ಅಂಗನವಾಡಿ ನೌಕರರಿಗೆ ಸೇವಾ ಭದ್ರತೆ, ಮಾಸಿಕ ವೇತನ ಹೆಚ್ಚಿಸಿ; ಸಿಐಟಿಯು ಪ್ರತಿಭಟನೆ

KannadaprabhaNewsNetwork |  
Published : Jan 24, 2024, 02:01 AM IST
23ಕೆಡಿವಿಜಿ5-ದಾವಣಗೆರೆಯಲ್ಲಿ ಸಂಸದರ ಜನ್ಮಸಂಪರ್ಕ ಕಚೇರಿ ಎದುರು ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕ ಸಿಐಟಿಯು ನೇತೃತ್ವದಲ್ಲಿ ಅಂಗನವಾಡಿ ನೌಕರರು ಪ್ರತಿಭಟಿಸಿದರು. | Kannada Prabha

ಸಾರಾಂಶ

ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಶಿಫಾರಸ್ಸಿನಂತೆ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕಲ್ಪಿಸಿ, ನೌಕರರೆಂದು ಪರಿಗಣಿಸಬೇಕು. 3ರಿಂದ 5 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಹಾಗೂ ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲೇ ಕೊಡಲು ಕಾನೂನು ರೂಪಿಸಬೇಕು. ಎನ್ಇಪಿ ನಿಲ್ಲಿಸಬೇಕು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಹಾರ, ‍ಆರೋಗ್ಯ, ಶಿಕ್ಷಣದ ಐಸಿಡಿಎಸ್‌, ಎಂಡಿಎಂ, ಎನ್ಎಚ್‌ಎಂ, ಐಸಿಪಿಎಸ್‌, ಎಸ್‌ಎಸ್ಎ, ಎಂಎನ್‌ಆರ್‌ಇಜಿ ಮತ್ತಿತರೆ ಯೋಜನೆ ಕಾಯಂಗೊಳಿಸಿ, ಈ ಹಕ್ಕುಗಳ ಸಾರ್ವತ್ರಿಕ ಸೇರಿ ವಿವಿಧ ಬೇಡಿಕೆಗಳ ಈಡೇರಿಸಲು ಒತ್ತಾಯಿಸಿ ರಾಜ್ಯ ಅಂಗನವಾಡಿ ನೌಕರರ ಸಂಘ ಸಿಐಟಿಯು ಜಿಲ್ಲಾ ಘಟಕ ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್‌ರ ಜನ ಸಂಪರ್ಕ ಕಚೇರಿ ಎದುರು ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಸಲು ಸಂಸದರ ಕಚೇರಿ ಸಿಬ್ಬಂದಿ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಮುಖಂಡರು, ಭಾರತೀಯ ಕಾರ್ಮಿಕ ಸಮ್ಮೇಳನ (ಐಎಲ್‌ಸಿ) ಶಿಫಾರಸ್ಸಿನಂತೆ ಯೋಜನೆಗಳಲ್ಲಿ ದುಡಿಯುತ್ತಿರುವ ಸಿಬ್ಬಂದಿ ಸೇರಿ 1 ಕೋಟಿ ನೌಕರರಿಗೆ ಕನಿಷ್ಠ ವೇತನ, ನಿವೃತ್ತಿ ಸೌಲಭ್ಯ ಕಲ್ಪಿಸಿ, ನೌಕರರೆಂದು ಪರಿಗಣಿಸಬೇಕು. 3ರಿಂದ 5 ವರ್ಷದೊಳಗಿನ ಮಕ್ಕಳಿಗೆ ಉಚಿತ, ಕಡ್ಡಾಯ ಹಾಗೂ ಸಾರ್ವತ್ರಿಕವಾಗಿ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಅಂಗನವಾಡಿ ಕೇಂದ್ರಗಳಲ್ಲೇ ಕೊಡಲು ಕಾನೂನು ರೂಪಿಸಬೇಕು. ಎನ್ಇಪಿ ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಳೆದ 49 ವರ್ಷದಿಂದ ದುಡಿಯುತ್ತಿರುವ ಅಂಗನವಾಡಿ ನೌಕರರಿಗೆ 21 ವರ್ಷದಿಂದ ದುಡಿಯುತ್ತಾ ಬಂದ ಬಿಸಿಯೂಟ ನೌಕರರು, ಆಶಾ ಮತ್ತು ಇತರೆ ಸಿಬ್ಬಂದಿಗೆ ಕನಿಷ್ಟ 31 ಸಾವಿರ ರು. ಮಾಸಿಕ ವೇತನ, ನಿವೃತ್ತ ಸೌಲಭ್ಯ, ಕನಿಷ್ಟ 10 ಸಾವಿರ ರು. ಪಿಂಚಣಿ ನೀಡಬೇಕು. ವಿವಿಧ ಯೋಜನೆಗಳಲ್ಲಿ ದುಡಿಯುತ್ತಿರುವ ಗುತ್ತಿಗೆ, ಒಳಗುತ್ತಿಗೆ, ಹೊರ ಗುತ್ತಿಗೆ ನೌಕರರನ್ನು ಕಾಯಂ ಮಾಡಿ, ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಮಿನಿ ಅಂಗನವಾಡಿ ಕೇಂದ್ರಗಳನ್ನು ಪೂರ್ಣ ಅಂಗನವಾಡಿ ಕೇಂದ್ರಗಳಾಗಿ ಪರಿವರ್ತಿಸಬೇಕು. ಕಡಿತವಾದ ಅನುದಾನ ವಾಪಸ್ ನೀಡಿ, ಬೆಲೆಯೇರಿಕೆ ಆದಾರದಲ್ಲಿ ಪೌಷ್ಟಿಕ ಆಹಾರಕ್ಕೆ ಕೊಡುವ ಹಣ ಹೆಚ್ಚಿಸಬೇಕು. ಏಪ್ರಿಲ್ 2022ರ ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಲ್ಲಾ ಅಂಗನವಾಡಿ ನೌಕರರನ್ನು ಉದ್ಯೋಗಸ್ಥರೆಂದು ಪರಿಗಣಿಸಿ, ಗ್ರಾಚ್ಯುಟಿ ಕಾಯ್ದೆ ದೇಶಾದ್ಯಂತ ಜಾರಿಗೊಳಿಸಬೇಕು ಎಂದು ಮನವಿ ಮಾಡಿದರು.

ವಿದ್ಯುತ್, ರೈಲ್ವೆ ಸೇರಿ ಯಾವುದೇ ಸಾರ್ವಜನಿಕ ವಲಯಗಳ ಖಾಸಗೀಕರಣ ನಿಲ್ಲಬೇಕು. 29 ಕಾರ್ಮಿಕ ಕಾನೂನುಗಳ ಸಂಹಿತೆಗಾಗಿ ಮಾಡಿರುವುದನ್ನು ಕೈಬಿಟ್ಟು, ಕಾರ್ಮಿಕರ ಪರ ನೀತಿ ಜಾರಿಗೊಳಿಸಬೇಕು. ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ರಚಿಸಲಾದ ಸಾಮಾಜಿಕ ಭದ್ರತಾ ಮಂಡಳಿ ಬಲಪಡಿಸಿ, ಕೇಂದ್ರ ಸರ್ಕಾರ ವಾರ್ಷಿಕ ನಿವ್ವಳ ಆದಾಯದ ಶೇ.3 ಅನುದಾನ ಅಂದರೆ 3 ಲಕ್ಷ ಕೋಟಿ ಹಣ ಅಸಂಘಟಿತ ಕಾರ್ಮಿಕರ ಕಾರ್ಯಕ್ರಮಗಳಿಗೆಂದು ಘೋಷಿಸಬೇಕು. ಇ-ಶ್ರಮ್‌ನಡಿ ಗುರುತಿನ ಚೀಟಿ ಪಡೆದ ಕಾರ್ಮಿಕರು, ಕುಟುಂಬಕ್ಕೆ ಉಚಿತ ಶಿಕ್ಷಣ, ಆರೋಗ್ಯ, ಪಡಿತರ, ವಸತಿ ಯೋಜನೆ ಜಾರಿಗೊಳಿಸಬೇಕು ಎಂದು ತಾಕೀತು ಮಾಡಿದರು.

ಸಂಘದ ಮುಖಂಡರಾದ ಡಿ.ಲತಾ, ಸುವರ್ಣ, ಆಶಾ, ವೀಣಮ್ಮ, ದೇವೀರಮ್ಮ, ಸುಧಮ್ಮ ಇತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ