ಬಿಸಿಲು ಝಳ ಹೆಚ್ಚಳ: ಕಾಫಿ ತೋಟಕ್ಕೆ ನೀರು ಕೃತಕ ಸಿಂಪಡಣೆ

KannadaprabhaNewsNetwork | Published : Mar 2, 2024 1:46 AM

ಸಾರಾಂಶ

ಕೊಡಗಿನಲ್ಲಿ ಬಿರು ಬಿಸಿಲಿನಿಂದಾಗಿ ಕಾಫಿ ಗಿಡಗಳು ಒಣಗಿ ಹೋಗುತ್ತಿವೆ. ಜಿಲ್ಲೆಯಾದ್ಯಂತ ಈಗಾಗಲೇ ಕಾಫಿ ಕೊಯ್ಲಿನ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಇದರಿಂದ ಮುಂದಿನ ವರ್ಷದ ಫಸಲಿಗೆ ಬೆಳೆಗಾರರು ಮೋಟಾರ್ ಪಂಪ್ ಸೆಟ್ ಗಳ ಮೂಲಕ ಸ್ಪ್ರಿಂಕ್ಲರ್ ನಲ್ಲಿ ಕೃತಕವಾಗಿ ನೀರು ಹಾಯಿಸುತ್ತಿದ್ದಾರೆ.

ವಿಘ್ನೇಶ್‌ ಎಂ. ಭೂತನಕಾಡುಕನ್ನಡಪ್ರಭ ವಾರ್ತೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲೂ ಕೂಡ ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಕಾಫಿ ಗಿಡಗಳು ಹಾಗೂ ಮೆಣಸು ಬಳ್ಳಿ ಒಣಗಲಾರಂಭಿಸಿವೆ. ಇದರಿಂದ ಬೆಳೆಗಾರರು ತೋಟಕ್ಕೆ ನೀರು ಸಿಂಪಡಣೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಬಿರು ಬಿಸಿಲಿನಿಂದಾಗಿ ಕಾಫಿ ಗಿಡಗಳು ಒಣಗಿ ಹೋಗುತ್ತಿವೆ. ಜಿಲ್ಲೆಯಾದ್ಯಂತ ಈಗಾಗಲೇ ಕಾಫಿ ಕೊಯ್ಲಿನ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಇದರಿಂದ ಮುಂದಿನ ವರ್ಷದ ಫಸಲಿಗೆ ಬೆಳೆಗಾರರು ಮೋಟಾರ್ ಪಂಪ್ ಸೆಟ್ ಗಳ ಮೂಲಕ ಸ್ಪ್ರಿಂಕ್ಲರ್ ನಲ್ಲಿ ಕೃತಕವಾಗಿ ನೀರು ಹಾಯಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಕಾವೇರಿ ನದಿ ಕೂಡ ಬತ್ತುತ್ತಿದ್ದು, ನದಿ ಮೂಲಗಳಲ್ಲಿ ನೀರಿನ ಕೊರತೆ ಉಂಟಾಗಲು ಆರಂಭಿಸಿದೆ. ಕಾಫಿ ತೋಟಕ್ಕೆ ಬೆಳೆಗಾರರು ಕೃಷಿ ಹೊಂಡಗಳಿಂದ ನೀರನ್ನು ಕೃತಕವಾಗಿ ಹರಿಸುವ ಮೂಲಕ ಕಾಫಿ ಗಿಡಗಳಲ್ಲಿ ಹೂವು ಅರಳಿಸುವ ಕೆಲಸದಲ್ಲಿ ತೊಡಗಿದ್ದಾರೆ.

ಹವಾಮಾನ ವೈಪರೀತ್ಯ:

ಕೊಡಗಿನಲ್ಲಿ ಸಾಮಾನ್ಯವಾಗಿ ಮಾರ್ಚ್ ತಿಂಗಳ ಅವಧಿಯಲ್ಲಿ ಮಳೆಯಾಗುತ್ತದೆ. ಈ ಸಂದರ್ಭ ಕಾಫಿ ಹೂವು ಅರಳುತ್ತದೆ. ಆದರೆ ಕಳೆದ ಕೆಲವು ವರ್ಷಗಳಿಂದ ಹವಾಮಾನ ವೈಪರೀತ್ಯದ ಪರಿಣಾಮ ಕೊಡಗಿನ ಬೆಳೆಗಾರರು ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಇತ್ತೀಚೆಗೆ ಕಾಫಿ ಕೊಯ್ಲಿನ ಸಂದರ್ಭ ಅಕಾಲಿಕ ಮಳೆ ಸುರಿದು ಕಾಫಿಯ ಹೂವು ಅರಳುತ್ತದೆ. ಆದರೆ ಕಾಫಿ ಹೂವು ಅರಳಬೇಕಾದ ಸಂದರ್ಭದಲ್ಲೇ ಮಳೆಯೇ ಆಗುವುದಿಲ್ಲ. ಇದರಿಂದ ಕೃತಕವಾಗಿ ನೀರು ಸಿಂಪಡಣೆ ಮಾಡಲು ಬೆಳೆಗಾರರು ಲಕ್ಷಾಂತರ ರುಪಾಯಿ ಹಣವನ್ನು ವೆಚ್ಚ ಮಾಡಬೇಕಾಗಿದೆ.

ಸಕಾಲದಲ್ಲಿ ಮಳೆಯಾದರೆ ಕಾಫಿ ಗಿಡಗಳಲ್ಲಿ ಹೂವುಗಳು ಅರಳಿ ಮುಂದಿನ ವರ್ಷದ ಫಸಲಿಗೆ ಅನುಕೂಲವಾಗುತ್ತದೆ. ಈ ಸಂದರ್ಭ ಬೆಳೆಗಾರರು ಹಣ ಖರ್ಚು ಮಾಡುವ ಅವಶ್ಯಕತೆ ಕೂಡ ಇರುವುದಿಲ್ಲ. ಆದರೆ ಮಳೆ ಇಲ್ಲದೆ ಬೆಳೆಗಾರರಿಗೆ ಕೃಷಿ ಹೊಂಡಗಳಿಂದ ನೀರು ಸಿಂಪಡಿಸುವ ಕೆಲಸ ಅನಿವಾರ್ಯವಾಗಿದೆ.

ಸೊರಗಿವೆ ಕಾಳುಮೆಣಸು ಬಳ್ಳಿ:

ಕೊಡಗು ಜಿಲ್ಲೆಯಲ್ಲಿ ಇನ್ನೇನು ಕಾಳುಮೆಣಸು ಕೊಯ್ಲು ಕೂಡ ಆರಂಭವಾಗುತ್ತಿದ್ದು, ಮಳೆ ಇಲ್ಲದೆ ಕಾಳು ಮೆಣಸು ಬಳ್ಳಿಗಳು ಕೂಡ ಸೊರಗಿ ಹೋಗಿವೆ. ಕೆಲವು ಕಡೆಗಳಲ್ಲಿ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುಗುತ್ತಿದೆ. ಇದರಿಂದ ಕೆಲವು ತೋಟದ ಮಾಲೀಕರು ಕಾಳು ಮೆಣಸು ಬಳ್ಳಿಗಳಿಗೆ ನೀರು ನೀಡುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಬಿಸಿಲಿನ ತಾಪಕ್ಕೆ ಅಂತರ್ಜಲ ಮಟ್ಟ ಕೂಡ ಕುಸಿಯುತ್ತಿದೆ. ಅಲ್ಲದೆ ಜಿಲ್ಲೆಯ ಕೆಲವು ಕಡೆಗಳಲ್ಲಿ ಕೃಷಿ ಹೊಂಡಗಳಲ್ಲೂ ಕೂಡ ನೀರು ಇಳಿಮುಖವಾಗಿರುವುದರಿಂದ ಮೋಟಾರ್ ಪಂಪ್ ಸೆಟ್ ಮೂಲಕ ನೀರು ಸಿಂಪಡಣಿಸಲು ಬೆಳೆಗಾರರು ಸಮಸ್ಯೆ ಎದುರಿಸುತ್ತಿದ್ದಾರೆ. -----------

ಮಳೆ ನಿರೀಕ್ಷೆಯಲ್ಲಿ ಬೆಳೆಗಾರಕೊಡಗು ಜಿಲ್ಲೆಯಲ್ಲಿ ಬೆಳೆಗಾರರು ಮಳೆಯ ನಿರೀಕ್ಷೆಯಲ್ಲಿದ್ದಾರೆ. ಕಾಫಿ ಕೊಯ್ಲು ಮುಗಿದ ಹಿನ್ನೆಲೆಯಲ್ಲಿ ಮಳೆಗೆ ಎದುರು ನೋಡುತ್ತಿದ್ದವರು ಮಳೆ ಬಾರದ ಹಿನ್ನೆಲೆಯಲ್ಲಿ ಸ್ಪ್ರಿಂಕ್ಲರ್ ಮೂಲಕ ನೀರು ಹಾಕುತ್ತಿದ್ದಾರೆ. ಆದರೆ ಕೆಲವರು ಈ ತಿಂಗಳು ಮಳೆಯಾಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.----------

ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕಾಳು ಮೆಣಸು ಬಳ್ಳಿಗಳು ಬಾಡುತ್ತಿವೆ. ಅಲ್ಲದೆ ಬಳ್ಳಿಗಳು ಹಳದಿ ಬಣ್ಣಕ್ಕೆ ತಿರುತ್ತಿದೆ. ಆದ್ದರಿಂದ ಈಗ ಕಾಳುಮೆಣಸಿಗೆ ನೀರು ನೀಡುವುದು ಅನಿವಾರ್ಯ. ಸ್ವಲ್ಪ ನೀರು ನೀಡಿ ತರಗೆಲೆ ಹಾಕಿದರೆ ಶೀತಾಂಶ ಇರಲಿದೆ. ಇದರಿಂದ ಬಳ್ಳಿಗಳನ್ನು ಉಳಿಸಿಕೊಳ್ಳಬಹುದು. ಕೆಲವು ಕಡೆ ಕಾಫಿಗೆ ಕೃತಕ ನೀರು ಸಿಂಪಡಣೆ ಮಾಡುತ್ತಿದ್ದಾರೆ. ಸದ್ಯಕ್ಕೆ ಮಳೆ ಇಲ್ಲದಿರುವುದರಿಂದ ಎಲ್ಲ ಬೆಳೆಗಳಿಗೆ ನೀರು ನೀಡುವುದು ಅವಶ್ಯಕ.

-ವೀರೇಂದ್ರ ಕುಮಾರ್, ವಿಜ್ಞಾನಿ ಕೆ.ವಿ.ಕೆ. ಗೋಣಿಕೊಪ್ಪ.

Share this article