ಕನ್ನಡಪ್ರಭ ವಾರ್ತೆ ಯಡ್ರಾಮಿ
ಯಡ್ರಾಮಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿನ ಬಸ್ ನಿಲ್ದಾಣ ಸೇರಿದಂತೆ ಮಾರ್ಕೆಟ್, ಕಾಂಪ್ಲೆಕ್ಸ್ ಗಳಲ್ಲಿ ಮಹಿಳೆಯರ ಮತ್ತು ಮಕ್ಕಳ ಭಿಕ್ಷಾಟನೆ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದರಿಂದ ಬಹುತೇಕ ಪ್ರಯಾಣಿಕರು ಮತ್ತು ಸಾರ್ವಜನಿಕರು ಕಿರಿಕಿರಿ ಅನುಭವಿಸುವಂತಾಗಿದೆ.ಪ್ರಮುಖವಾಗಿ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿನ ಬಸ್ ನಿಲ್ದಾಣದಲ್ಲಿ ಭಿಕ್ಷುಕರ ಸಂಖ್ಯೆ ಹೆಚ್ಚಾಗಿ ಕಂಡು ಬರುತ್ತಿದ್ದು, ಕೆಲವು ಮಹಿಳೆಯರು ತಮ್ಮ ಮಕ್ಕಳನ್ನು ಕಂಕುಳದಲ್ಲಿ ಕಟ್ಟಿಕೊಂಡು ಭಿಕ್ಷೆ ಬೇಡುವುದು ನೀಡದಿದ್ದರೆ ಸಾರ್ವಜನಿಕರಿಗೆ ಬಯ್ಯುವುದು ಸಾಮಾನ್ಯವಾಗಿ ಕಂಡು ಬರುತ್ತಿದೆ.
ಮಕ್ಕಳ ಬಳಕೆ:ಇತ್ತೀಚೆಗೆ ಭಿಕ್ಷಾಟನೆಯಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿದೆ. ಮಕ್ಕಳಿಗಾದರೆ ಸಹಾನುಭೂತಿ ಆಧಾರದ ಮೇಲೆ ಭಿಕ್ಷೆ ನೀಡುತ್ತಾರೆ ಎಂಬ ಧೈರ್ಯದಿಂದ ತಂದೆ, ತಾಯಿ ತಮ್ಮ ಮಕ್ಕಳನ್ನು ಒಂದೆಡೆ ಬಿಟ್ಟು ತಾವೂ ಇನ್ನೊಂದು ಕಡೆ ಭಿಕ್ಷಾಟನೆಗೆ ಇಳಿಯುತ್ತಿದ್ದಾರೆ. ಮಕ್ಕಳು ಒಂದು ದೇವರ ಫೋಟೊ ಇಟ್ಟುಕೊಂಡು ಭಿಕ್ಷೆ ಬೇಡಿದರೆ ಮಹಿಳೆಯರು ಹಸುಗೂಸು ಕಂಕುಳಲ್ಲಿ ಸಿಕ್ಕಿಸಿಕೊಂಡು ಭಿಕ್ಷಾಟನೆಗೆ ನಿಲ್ಲುತ್ತಿದ್ದಾರೆ.
ವಲಸಿಗರೇ ಹೆಚ್ಚು:ಪಟ್ಟಣದಲ್ಲಿ ನಾನಾ ಕಡೆಯಿಂದ ಕುಟುಂಬ ಸಮೇತ ಬಂದ ವಲಸಿಗರು ಖಾಲಿ ಇರುವ ಜಾಗ ನೋಡಿಕೊಂಡು ಟೆಂಟ್ ಹಾಕಿಕೊಂಡು ನೆಲಸಿದ್ದಾರೆ. ಇವರಲ್ಲಿ ಸ್ವಾಭಿಮಾನದಿಂದ ಕೂದಲು ಮತ್ತು ದುಡ್ಡಿಗಾಗಿ ದಿನ ಬಳಕೆ ಸಾಮಗ್ರಿ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಕೆಲವರು, ಭಿಕ್ಷಾಟನೆಯನ್ನೇ ಬಂಡಾವಳನ್ನಾಗಿ ಮಾಡಿಕೊಂಡಿದ್ದು, ಇವರ ಸಂಖ್ಯೆ ಮಿತಿಮೀರುತ್ತಿದೆ.
ಶಾಲೆಯಿಂದ ವಂಚಿತ:ಏನು ಅರಿಯದ ಮುದ್ದು ಮಕ್ಕಳನ್ನು ತಂದೆ, ತಾಯಿಗಳು ಭಿಕ್ಷಾಟನೆಗೆ ದೂಡುತ್ತಿದ್ದು, ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಇತ್ತ ಸರಕಾರ ಎಲ್ಲ ಮಕ್ಕಳು 10ನೇ ತರಗತಿವರೆಗೆ ಕಡ್ಡಾಯ ಶಿಕ್ಷಣ ಪಡೆಯುವಂತೆ ಜಾಹೀರಾತು ನೀಡುತ್ತಿದ್ದರೂ, ಅದು ಕಾಗದದಲ್ಲೆ ಉಳಿದಿದೆ.