ಗ್ರಾಪಂ ನೌಕರರಿಗೆ ₹5 ಸಾವಿರ ವೇತನ ಹೆಚ್ಚಿಸಿ

KannadaprabhaNewsNetwork |  
Published : Apr 17, 2026, 02:15 AM IST
ಗ್ರಾಪಂ ನೌಕರರ ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಗ್ರಾಪಂ ಎಲ್ಲ ನೌಕರರಿಗೆ ₹5000 ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿ, ನಿಧನ ಹೊಂದಿದರೆ ಅವರಿಗೆ ಇಡಗಂಟು ₹6 ಲಕ್ಷ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಗದಗ: ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳನ್ನು ಇತ್ಯರ್ಥಪಡಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಪಂ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ರುದ್ರಪ್ಪ ಕಂದಗಲ್ಲ ಮಾತನಾಡಿ, ಗ್ರಾಮ ಪಂಚಾಯಿತಿ ನೌಕರರ ಬೇಡಿಕೆಗಳಿಗಾಗಿ ಒತ್ತಾಯಿಸಿ ಕಳೆದ ಡಿಸೆಂಬರ್ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸತ್ಯಾಗ್ರಹ ನಡೆಸಿ ಗ್ರಾಮ ಪಂಚಾಯಿತಿ ನೌಕರರು ಸರ್ಕಾರದ ಗಮನವನ್ನು ಸೆಳೆದಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ಹಂತದಲ್ಲಿರುವ(ಪಾಲಿಸಿ ಮ್ಯಾಟರ್) ಬೇಡಿಕೆಗಳನ್ನು ಸಚಿವರ ಜತೆ ಸಭೆಯನ್ನು ನಡೆಸಿ ಅವರಿಗೆ ಮನವರಿಕೆ ಮಾಡಿಕೊಡಲಾಗುವುದು. ಉಳಿದ ನಮ್ಮ ಹಂತದಲ್ಲಿರುವ ಪ್ರಮುಖ ಬೇಡಿಕೆಗಳನ್ನು ಕೂಡಲೆ ಇತ್ಯರ್ಥಪಡಿಸಿ ಆದೇಶವನ್ನು ನೀಡಲಾಗುವುದೆಂದು ಭರವಸೆ ನೀಡಿದ್ದರಿಂದ ಧರಣಿಯನ್ನು ವಾಪಸ್ ಪಡೆಯಲಾಗಿತ್ತು. ಆದರೆ ಭರವಸೆ ಕೊಟ್ಟು 3 ತಿಂಗಳು ಗತಿಸಿದರೂ ಸರ್ಕಾರದ ಹಂತದಲ್ಲಿರುವ ಬೇಡಿಕೆಗಳನ್ನು ಹೊರತುಪಡಿಸಿ ಇನ್ಯಾವ ಬೇಡಿಕೆಗಳು ಈಡೇರಿಲ್ಲ.

ಎಲ್ಲ ನೌಕರರಿಗೆ ₹5000 ವೇತನ ಹೆಚ್ಚಳ ಮಾಡಿ ಇಲಾಖೆಯಿಂದ ಆದೇಶ ಹೊರಡಿಸಬೇಕು. ನೌಕರರು ನಿವೃತ್ತಿ, ನಿಧನ ಹೊಂದಿದರೆ ಅವರಿಗೆ ಇಡಗಂಟು ₹6 ಲಕ್ಷ ನೀಡಬೇಕು. ಸೇವಾ ಹಿರಿತನದ ಆಧಾರದಲ್ಲಿ ವೇತನ ನೀಡಬೇಕು. ಪ್ರತಿಯೊಂದು ಪಂಚಾಯಿತಿಗೆ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ತುಂಬಬೇಕು.

ಕಳೆದ 18- 20 ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಅನುಮೋದನೆ ನೀಡಬೇಕು. 2ನೇ ಡಾಟಾ ಎಂಟ್ರಿ ಆಪರೇಟರ್ ನೇಮಕಾತಿ ಆಗಬೇಕು. ಈಗಾಗಲೆ ಆರೋಗ್ಯದ ಕುರಿತು ಸಿಬ್ಬಂದಿ ಮಾಹಿತಿಗಾಗಿ ಫಾರ್ಮೆಟ್ ಕಳಿಸಿದ್ದೀರಿ. ಅದರಲ್ಲಿ ಗುತ್ತಿಗೆ, ಹೊರಗುತ್ತಿಗೆ, ಗೌರವಧನದ, ಕಾರ್ಮಿಕರ ಮಾಹಿತಿ ನೀಡಲು ತಿಳಿಸಿದ್ದೀರಿ. ಆದರೆ ಈ ಫಾರ್ಮೆಟ್‌ನಲ್ಲಿ ಪಂಚಾಯಿತಿ ನೌಕರರೆಂದು ಮಾಹಿತಿ ಇಲ್ಲ. ಇದನ್ನು ಸರಿಪಡಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಒತ್ತಾಯಿಸಿದರು.

ಈ ಮನವಿಗೂ ಸ್ಪಂದಿಸದಿದ್ದರೆ ಬೆಂಗಳೂರು ಚಲೋ ಹಮ್ಮಿಕೊಳ್ಳಲಾಗುವುದು. ಹೋರಾಟದಲ್ಲಿ ಏನಾದರೂ ಅನಾಹುತಗಳಾದರೆ ಇದಕ್ಕೆ ನೇರವಾಗಿ ಆರ್‌ಡಿಪಿಆರ್ ಇಲಾಖೆಯೆ ಹೊಣೆ ಆಗುತ್ತದೆ ಎಂದರು.ಈ ವೇಳೆ ಪೀರು ರಾಠೋಡ, ರುದ್ರಪ್ಪ ಕಂದಗಲ್ಲ, ಮಹಾಂತೇಶ ದೊಡ್ಡವಾಡ, ಬಸವರಾಜ ಅರ್ಕಸಾಲಿ, ಬಸವರಾಜ ಮೇವುಂಡಿ, ಜಗದೀಶ ವಾಲ್ಮೀಕಿ, ರಮೇಶ ವಾಸನ, ಮುತ್ತು ಅರಹುಣಸಿ, ಮರಲಿಂಗಪ್ಪ ಮುತಾರಿ, ರವಿ ಖೋಡೆ, ಪ್ರಕಾಶ ನರೇಗಲ್ಲ, ಬಸಯ್ಯ ಜಂಗಮರ, ರುದ್ರಪ್ಪ ಹೈನಾಪೂರ, ಪ್ರಕಾಶ ಚಲವಾದಿ, ಮುದಕಪ್ಪ, ಕರಿಯಪ್ಪ ಕಾಳೆ, ನೀಲಮ್ಮ ಬರದ್ವಾಡ ಸೇರಿದಂತೆ ಗ್ರಾಪಂ ನೌಕರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈತರು ಸಮತೋಲಿತ ರಸಗೊಬ್ಬರಗಳ ಬಳಕೆ ಮಾಡಲಿ
ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಪ್ರಗತಿಗೆ ಸಹಕಾರಿ: ನ್ಯಾ. ದಿವ್ಯಶ್ರೀ