ಮಾನವ ಪ್ರಾಣಿ ನಡುವೆ ಹೆಚ್ಚಿದ ಸಂಘರ್ಷ

KannadaprabhaNewsNetwork | Published : Jun 14, 2024 1:02 AM

ಸಾರಾಂಶ

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯದಂಚಿನ ರೈತರ ಜಮೀನುಗಳಲ್ಲಿ ಆನೆಗಳಿಂದ ನಿರಂತರ ಫಸಲು ನಾಶವಾಗುತ್ತಿದ್ದು, ಮತ್ತೊಂದೆಡೆ ಬಿಆರ್‌ಟಿ ಅರಣ್ಯದಂಚಿನ ಗ್ರಾಮದ ರೈತರ ಜಮೀನುಗಳಲ್ಲಿ ಚಿರತೆ ಕಾಟ ಇತ್ತೀಚೆಗೆ ಹೆಚ್ಚಿದ್ದು, ಪ್ರಾಣಿ ಹಾಗೂ ಮಾನವನ ಸಂಘರ್ಷ ಶಾಶ್ವತ ಪರಿಹಾರ ಕಂಡು ಹಿಡಿಯಲು ಅರಣ್ಯ ಇಲಾಖೆ ವಿಫಲವಾಗಿದೆ.

ಜಿ ದೇವರಾಜ ನಾಯ್ಡು

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಅರಣ್ಯದಂಚಿನ ರೈತರ ಜಮೀನುಗಳಲ್ಲಿ ಆನೆಗಳಿಂದ ನಿರಂತರ ಫಸಲು ನಾಶವಾಗುತ್ತಿದ್ದು, ಮತ್ತೊಂದೆಡೆ ಬಿಆರ್‌ಟಿ ಅರಣ್ಯದಂಚಿನ ಗ್ರಾಮದ ರೈತರ ಜಮೀನುಗಳಲ್ಲಿ ಚಿರತೆ ಕಾಟ ಇತ್ತೀಚೆಗೆ ಹೆಚ್ಚಿದ್ದು, ಪ್ರಾಣಿ ಹಾಗೂ ಮಾನವನ ಸಂಘರ್ಷ ಶಾಶ್ವತ ಪರಿಹಾರ ಕಂಡು ಹಿಡಿಯಲು ಅರಣ್ಯ ಇಲಾಖೆ ವಿಫಲವಾಗಿದೆ.ಹೈರಾಣಾಗುತ್ತಿರುವ ರೈತರು: ದಟ್ಟ ಅರಣ್ಯ ಪ್ರದೇಶದ ಅಂಚಿನಲ್ಲಿ ಬರುವ ರೈತರ ಜಮೀನುಗಳ ಮೇಲೆ ಕಾಡುಪ್ರಾಣಿಗಳು ದಿನನಿತ್ಯ ಬರುತ್ತಿದ್ದು, ಕಾಡು ಪ್ರಾಣಿಗಳ ಹಾವಳಿಯಿಂದ ಫಸಲು ನಾಶ ಜೊತೆಗೆ ಪರಿಕರಗಳು ಸಹ ಹಾಳಾಗುತ್ತಿದೆ. ಮತ್ತು ಸಾಕುಪ್ರಾಣಿಗಳು ಸಹ ಕ್ರೂರ ಪ್ರಾಣಿಗಳಿಗೆ ಬಲಿಯಾಗುತ್ತಿವೆ. ಜೊತೆಗೆ ಆತಂಕದ ನಡುವೆ ರೈತರು ತೋಟದ ಜಮೀನುಗಳಲ್ಲಿ ಕಾಲ ಕಳೆಯುವಂತಾಗಿದೆ. ವಿಸ್ತಾರವಾದ ಅರಣ್ಯ ಪ್ರದೇಶದಿಂದ ಕಾಡು ಪ್ರಾಣಿಗ‍ಳು ದಿನನಿತ್ಯ ಒಂದಲ್ಲ ಒಂದು ಕಡೆ ಹಾವಳಿ ಮಾಡುತ್ತಿದ್ದು, ರೈತರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಜಮೀನುಗಳಲ್ಲಿ ಕೆಲಸ ಮಾಡುವಂತಾಗಿದೆ.

ಶಾಶ್ವತ ಪರಿಹಾರಕ್ಕೆ ಒತ್ತಾಯ: ಮಲೆ ಮಹದೇಶ್ವರ ವನ್ಯಧಾಮ ಹಾಗೂ ಬಿಆರ್‌ಟಿ ವಲಯದ ಅರಣ್ಯದಂಚಿನಲ್ಲಿ ಬರುವ ರೈತರ ಜಮೀನುಗಳಿಗೆ ಕಾಡು ಪ್ರಾಣಿಗಳು ದಿನನಿತ್ಯ ಬರುತ್ತಿರುವುದರಿಂದ ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿ ರೈತರು ಜೀವ ಭಯದಲ್ಲಿ ನಲುಗುತ್ತಿದ್ದಾರೆ. ಜೊತೆಗೆ ಲಕ್ಷಾಂತರ ರುಪಾಯಿ ನಷ್ಟ ಸಹ ಉಂಟಾಗುತ್ತಿದೆ. ಅರಣ್ಯ ಇಲಾಖೆ ಕೊಡುವ ಪರಿಹಾರ ರೈತರಿಗೆ ಸಾಲದಾಗಿದ್ದು, ಪ್ರಾಣಿಗಳ ಹಾವಳಿ ತಡೆಗಟ್ಟಲು ಶಾಶ್ವತ ಪರಿಹಾರ ಕಲ್ಪಿಸುವಂತೆ ರೈತರು ಆಗ್ರಹಿಸಿದ್ದಾರೆ.

ಬ್ಯಾನರ್ ಅಳವಡಿಸಿದ ರೈತರು: ಕಳೆದ ಹಲವಾರು ದಿನಗಳಿಂದ ಲೊಕ್ಕನಹಳ್ಳಿ, ಹಾಂಡಿಪಾಳ್ಯ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ನಿರಂತರವಾಗಿ ಕಾಡಾನೆಗಳು ಫಸಲನ್ನು ನಾಶಗೊಳಿಸಿರುವ ಬಗ್ಗೆ ರೈತರು ತಮ್ಮ ಜಮೀನಿನಲ್ಲಿ ಪಸಲು ನಾಶಗೊಂಡಿರುವ ಫೋಟೋಗಳನ್ನು ಬ್ಯಾನರ್ ಮೂಲಕ ಮುದ್ರಿಸಿ ಸರ್ಕಾರ ಹಾಗೂ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಹಾಂಡಿಪಾಳ್ಯ ಗ್ರಾಮದ ಬಳಿ ಬ್ಯಾನರ್ ಕಟ್ಟಿದ್ದಾರೆ.

ಕಾಡಾನೆಗಳನ್ನು ರೈತರ ಜಮೀನುಗಳಿಗೆ ಹೋಗದಂತೆ ತಡೆಗಟ್ಟಲು ಈಗಾಗಲೇ ಡ್ರೋನ್ ಮೂಲಕ ಪತ್ತೆ ಹಚ್ಚಿ ರೈತರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆನೆಕಂದಕ ಬಹಳ ಹಿಂದೆ ಮಾಡಿರುವುದರಿಂದ ಮುಚ್ಚಿ ಹೋಗಿದೆ. ಸೋಲಾರ್ ವಿದ್ಯುತ್ ತಂತಿ ಬೇಲಿ ಹಾಳಾಗಿದೆ. ಹೀಗಾಗಿ ಆನೆಗಳು ಈ ಭಾಗದಲ್ಲಿ ರೈತರ ಜಮೀನುಗಳಿಗೆ ಬರುತ್ತಿದೆ. ಕಳೆದ 3 ದಿನಗಳಿಂದ ಈ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿ ಕಾಡಾನೆಗಳನ್ನು ತಡೆಗಟ್ಟಲು ಕಾವಲು ಕಾಯುತ್ತಿದ್ದಾರೆ.

-ಶಿವರಾಂ ವಲಯ, ಅರಣ್ಯ ಅಧಿಕಾರಿ, ಪಿಜಿ ಪಾಳ್ಯಕಳೆದ 2 ದಿನಗಳಿಂದ ಗುಂಡಾಲ್ ಜಲಾಶಯ ಬಳಿ ಬರುವ ಸೋಲಾರ್ ವಿದ್ಯುತ್ ಸ್ಥಾವರ ಆಸುಪಾಸಿನಲ್ಲೇ ಚಿರತೆ ಇರುವುದು ಕಂಡುಬಂದಿದೆ. ಹೀಗಾಗಿ ಮೈಸೂರು ಚಿರತೆ ಕಾರ್ಯಪಡೆಯ10ಕ್ಕೂ ಹೆಚ್ಚು ಸಿಬ್ಬಂದಿ ಜೊತೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ರೈತರ ಜಮೀನು ಮತ್ತು ಸೋಲಾರ್ ಪ್ಲಾಂಟ್ ಬಳಿ ಚಿರತೆ ಸೆರೆ ಹಿಡಿಯಲು 2 ಪಂಜರಗಳನ್ನು ಇಡಲಾಗಿದೆ. 50ಕ್ಕೂ ಹೆಚ್ಚು ಸಿಬ್ಬಂದಿ ಚಲನವಲನವನ್ನು ಗಮನಿಸುತ್ತಿದ್ದಾರೆ. -ವಾಸು ಬಿ.ಆರ್.ಟಿ ಅರಣ್ಯಾಧಿಕಾರಿ

ಕಣ್ಣ ಮುಂದೆಯೇ ಜಮೀನಿನಲ್ಲಿ ಕೆಲಸ ಮಾಡುವಾಗ ಚಿರತೆ ಮೇಕೆಯನ್ನು ಹಿಡಿದು ತಿನ್ನಲು ಯತ್ನಿಸಿದಾಗ ಅಕ್ಕಪಕ್ಕದ ನಿವಾಸಿಗಳೆಲ್ಲ ಕೂಗಿಕೊಂಡಾಗ ಚಿರತೆ ಮೇಕೆಯನ್ನು ಬಿಟ್ಟು ಓಡಿಹೋಗಿದೆ. ನಮಗೆ ಓಡಾಡಲು ಭಯವಾಗಿದೆ. ಅರಣ್ಯ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿದು ಬೇರೆಡೆ ಬಿಡಬೇಕು. -ಮಹೇಶ್, ರೈತ, ಗುಂಡಾಲ್ ತೋಟದ ಮನೆ

Share this article