ಕೋಟಿಗಟ್ಟಲೆ ಆದಾಯ ತರುವ ರೈಲ್ವೆ ನಿಲ್ದಾಣದಲ್ಲಿ ಸೌಕರ್ಯ ಹೆಚ್ಚಿಸಿ

KannadaprabhaNewsNetwork | Published : May 19, 2024 1:51 AM

ಸಾರಾಂಶ

ರೈಲ್ವೆ ಇಲಾಖೆಗೆ ಮಾಸಿಕ ಸುಮಾರು ಕನಿಷ್ಠ ₹2.5 ಕೋಟಿ ಆದಾಯ ತರುವ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಇಲಾಖೆಯ ಮೈಸೂರು ವಿಭಾಗಕ್ಕೆ ಒತ್ತಾಯಿಸಿದೆ.

- ಇಲಾಖೆ ಮೈಸೂರು ವಿಭಾಗಕ್ಕೆ ಪತ್ರ ಬರೆದು ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ ಒತ್ತಾಯ - - - * ಆಗ್ರಹಗಳೇನು? - ಮಾಸಿಕ ₹2.5 ಕೋಟಿ ಆದಾಯ ತರುವ ನಿಲ್ದಾಣ ಕಡೆಗಣನೆ ಬೇಡ

- ಅಂಗವಿಕಲ, ಹಿರಿಯರಿಗಾಗಿ ಬ್ಯಾಟರಿ ಚಾಲಿತ ಕಾರು ವ್ಯವಸ್ಥೆ ಮಾಡಿ - ಎಕ್ಸ್‌ಪ್ರೆಸ್ ರೈಲು 5 ನಿಮಿಷ, ಪ್ಯಾಸೆಂಜರ್ 10 ನಿಮಿಷ ನಿಲ್ಲಿಸಬೇಕು

- ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ಮಾರ್ಗ ಬೇಗ ಮುಗಿಸಿ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ರೈಲ್ವೆ ಇಲಾಖೆಗೆ ಮಾಸಿಕ ಸುಮಾರು ಕನಿಷ್ಠ ₹2.5 ಕೋಟಿ ಆದಾಯ ತರುವ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಮತ್ತಷ್ಟು ಹೆಚ್ಚಿಸುವಂತೆ ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘವು ಇಲಾಖೆಯ ಮೈಸೂರು ವಿಭಾಗಕ್ಕೆ ಒತ್ತಾಯಿಸಿದೆ.

ಈ ನಿಲ್ದಾಣದಲ್ಲಿ ನಿತ್ಯವೂ 35ಕ್ಕೂ ಹೆಚ್ಚು ಎಕ್ಸ್‌ಪ್ರೆಸ್‌ ರೈಲುಗಳು, ಪ್ಯಾಸೆಂಜರ್ ರೈಲುಗಳು, ಸುಮಾರು 20ಕ್ಕೂ ಹೆಚ್ಚು ಗೂಡ್ಸ್ ರೈಲುಗಳ ಸಂಚಾರವಿದೆ. ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗದಲ್ಲಿ 2ನೇ ಅತಿ ಹೆಚ್ಚು ಆದಾಯವನ್ನು ರೈಲ್ವೆ ಇಲಾಖೆಗೆ ನೀಡುವ ನಿಲ್ದಾಣವೆಂದು ದಾವಣಗೆರೆ ರೈಲ್ವೆ ನಿಲ್ದಾಣ ಗುರುತಿಸಿಕೊಂಡಿದೆ. ಇಂಥ ನಿಲ್ದಾಣದಲ್ಲಿ ಮೂಲ ಸೌಕರ್ಯಗಳನ್ನು ಇನ್ನಷ್ಟು ಹೆಚ್ಚಿಸುವಂತೆ ಸಂಘದ ಕಾರ್ಯದರ್ಶಿ ರೋಹಿತ್ ಎಸ್. ಜೈನ್‌ ಇಲಾಖೆಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

ರೈಲು ಸಂಚಾರದ ಸಂಖ್ಯೆ, ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ನಿಲ್ದಾಣದಲ್ಲಿ ಮೂಲ ಸೌಕರ್ಯ ಅಷ್ಟಾಗಿ ಇಲ್ಲ. ನಿಲ್ದಾಣದಲ್ಲಿ ತುರ್ತಾಗಿ ಟ್ರೋಲಿ ಪಾಥ್‌, ವಿಶೇಷಚೇತನರು, ಹಿರಿಯ ನಾಗರಿಕರಿಗೆ ನಿಲ್ದಾಣದ ಮುಖ್ಯ ದ್ವಾರದಿಂದ ರೈಲ್ವೆ ಕೋಟ್ ಮುಟ್ಟಲು ಅನುಕೂಲವಾಗುವಂತೆ ಬ್ಯಾಟರಿ ಚಾಲಿತ ಕಾರಿನ ವ್ಯವಸ್ಥೆ ಮಾಡಬೇಕು. ನಿಲ್ದಾಣದ ಫ್ಲಾಟ್ ಫಾರಂ ಮೇಲೆ ವಿಕಲಚೇತನರು ತಾವು ಹತ್ತಬೇಕಾದ ಕೋಚ್ ತಲುಪಲು ಇದರಿಂದ ಅನುಕೂಲ ಆಗುತ್ತದೆ ಎಂದು ಹೇಳಿದ್ದಾರೆ.

ಮುಖ್ಯವಾಗಿ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಕೈಗೆಟುಕುವ ಬೆಲೆಯಲ್ಲಿ ಶುಚಿ ಮತ್ತು ರುಚಿಯಾದ ತಿಂಡಿ, ಊಟ, ತಿನಿಸುಗಳನ್ನು ಪೂರೈಸುವ ಕ್ಯಾಂಟೀನನ್ನು 2ನೇ ಫ್ಲಾಟ್ ಫಾರಂನಲ್ಲಿ ಸ್ಥಾಪಿಸಬೇಕು. ನಿಲ್ದಾಣದ ಆವರಣದ ಸೆಲ್ಫಿ ಪಾಯಿಂಟ್ ಮತ್ತು ಗಾರ್ಡನ್ ಅಭಿವೃದ್ಧಿಪಡಿಸಿ, ಮೂಲಸೌಕರ್ಯ ಕಲ್ಪಿಸಬೇಕು. ಇಡೀ ನಿಲ್ದಾಣದ ಪ್ರವೇಶ ಸ್ಥಳದ ಅಂಗಳ ಸಿಮೆಂಟ್ ಮಯವಾಗಿದೆ. ಕಣ್ಣಿಗೆ ತಂಪಾಗುವಂತೆ, ಆಕರ್ಷಕ ಗಿಡಗಳು, ಹೂವಿನ ಗಿಡಗಳು, ಅಲಂಕಾರಿಕ ಗಿಡಗಳು, ಬಳ್ಳಿಗಳನ್ನು ಬೆಳೆಸಲು ಮುಂದಾಗಬೇಕು ಎಂದು ತಿಳಿಸಿದ್ದಾರೆ.

ನಿತ್ಯವೂ ಬೆಳಗ್ಗೆ ವೇಳೆ ಬೆಂಗಳೂರು ಕಡೆ ಹೋಗುವ ರೈಲುಗಳ ಟಿಕೆಟ್ ಪಡೆಯಲು ಪ್ರಯಾಣಿಕರ ದಟ್ಟಣೆ ಯಥೇಚ್ಛವಾಗಿ ಇರುತ್ತದೆ. ಹರಸಾಹಸ ಮಾಡಿ, ಟಿಕೆಟ್ ಪಡೆಯಬೇಕಾದ ಪರಿಸ್ಥಿತಿ ಇಲ್ಲಿದೆ. ರೈಲ್ವೆ ಇಲಾಖೆಯು ಇಂಟರ್ ಸಿಟಿ ಮತ್ತು ಪ್ಯಾಸೆಂಜರ್ ರೈಲುಗಳು ಬರುವ ವೇಳೆ ಪ್ರಯಾಣಿಕರ ಅನುಕೂಲಕ್ಕಾಗಿ ಹೆಚ್ಚಿನ ಕೌಂಟರ್‌ಗಳನ್ನು ಸ್ಥಾಪಿಸಿ, ಟಿಕೆಟ್ ನೀಡುವ ವ್ಯವಸ್ಥೆ ಮಾಡಬೇಕು. ಇಡೀ ನಿಲ್ದಾಣದಲ್ಲಿ ಸಮರ್ಪಕವಾಗಿ ಬೆಂಚ್‌ಗಳ ವ್ಯವಸ್ಥೆ ಇಲ್ಲ. ಇದ್ದರೂ ಬಹುತೇಕ ಪ್ರಯಾಣಿಕರು ನಿಂತುಕೊಳ್ಳುವ ಸ್ಥಿತಿ ಇದೆ. ನಿಲ್ದಾಣದಲ್ಲಿ ಪ್ರಯಾಣಿಕರು ಕುಳಿತು ಕೊಳ್ಳಲು ಹೆಚ್ಚಿನ ಬೆಂಚಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ದಾವಣಗೆರೆಗೆ ಬಂದು, ಹೋಗುವ ಎಕ್ಸ್‌ಪ್ರೆಸ್ ರೈಲುಗಳ ನಿಲುಗಡೆ ಅವಧಿ 5 ನಿಮಿಷಕ್ಕೆ, ಪ್ಯಾಸೆಂಜರ್ ರೈಲುಗಳ ನಿಲುಗಡೆ ಸಮಯ 10 ನಿಮಿಷಕ್ಕೆ ಹೆಚ್ಚಿಸಬೇಕು. ಬೆಂಗಳೂರು-ಗಾಂಧಿಧಾಮ್ ರೈಲನ್ನು ಭುಜ್‌ವರೆಗೂ ವಿಸ್ತರಿಸಬೇಕು. ಇದೇ ರೈಲನ್ನು ವಾರಕ್ಕೆ 3 ಸಲ ಸಂಚರಿಸಲು ಅನುವು ಮಾಡಿಕೊಡಬೇಕು. ಹುಬ್ಬಳ್ಳಿ-ಕೊಚುವೆಲಿ ರೈಲನ್ನು ವಾರದಲ್ಲಿ 3 ಸಲ ಸಂಚರಿಸುವಂತೆ ಮಾಡೇಕು. ಬೆಂಗಳೂರು-ವೈಷ್ಣೋದೇವಿ (ಕತ್ರ)- ಹುಬ್ಬಳ್ಳಿ ಮಾರ್ಗವಾಗಿ ಸಾಧಾರಣ ರೈಲನ್ನು ಹೊಸದಾಗಿ ಬಿಡಬೇಕು. ಬೆಂಗಳೂರು- ಅಯೋಧ್ಯೆಗೆ ಹುಬ್ಬಳ್ಳಿ ಮಾರ್ಗವಾಗಿ ರೈಲು ಓಡಿಸಬೇಕು ಎಂದಿದ್ದಾರೆ.

ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲು ಮಾರ್ಗವು ಬೆಂಗಳೂರು-ದಾವಣಗೆರೆ ಸೇರಿದಂತೆ ಉತ್ತರ ಕರ್ನಾಟಕದ ಮಧ್ಯೆ 65 ಕಿಮೀ ಅಂತರ ಕಡಿಮೆ ಮಾಡುತ್ತದೆ. ಆದಷ್ಟು ಬೇಗನೆ ಈ ಯೋಜನೆ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಬೇಕು. ರೈಲ್ವೆ ಹಳಿ ಜೋಡಣೆ ಕಾಮಗಾರಿ ಕೈಗೊಳ್ಳಬೇಕು. ಹೊಸ ಮಾರ್ಗದ ಕಾಮಗಾರಿ ಸಮರೋಪಾದಿಯಲ್ಲಿ ಆಗಿ, ನೇರ ಮಾರ್ಗದಲ್ಲಿ ರೈಲು ಸಂಚಾರವಾದರೆ ದಾವಣರೆ- ಬೆಂಗಳೂರು ಅಂತರ 65 ಕಿಮೀ ಕಡಿಮೆಯಾಗಿ, ಜನರ ಅಮೂಲ್ಯ ಸಮಯ, ಇಂಧನ- ವಿದ್ಯುತ್‌- ಹಣ- ಸಮಯ ಎಲ್ಲವೂ ಉಳಿದು, ಹೊಸ ನಿಲ್ದಾಣಗಳೂ ತಲೆ ಎತ್ತಲು ಆಸರೆ ಆಗುತ್ತದೆ ಎಂದು ತಿಳಿಸಿದ್ದಾರೆ.

- - -

ಕೋಟ್‌ ದಾವಣಗೆರೆ ರೈಲ್ವೆ ನಿಲ್ದಾಣದಲ್ಲಿ ಪ್ರಿಪೇಯ್ಡ್ ಆಟೋ ಕೌಂಟರ್ ಇದೆ. ಆದರೆ, ಅಲ್ಲಿ ಅದು ಕಾರ್ಯರೂಪಕ್ಕೆ ಬಂದಿಲ್ಲ. ಆದಷ್ಟು ಬೇಗನೆ ಪ್ರಯಾಣಿಕರ ಅನುಕೂಲಕ್ಕಾಗಿ ಈ ವ್ಯವಸ್ಥೆ ಆರಂಭಿಸಬೇಕು. ಈ ಬಗ್ಗೆ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಅಧಿಕಾರಿಗಳು ಪ್ರಥಮಾದ್ಯತೆ ಮೇಲೆ ಕ್ರಮ ಕೈಗೊಳ್ಳಲಿ

- ರೋಹಿತ್ ಎಸ್.ಜೈನ್‌, ಕಾರ್ಯದರ್ಶಿ, ನೈರುತ್ಯ ರೈಲ್ವೆ ವಲಯ ಪ್ರಯಾಣಿಕರ ಸಂಘ, ದಾವಣಗೆರೆ

- - - -18ಕೆಡಿವಿಜಿ1, 2: ದಾವಣಗೆರೆ ರೈಲ್ವೆ ನಿಲ್ದಾಣದ ಸಂಗ್ರಹ ಚಿತ್ರ.

-ರೈಲ್‌ (ಸಾಂದರ್ಭಿಕ ಚಿತ್ರ)

Share this article