ಕುಮಟಾ: ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದಂತೆ ಪ್ರವಾಹ ಸಂದರ್ಭದಲ್ಲಿ ಹಾನಿ ಪರಿಹಾರಕ್ಕೆ ನಿಗದಿಪಡಿಸಲಾದ ಮೊತ್ತವನ್ನೇ ಸಂತ್ರಸ್ತರಿಗೆ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶ ಮಾಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಸಂಸದನಾದ ತಕ್ಷಣ ಕಾಂಗ್ರೆಸ್ ಸರ್ಕಾರಕ್ಕೆ ಪತ್ರ ಬರೆದಿದ್ದೆ, ಹಿಂದೆ ಬಿಜೆಪಿ ಸರ್ಕಾರದಲ್ಲಿ ಮನೆಗೆ ಪ್ರವಾಹದ ನೀರು ನುಗ್ಗಿದರೆ ₹೧೦ ಸಾವಿರ ಮತ್ತು ಮನೆ ಸಂಪೂರ್ಣ ಹಾನಿಗೆ ₹೫ ಲಕ್ಷ ಕೊಡುತ್ತಿದ್ದರು. ಆ ಆದೇಶದ ಅವಧಿ ಮುಗಿದಿದೆ. ಇಂದಿನ ಸರ್ಕಾರ ಮತ್ತೆ ಆದೇಶ ಮಾಡಿಲ್ಲ. ಆದೇಶ ಪರಿಷ್ಕರಿಸಿ ಪುನಃ ಜಾರಿಗೆ ತಂದು ಮೊದಲಿನಂತೆ ಹೆಚ್ಚಿನ ಪರಿಹಾರ ಸಂತ್ರಸ್ತರಿಗೆ ಸಿಗಬೇಕು. ಈ ಬಗ್ಗೆ ಮುಖ್ಯ ಕಾರ್ಯದರ್ಶಿಯವರ ಜತೆಯೂ ಮಾತನಾಡಿದ್ದೇನೆ. ಈಗಿನ ಸರ್ಕಾರ ನೀಡುವ ಪರಿಹಾರ ತೀರಾ ಅಲ್ಪ ಮೊತ್ತದ್ದಾಗಿದೆ. ಜನತೆ ಕಷ್ಟಕ್ಕೆ ಸ್ಪಂದಿಸಲು ಸಾಧ್ಯವಿಲ್ಲ. ಆದ್ದರಿಂದ ಸಿಎಂ ಸಿದ್ದರಾಮಯ್ಯ ಅವರು ಆದೇಶ ಮಾಡಿ ಪರಿಹಾರ ಹೆಚ್ಚು ಕೊಡುವಂತಾಗಬೇಕು ಎಂದು ಆಗ್ರಹಿಸುತ್ತೇನೆ ಎಂದರು.ದುರಂತ ನಡೆದ ಕೆಲವೇ ಗಂಟೆಗಳಲ್ಲಿ ನಾನು ಆ ಸ್ಥಳದಲ್ಲಿದ್ದೆ. ಘಟನೆಯ ಭೀಕರತೆ ನೋಡಿದ್ದೇನೆ. ಇಂದು (ಶನಿವಾರ) ಪುನಃ ಶಿರೂರು ಗುಡ್ಡ ಕುಸಿತದ ದುರ್ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಕುಮಟಾಕ್ಕೆ ಬಂದಿದ್ದೇನೆ. ಅಲ್ಲಿ ದುರ್ಘಟನೆ ನಡೆದುಹೋಗಿದೆ. ಈ ಸಂದರ್ಭದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಮಾನವೀಯ ಸ್ಪಂದನ ನೀಡಬೇಕಾದ ಅಗತ್ಯವಿದೆ ಎಂದರು.
ಕಳೆದ ೧೨ ದಿನದಲ್ಲಿ ಮಾನವೀಯ ಸ್ಪಂದನ, ಸಹಾಯ, ಸಹಕಾರ ನೀಡಿದ್ದಾರೆ. ೮ ಜನರ ಮೃತದೇಹ ದೊರೆತಿದ್ದು ಇನ್ನೂ ೩ ಜನರ ಹುಡುಕಾಟ ನಡೆದಿದೆ. ಹುಡುಕುವ ವಿಷಯದಲ್ಲಿ ಕೇಂದ್ರದಿಂದ ಪ್ರಧಾನ ಮಂತ್ರಿಗಳು, ಸಚಿವ ಅಮಿತ್ ಶಾ ಅವರು ನಮ್ಮ ಕೋರಿಕೆಗೆ ಮನ್ನಿಸಿ ಅಗತ್ಯವಿರುವ ಸೇನೆಯ ತಂಡವನ್ನು ಕಳುಹಿಸಿಕೊಟ್ಟಿದ್ದಾರೆ. ಉಳಿದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನೌಕಾದಳ ಇನ್ನಿತರ ಎಲ್ಲ ರಕ್ಷಣಾ ತಂಡಗಳು ಕೂಡಾ ಕೇಂದ್ರ ಸರ್ಕಾರದ ಭಾಗವಾಗಿ ನಿರಂತರ ಕೆಲಸ ಮಾಡುತ್ತಾ ನಾಪತ್ತೆಯಾದವರ ಹುಡುಕಾಟದಲ್ಲಿದ್ದಾರೆ ಎಂದರು.ಘಟನಾ ವ್ಯಾಪ್ತಿಯಲ್ಲಿ ಗಂಗಾವಳಿ ಹೊಳೆಯಲ್ಲಿ ಮಣ್ಣು ತುಂಬಿಕೊಂಡಿದೆ. ಮಣ್ಣಿನ ರಾಶಿಯೊಳಗೆ ಲಾರಿ ಇರಬಹುದು ಎಂದು ಉಪಗ್ರಹ ಆಧರಿತ ಮಾಹಿತಿ ಇದೆ. ಲಾರಿ ಮೇಲೆ ೨೦ ಅಡಿ ಮಣ್ಣು, ಅದರೆ ಮೇಲೆ ನೀರು ವೇಗವಾಗಿ ಹರಿಯುತ್ತಿರುವುದರಿಂದ ಅಪಾಯ ಮತ್ತು ಕಷ್ಟದ ನಡುವೆಯೇ ಹುಡುಕಾಟ ನಡೆದಿದೆ. ಕಾರ್ಯಾಚರಣೆಯಲ್ಲಿರುವ ಎಲ್ಲರೂ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವುದು ಪ್ರಶಂಸನೀಯ. ಉಳುವರೆಯಲ್ಲೂ ಸಂತ್ರಸ್ತರಿಗಾಗಿ ಕಾಳಜಿ ಕೇಂದ್ರ ಅಚ್ಚುಕಟ್ಟಾಗಿ ನಡೆದಿದೆ. ಅಲ್ಲಿಯೂ ಮೃತರ ಕುಟುಂಬದ ಜತೆ ಸಾಂತ್ವನ, ಸ್ಪಂದನ ಇದೆ ಎಂದರು.
ಈಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಪುನಃ ವಾಹನ ಓಡಾಡುವುದಕ್ಕೆ ವ್ಯವಸ್ಥೆ ಮಾಡಬೇಕಿದೆ. ಉಳುವರೆ ಭಾಗದ ಜನರ ಸಮಸ್ಯೆಗೆ ಶಾಶ್ವತ ಪರಿಹಾರ, ಸವಾಲುಗಳು ಹಿಂದೆಯೂ ಇತ್ತು. ಈಗ ಮುಂದುವರಿದಿದೆ. ಘಟನೆಯ ಹಿನ್ನೆಲೆ, ಕಾರಣ, ಆರೋಪಗಳು ಇತ್ಯಾದಿ ಹಲವಾರು ಮಾತುಗಳು ಬರುತ್ತವೆ. ಆದರೆ ಸದ್ಯಕ್ಕೆ ಮಾಡಲೇಬೇಕಾದ ಕೆಲಸ ಕಾರ್ಯಗಳ ಬಗ್ಗೆ ಗಮನಹರಿಸಿ ಅಧಿಕಾರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮಗಳನ್ನು ಸೂಚಿಸಿದ್ದೇನೆ. ಈಶ್ವರ ಮಲ್ಪೆ ತಂಡ ಬಂದಿದೆ. ಕಾರ್ಯಾಚರಣೆಗೆ ಟಗ್ ಬರ್ತಿದೆ. ಶೋಧ ಕಾರ್ಯ ಮುಂದುವರಿಯಲಿದೆ. ಒಟ್ಟಾರೆಯಾಗಿ ಘಟನೆಗೆ ಸಂಬಂಧಿಸಿ ಸಮಗ್ರವಾಗಿ ಸ್ಪಂದಿಸಲಾಗುತ್ತಿದೆ ಎಂದರು.ಶಾಸಕ ದಿನಕರ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಜೆಡಿಎಸ್‌ನ ಸೂರಜ ನಾಯ್ಕ, ಡಾ. ಜಿ.ಜಿ. ಹೆಗಡೆ, ಎಂ.ಜಿ. ಭಟ್ ಇತರರು ಇದ್ದರು. ಇದೇ ವೇಳೆ ಜಿಲ್ಲೆಯ ತೋಟಗಾರಿಕೆ ಬೆಳೆ ಪರಿಹಾರ ಪ್ಯಾಕೇಜ್ ಘೋಷಣೆಗೆ ಆಗ್ರಹಿಸಿ ಕುಮಟಾ ಅಡಕೆ ಸೊಸೈಟಿ ವತಿಯಿಂದ ಅಧ್ಯಕ್ಷ ವಿ.ಐ. ಹೆಗಡೆ ಮನವಿ ಸಲ್ಲಿಸಿದರು.