ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಾಲದ ಪ್ರಮಾಣ ದುಪ್ಪಟ್ಟು ಮಾಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಸಾಧನೆಯಾಗಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯದು ಏನೇನೂ ಇಲ್ಲ ಎಂದು ಚಾಮರಾಜನಗರ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಹಾಗೂ ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್ ದೂರಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕೇಂದ್ರದಲ್ಲಿ ಕಳೆದ 10 ವರ್ಷಗಳಿಂದ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಸಾಲದ ಪ್ರಮಾಣ ದುಪ್ಪಟ್ಟು ಮಾಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದ್ದೇ ಸಾಧನೆಯಾಗಿದೆ. ದೇಶದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿಯದು ಏನೇನೂ ಇಲ್ಲ ಎಂದು ಚಾಮರಾಜನಗರ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಹಾಗೂ ಜಿಪಂ ಮಾಜಿ ಸದಸ್ಯ ಕೆರಹಳ್ಳಿ ನವೀನ್ ದೂರಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಅವಧಿಯಲ್ಲಿ ವಿದೇಶದಲ್ಲಿರುವ ಕಪ್ಪು ಹಣತಂದು ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರು.ಗಳನ್ನು ಹಾಕುವುದಾಗಿ ಹೇಳಿದ್ದರು. ಒಂದು ರು. ಬಡವರ ಬ್ಯಾಂಕ್ ಖಾತೆಗೆ ಬರಲಿಲ್ಲ. 128 ಲಕ್ಷ ಕೋಟಿ ಆದಾಯ ಬಂದಿದೆ. ಆದರೆ ಸಾಲದ ಪ್ರಮಾಣ ಮಾತ್ರ ಏರುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ತತ್ತರಿಸುತ್ತಿದ್ದಾರೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ರೈತರ 75 ಸಾವಿರ ಕೋಟಿ ಮನ್ನಾ ಮಾಡಿದ್ದರು ಎಂದರು. ಪ್ರಧಾನಿ ಮೋದಿ ಸಾಲ ಮನ್ನಾ ಮಾಡುವ ಮಾತಿರಲಿ, ದೆಹಲಿ ಗಡಿಯಲ್ಲಿ ಹಕ್ಕು ಕೇಳಲು ಹೋದ ರೈತರ ಹೋರಾಟವನ್ನು ಹತ್ತಿಕುವ ಕೆಲಸವನ್ನು ಮಾಡಿದರು. ಇನ್ನು ರೈತರ ಆದಾಯ ದ್ವಿಗುಣ ಮಾಡುವುದಾದರೂ ಹೇಗೆ ಎಂದು ಪ್ರಶ್ನಿಸಿದರು. 10 ವರ್ಷದ ಅವಧಿಯಲ್ಲಿ ರೈತರ ಅನುಕೂಲಕ್ಕಾಗಿ ನದಿ ಜೋಡಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅದು ಆಗಲಿಲ್ಲ. ಲೋಕಪಾಲ್ ಮಸೂದೆ ಜಾರಿ ಮಾಡಲಿಲ್ಲ. ಭ್ರಷ್ಠಾಚಾರ, ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕಿಲ್ಲ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಒಂದೊಂದಾಗಿ ಖಾಸಗೀಕರಣ ಮಾಡಲಾಗುತ್ತಿದೆ. ಚಾಮರಾಜನಗರ ಲೋಕಸಭೆ ಕ್ಷೇತ್ರದ ಅಭಿವೃದ್ಧಿಗೆ ಮೋದಿ ಸರ್ಕಾರ ನಯಾಪೈಸೆ ಅನುದಾನ ನೀಡಿಲ್ಲ. ರಾಜ್ಯ ಹಾಗೂ ದೇಶದ ಜನತೆಗೆ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತರಲು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಚಾಮರಾಜನಗರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಅವರನ್ನು ಗೆಲ್ಲಿಸಬೇಕು. 10 ವರ್ಷದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಮಾಡದ ಬಿಜೆಪಿಯನ್ನು ಕಿತ್ತೊಗೆಯಬೇಕು ಎಂದು ಮನವಿ ಮಾಡಿದರು.
ಬಿಜೆಪಿಯಲ್ಲಿ ಲೋಕಸಭಾ ಸಭೆ ಟಿಕೆಟ್ ದೊರೆತಾಗ ಧ್ರುವನಾರಾಯಣ್, ಎಚ್.ಎಚ್. ಮಹದೇವಪ್ರಸಾದ್ ಅವರ ಸಮಾಧಿಗಳು ನೆನಪಿಗಾಗಿ ಅಲ್ಲಿ ಹೋಗಿ ಕಣ್ಣೀರಿಟ್ಟು, ಅವರ ಅಭಿಮಾನಿಗಳು, ಅನುಯಾಯಿಗಳು ನನ್ನ ಪರವಾಗಿದ್ದಾರೆ ಎಂದು ತಪ್ಪು ಸಂದೇಶವನ್ನು ಮತದಾರರಿಗೆ ನೀಡುವ ಮೂಲಕ ನೇರವಾಗಿ ಚುನಾವಣೆ ತೋರಿಸಿ ಎಂದು ಕರೆ ನೀಡಿದ್ದಾರೆ ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ದಿ.ಆರ್.ಧ್ರುವನಾರಾಯಣ್ ಅವರ ಅತ್ಮೀಯ ಗೆಳೆಯ ಎಂದು ಹೇಳಿಕೊಳ್ಳುವ ಬಾಲರಾಜು ಅವರ ನಿಧನದ ಬಳಿಕ ಅವರ ಮಗನಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆಯಾಯಿತು. ದುಃಖದಲ್ಲಿ ಸ್ನೇಹಿತನ ಮಗನನ್ನು ಗೆಲ್ಲಿಸುವ ಮಾನವೀಯತೆಯನ್ನು ತೋರದೆ ಬಿಜೆಪಿಗೆ ಹೋಗಿದ್ದಾರೆ ಎಂದು ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆರ್.ಮಹದೇವ್, ತಾಪಂ ಮಾಜಿ ಸದಸ್ಯ ಮಹದೇವಶೆಟ್ಟಿ, ಎಸ್ಟಿ ಮೋರ್ಚಾ ರಾಜ್ಯ ಪ್ರದಾನ ಕಾರ್ಯದರ್ಶಿ ಪು.ಶ್ರೀನಿವಾಸನಾಯಕ, ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷ ಸಯ್ಯದ್ ಮುಜಾಯಿದ್, ನಟರಾಜು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.