ಬರ ಹಾಗೂ ಬೆಳೆ ನಷ್ಟದಿಂದ ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಹೈನೋದ್ಯಮವೇ ಅನೇಕ ಕುಟುಂಬಗಳಿಗೆ ಸ್ವಾಭಿಮಾನದ ಬದುಕಿನ ಆಧಾರವಾಗಿದೆ.
ಹಸಿರು ಮೇವು, ಸಬ್ಸಿಡಿ ದರದಲ್ಲಿ ಪಶು ಆಹಾರ ವಿತರಿಸಲು ರೈತ ಸಂಘ ಆಗ್ರಹ
ಕನ್ನಡಪ್ರಭ ವಾರ್ತೆ ಕೋಲಾರ
ಬರದಿಂದ ತತ್ತರಿಸಿರುವ ಹೈನೋದ್ಯಮವನ್ನು ರಕ್ಷಿಸಲು ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್‌ಗೆ ೧೦ ಹೆಚ್ಚಿಸುವುದರ ಜೊತೆಗೆ ೧೦ ಪ್ರೋತ್ಸಾಹಧನ ನೀಡಬೇಕು. ಅಲ್ಲದೆ, ರೈತರಿಗೆ ಉಚಿತವಾಗಿ ಹಸಿರು ಮೇವು ಹಾಗೂ ಸಬ್ಸಿಡಿ ದರದಲ್ಲಿ ಗುಣಮಟ್ಟದ ಪಶು ಆಹಾರ ವಿತರಿಸಬೇಕು ಎಂದು ರೈತ ಸಂಘ ಒತ್ತಾಯಿಸಿದೆ.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಲು ಒಕ್ಕೂಟದ ವ್ಯವಸ್ಥಾಪಕ ರಾಜೀವ್‌ರಿಗೆ ಮನವಿ ಸಲ್ಲಿಸಿದರು.
ಕೆ.ನಾರಾಯಣಗೌಡ ಮಾತನಾಡಿ, ಬರ ಹಾಗೂ ಬೆಳೆ ನಷ್ಟದಿಂದ ರೈತರು ಮತ್ತು ಕೃಷಿ ಕೂಲಿಕಾರ್ಮಿಕರು ಸಂಕಷ್ಟದಲ್ಲಿದ್ದು, ಇಂತಹ ಸಂದರ್ಭದಲ್ಲಿ ಹೈನೋದ್ಯಮವೇ ಅನೇಕ ಕುಟುಂಬಗಳಿಗೆ ಸ್ವಾಭಿಮಾನದ ಬದುಕಿನ ಆಧಾರವಾಗಿದೆ. ಆದರೆ ಜಿಲ್ಲೆಯಲ್ಲಿ ತೀವ್ರ ಬರ ಆವರಿಸಿರುವ ಪರಿಣಾಮ ಹಸಿರು ಮೇವು ಹಾಗೂ ಕುಡಿಯುವ ನೀರಿನ ಕೊರತೆಯಿಂದ ರಾಸುಗಳ ಹಾಲಿನ ಇಳುವರಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ ಎಂದು ಹೇಳಿದರು.
ಹಸಿರು ಮೇವು ದೊರೆಯದೆ ರಾಸುಗಳಿಗೆ ಒಣ ಮೇವು ನೀಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದೆಡೆ ಪಶು ಆಹಾರದ ಬೆಲೆಯೂ ಹೆಚ್ಚಾಗಿರುವುದರಿಂದ ರೈತರು ಹೈನುಗಾರಿಕೆ ಮುಂದುವರಿಸಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ. ದುಬಾರಿ ಬೆಲೆಗೆ ಮೇವು ಖರೀದಿಸಲಾಗದೆ, ರಾಸುಗಳನ್ನು ಕಣ್ಣೀರಿನಿಂದ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಹೈನೋದ್ಯಮದ ರಕ್ಷಣೆಗೆ ಒಕ್ಕೂಟ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಪಶು ಆಹಾರದ ಬೆಲೆ ಕಡಿಮೆ ಮಾಡಬೇಕು ಅಥವಾ ಒಕ್ಕೂಟದ ವತಿಯಿಂದಲೇ ಸಬ್ಸಿಡಿ ದರದಲ್ಲಿ ವಿತರಿಸಬೇಕು ಎಂದು ಒತ್ತಾಯಿಸಿದರು.
ಹಾಲಿನಲ್ಲಿ ಶೇ.೩.೫ರಷ್ಟು ಜಿಡ್ಡು ಹಾಗೂ ಶೇ.೮.೫ರಷ್ಟು ಎಸ್‌ಎನ್‌ಎಫ್ ಇರಬೇಕೆಂಬ ಮಾನದಂಡವಿದೆ. ಆದರೆ ಹಸಿರು ಮೇವು ಕೊರತೆಯಿಂದ ರಾಸುಗಳು ಗುಣಮಟ್ಟದ ಹಾಲು ನೀಡಲು ಸಾಧ್ಯವಾಗುತ್ತಿಲ್ಲ. ಪರಿಣಾಮ ಜಿಡ್ಡು ಮತ್ತು ಎಸ್‌ಎನ್‌ಎಫ್ ಪ್ರಮಾಣ ಕಡಿಮೆಯಾಗಿ ಕೆಲವು ಸಂದರ್ಭಗಳಲ್ಲಿ ಹಾಲನ್ನು ವಾಪಸ್ ಕಳುಹಿಸಲಾಗುತ್ತಿದೆ. ಇದರಿಂದ ರೈತರಿಗೆ ಮತ್ತಷ್ಟು ಆರ್ಥಿಕ ನಷ್ಟವಾಗುತ್ತಿದೆ ಎಂದು ಅವರು ಹೇಳಿದರು.
ಮನವಿ ಸ್ವೀಕರಿಸಿದ ಒಕ್ಕೂಟದ ವ್ಯವಸ್ಥಾಪಕ ರಾಜೀವ್ ಮಾತನಾಡಿ, ಬರ ಹಾಗೂ ಬೆಳೆ ನಷ್ಟದಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಒಕ್ಕೂಟದ ಅಧ್ಯಕ್ಷರ ಗಮನಕ್ಕೆ ತರಲಾಗಿದೆ. ಹಾಲಿನ ದರ ಹೆಚ್ಚಳ ಸೇರಿದಂತೆ ರೈತರ ಬೇಡಿಕೆಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಯಾರಂಘಟ್ಟ ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಚಂದ್ರಪ್ಪ, ಪುತ್ತೇರಿ ರಾಜು, ಕಮದಟ್ಟಿ ಚಲಪತಿ, ಮಂಜುನಾಥ್, ಪಾರುಕ್ ಪಾಷ, ಸುಪ್ರೀಂಚಲ, ಪ್ರಸನ್ನ, ವಕ್ಕಲೇರಿ ಹನುಮಯ್ಯ, ತುರ್ನಹಳ್ಳಿ ಆಂಜಿನಪ್ಪ, ವಾನರಾಶಿ ವೀರಭದ್ರಪ್ಪ, ರಾಜೇಶ್, ನಾಗರಾಜ್, ಜುಬೇರ್ ಪಾಷ, ಹನುಮನಹಳ್ಳಿ ನಾಗರಾಜ್ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.