ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮಗೆ ಕೊಡಿ: ವಚನಾನಂದ ಶ್ರೀ

KannadaprabhaNewsNetwork |  
Published : Aug 13, 2025, 12:30 AM IST
ವಚನಾನಂದ ಶ್ರೀಗಳು. | Kannada Prabha

ಸಾರಾಂಶ

ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ನಡೆದಿದೆಯೇ ಹೊರತು, ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ಆದರೆ, ದೇಶದ 10 ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಅದೇ ರೀತಿ ಇಲ್ಲೂ ಹೆಚ್ಚಿಸಿ ಕೊಡಿ ಎಂದು ಒತ್ತಾಯಿಸಲಾಗುತ್ತಿದೆ.

ಹುಬ್ಬಳ್ಳಿ: ಬೇರೆ ಸಮುದಾಯದವರ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳುತ್ತಿಲ್ಲ. ಬೇರೆ ರಾಜ್ಯಗಳಂತೆ ಇಲ್ಲೂ ಮೀಸಲಾತಿ ಪ್ರಮಾಣ ಹೆಚ್ಚಿಸಿ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ. ನಮ್ಮ ಹೋರಾಟ ನಿರಂತರ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿಗಾಗಿ ಪ್ರತಿಭಟನೆ ನಡೆದಿದ್ದು, ಇನ್ನೊಂದೆಡೆ ಕಾನೂನು ಹೋರಾಟವೂ ಮುಂದುವರಿದಿದೆ. ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟ ನಡೆದಿದೆಯೇ ಹೊರತು, ಮತ್ತೊಂದು ಸಮುದಾಯದ ಮೀಸಲಾತಿ ಕಿತ್ತು ನಮಗೆ ಕೊಡಿ ಎಂದು ಕೇಳಿಲ್ಲ. ಆದರೆ, ದೇಶದ 10 ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಅದೇ ರೀತಿ ಇಲ್ಲೂ ಹೆಚ್ಚಿಸಿ ಕೊಡಿ ಎಂದು ಒತ್ತಾಯಿಸಲಾಗುತ್ತಿದೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳ ಪಂಗಡಗಳಿಗೂ ಒಂದೇ ತೆರೆನಾದ ಮೀಸಲಾತಿ ಅನ್ವಯಿಸಿ ಜಾರಿಗೊಳಿಸಿದರೆ ಮಾತ್ರ ಅಖಂಡ ವೀರಶೈವ ಲಿಂಗಾಯತ ಸಮಾಜ ಒಂದು ಎಂಬ ಭಾವನೆ ಮೂಡಲು ಸಾಧ್ಯ ಎಂದು ಹೇಳಿದರು.

ಒಳಪಂಗಡದ ಕೆಲವರಿಗೆ ಮಾತ್ರ ಮೀಸಲಾತಿ ದೊರೆತರೆ ಸಮಾನತೆ ಬರಲು ಸಾಧ್ಯವಿಲ್ಲ. ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸೇರಿಸಲಾಗಿದೆ. ಜಾತಿ ಜನಗಣತಿ ಸಂದರ್ಭದಲ್ಲಿ ಸಮಾಜದ ಬಂಧುಗಳು ಪಂಚಮಸಾಲಿ ಸಮುದಾಯ ಎಂದು ನಮೂದಿಸಬೇಕು ಎಂಬುದರ ಕುರಿತು 18 ಜಿಲ್ಲೆಗಳ ಮುಖಂಡರು, 80ಕ್ಕೂ ಹೆಚ್ಚು ಸ್ವಾಮೀಜಿಗಳು ಒಂದೆಡೆ ಸೇರಿ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಕೂಡಲಸಂಗಮದ ಬಸವ ಜಯಮೃತ್ಯುಂಜಯ ಶ್ರೀಗಳು ಸಮಾಜದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಬಗ್ಗೆ ನಮಗೆ ಗೌರವವಿದೆ. ಏನೇ ವಿವಾದ ಇದ್ದರೂ ಸಂಘಟನೆಯವರು ಕುಳಿತು ಮಾತನಾಡಿ ಪರಿಹರಿಸುತ್ತಾರೆ ಎಂದು ವಚನಾನಂದ ಶ್ರೀಗಳು ಹೇಳಿದರು.

ಕೂಡಲಸಂಗಮ ಶ್ರೀಗಳ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಚನಾನಂದ ಶ್ರೀಗಳು, ರಾಜ್ಯದಲ್ಲಿನ ಬಹುತೇಕ ಮಠಗಳನ್ನು ನಮ್ಮ ಪಂಚಮಸಾಲಿ ಸಮುದಾಯ ದಾನ ಧರ್ಮಗಳ ಮೂಲಕ ಸಲಹುತ್ತಿದೆ. ರಾಜ್ಯದಲ್ಲಿ ನಮ್ಮದು ದೊಡ್ಡ ಸಮಾಜ. ಹೀಗಿರುವಾಗ ಇನ್ನೂ 100 ಪೀಠಗಳಾದರೂ ಅವುಗಳನ್ನು ಸಮಾಜದ ಅಭಿವೃದ್ಧಿಗೆ ಸದ್ಬಳಕೆ ಮಾಡಿಕೊಳ್ಳಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೊಷ್ಠಿಯಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಸೋಮನಗೌಡ ಪಾಟೀಲ, ಕಾರ್ಯದರ್ಶಿ ಜಿ.ಜಿ. ದ್ಯಾವನಗೌಡ್ರ, ಡಾ. ಎಂ.ಎಂ. ನುಚ್ಚಿ ಸೇರಿದಂತೆ ಇತರರು ಇದ್ದರು.

PREV

Recommended Stories

ಹೆತ್ತವರ ಕನಸು ನನಸಾಗಿಸುವುದೇ ಮಕ್ಕಳ ಗುರಿಯಾಗಿರಲಿ: ಸಚಿವೆ ಹೆಬ್ಬಾಳ್ಕರ್
ರಾಜ್ಯದ ಅರ್ಥ ವ್ಯವಸ್ಥೆ ಆರೋಗ್ಯವಂತವಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್