯ, 22 ಸಮಾಜ ಕಲ್ಯಾಣ ಇಲಾಖೆ, 2 ಸ್ಥಳೀಯ ಸಂಸ್ಥೆ, 148 ಅನುದಾನಿತ, 242 ಅನುದಾನ ರಹಿತ, 7 ಇತರೆ ಸರಕಾರಿ, 1 ಕೇಂದ್ರ ಸರಕಾರದ ಶಾಲೆ ಹೀಗೆ ಒಟ್ಟು 1,120 ಶಾಲೆಗಳಿವೆ. 5-7-2025 ಕ್ಕೆ ಇದ್ದಂತೆ ಒಟ್ಟು 167255 ಮಕ್ಕಳು ದಾಖಲಾಗಿವೆ. ಜಿಲ್ಲೆಯಲ್ಲಿರುವ ಕೆಪಿಎಸ್ ಶಾಲೆಗಳಲ್ಲಿ 2681 ಮಕ್ಕಳ ದಾಖಲಾತಿ ಇದೆ ಸಭೆಗೆ ಮಾಹಿತಿ ಒದಗಿಸಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಜಿಪಂ ಸಿಇಓ ಭರತ ಎಸ್., ಅಪರ ಆಯುಕ್ತೆ ಜಯಶ್ರೀ ಶಿಂತ್ರಿ ಸೇರಿದಂತೆ ಶಿಕ್ಷಣ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು