ಮಲೆನಾಡಿನಲ್ಲಿ ಮಣ್ಣಿನ ಗಣಪನಿಗೆ ಹೆಚ್ಚಿದ ಬೇಡಿಕೆ

KannadaprabhaNewsNetwork |  
Published : Aug 26, 2025, 01:02 AM IST
---------------------------ಪೋಟೋ: 25ಎಸ್ಎಂಜಿಕೆಪಿ8ಶಿವಮೊಗ್ಗ ಸೈನ್ಸ್‌ ಮೈದಾನದಲ್ಲಿ ಮಾರಾಟಕ್ಕೆ ಇಟ್ಟಿರುವ ಗಣೇಶ ಮೂರ್ತಿಯನ್ನು ಜನರು ವೀಕ್ಷಿಸುತ್ತಿರುವುದು. | Kannada Prabha

ಸಾರಾಂಶ

ಸಿದ್ಧಿವಿನಾಯಕನ ಆಗಮನಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ವರ್ಷದ ಗಣೇಶೋತ್ಸವ ಕಳೆಗಟ್ಟಲಿದೆ. ಈ ಬಾರಿ ಸಾಂಪ್ರದಾಯಿಕವಾಗಿ ಗಣೇಶೋತ್ಸವ ಆಚರಿಸಲು ಜಿಲ್ಲೆ ಸಜ್ಜಾಗಿದ್ದು, ಮಾರುಕಟ್ಟೆಗೆ ಸಣ್ಣಸಣ್ಣ ಗಣೇಶ ಮೂರ್ತಿಗಳ ಜತೆಗೆ ದೊಡ್ಡ ಗಾತ್ರದ ಗಣೇಶ ಮೂರ್ತಿಗಳೂ ಲಗ್ಗೆ ಇರಿಸಿವೆ.

ಶಿವಮೊಗ್ಗ: ಸಿದ್ಧಿವಿನಾಯಕನ ಆಗಮನಕ್ಕೆ ಶಿವಮೊಗ್ಗ ಜಿಲ್ಲೆಯಾದ್ಯಂತ ಸಿದ್ಧತೆಗಳು ಭರದಿಂದ ಸಾಗಿದ್ದು, ಈ ವರ್ಷದ ಗಣೇಶೋತ್ಸವ ಕಳೆಗಟ್ಟಲಿದೆ. ಈ ಬಾರಿ ಸಾಂಪ್ರದಾಯಿಕವಾಗಿ ಗಣೇಶೋತ್ಸವ ಆಚರಿಸಲು ಜಿಲ್ಲೆ ಸಜ್ಜಾಗಿದ್ದು, ಮಾರುಕಟ್ಟೆಗೆ ಸಣ್ಣಸಣ್ಣ ಗಣೇಶ ಮೂರ್ತಿಗಳ ಜತೆಗೆ ದೊಡ್ಡ ಗಾತ್ರದ ಗಣೇಶ ಮೂರ್ತಿಗಳೂ ಲಗ್ಗೆ ಇರಿಸಿವೆ.

ಸದ್ಯ ನಗರದಲ್ಲಿ 400ರಿಂದ 15,000ವರೆಗಿನ ಮೂರ್ತಿಗಳನ್ನು ಮಾರಾಟಕ್ಕೆ ಇಡಲಾಗಿದೆ. ಮೂರ್ನಾಲ್ಕು ಅಡಿ ಎತ್ತರದ ಒಳಗಿನ ಮೂರ್ತಿಗಳು ಮಾತ್ರ ಮಾರುಕಟ್ಟೆಗೆ ಬಂದಿವೆ. ಪಿಒಪಿ ಮೂರ್ತಿಗಳ ತಯಾರಿಕೆ ಮತ್ತು ಮಾರಾಟಕ್ಕೆ ಸರ್ಕಾರ ವರ್ಷಗಳ ಹಿಂದೆಯೇ ನಿಷೇಧ ಹೇರಿದ್ದು, ಸದ್ಯ ಮಣ್ಣಿನ ಮೂರ್ತಿಗಳು ಮಾತ್ರ ಬಂದಿವೆ. ಸಣ್ಣ ಗಾತ್ರದ ಗೌರಿ–ಗಣೇಶ ಮೂರ್ತಿಗೆ 300ರಿಂದ 400 ರು. ಇದೆ. ಒಂದು ಅಡಿಗಿಂತ ದೊಡ್ಡಗಾತ್ರದ ಮೂರ್ತಿಗಳ ಬೆಲೆ 1,000 ರು.ಕ್ಕಿಂತ ಹೆಚ್ಚೇ ಇದೆ. 5 ಅಡಿ ಗಣೇಶ ಮೂರ್ತಿ 15,000 ರು.ವರೆಗೆ ಇದೆ. ಕೊಂಚ ಹೊಸ ವಿನ್ಯಾಸದ ಮೂರ್ತಿಗಳು ಬೇಕೆಂದರೆ ದುಪ್ಪಟ್ಟು ಬೆಲೆ ತೆರಬೇಕಿದೆ.

ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಮೂರ್ತಿಗಳು ಬಂದಿವೆ. ಮತ್ತೊಂದೆಡೆ, ಮೂರ್ತಿ ತಯಾರಿಕೆಯ ಜೇಡಿ ಮಣ್ಣಿನ ಬೆಲೆ ಹೆಚ್ಚಿದೆ. ಜೊತೆಗೆ ಪೆಟ್ರೋಲ್‌–ಡೀಸೆಲ್‌ ಬೆಲೆ ಏರಿಕೆಯಿಂದಾಗಿ ಸಾಗಣೆ ವೆಚ್ಚ ದುಬಾರಿಯಾಗಿದೆ. ಈ ಎಲ್ಲ ಕಾರಣಕ್ಕೆ ಮೂರ್ತಿಗಳ ಮಾರಾಟ ದರ ಹೆಚ್ಚಾಗಿದೆ’ ಎನ್ನುವುದು ಗಣೇಶ ಮೂರ್ತಿ ಮಾರಾಟಗಾರರ ಅಭಿಪ್ರಾಯ.

ನಮ್ಮ ಅಜ್ಜನ ಕಾಲದಿಂದಲೂ ನಾವು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಕೊಂಡಿದ್ದೇವೆ. ಭದ್ರಾವತಿ, ಕುಂಸಿ, ಆಯನೂರು ಭಾಗದಿಂದ ಮಣ್ಣು ತಂದು ವಿಗ್ರಹ ಮಾಡುತ್ತೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ಗಣೇಶನ ಮೂರ್ತಿಗೆ ಬೇಡಿಕೆ ಕಡಿಮೆ ಇದೆ. ಕೆಲವು ಸಂಘ-ಸಂಸ್ಥೆಯವರು ಮುನ್ನವೇ ಮುಗಂಡ ಹಣವನ್ನು ನೀಡಿ ಮೂರ್ತಿಗೆ ಬುಕ್‌ ಮಾಡುತ್ತಾರೆ. ಇನ್ನು ಅನೇಕರು ಹಬ್ಬದ ದಿನವೇ ಬಂದು ಖರೀದಿ ಮಾಡುತ್ತಾರೆ. ಈ ವರ್ಷ 100 ಮೂರ್ತಿಗಳಿಗೆ ಬೇಡಿಕೆ ಬಂದಿದೆ ಎನ್ನುತ್ತಾರೆ ಮೂರ್ತಿ ಕಲಾವಿದ ಗಣೇಶ್‌.ಪರಿಸರ ಸ್ನೇಹಿ ಗಣಪ ಮಾರಾಟ ಹೆಚ್ಚು:

ಪರಿಸರಕ್ಕೆ ಮಾರಕವಾದ ಪಿಒಪಿ ಗಣಪತಿಗಳನ್ನು ನಿಷೇಧಿಸಿದ ಕಾರಣ ಬೃಹತ್ ಮೂರ್ತಿಗಳನ್ನು ಸ್ಥಾಪಿಸುವ ಪರಿಪಾಠಕ್ಕೆ ಬಹುತೇಕ ಕಡಿವಾಣ ಬಿದ್ದಿದೆ. ಇತ್ತೀಚಿನ ವರ್ಷಗಳಲ್ಲಿ ಪರಸರ ಸ್ನೇಹಿ, ಬಣ್ಣ ರಹಿತ ಗಣೇಶ ಮೂರ್ತಿ ಬಳಕೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ತಯಾರಕರೂ ಪರಿಸರ ಸ್ನೇಹಿ ಮೂರ್ತಿಗಳನ್ನು ಸಿದ್ಧಪಡಿಸಿದ್ದು, ಅವುಗಳೇ ಈಗ ಹೆಚ್ಚು ಮಾರಾಟ ಆಗುತ್ತಿವೆ.

ಕಲಾವಿದರ ಸಂಖ್ಯೆ ಗಣನೀಯವಾಗಿ ಇಳಿಕೆ

ಶಿವಮೊಗ್ಗ ನಗರದಲ್ಲಿ ಕೆಲವು ಕುಂಬಾರಿಕೆ ಕುಟುಂಬಗಳು ಕೈ ಕುಸುರಿಯಲ್ಲಿ ಜೇಡಿ ಮಣ್ಣಿನ ಪರಿಸರಸ್ನೇಹಿ ಗಣಪ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡಿ ಬದುಕು ನಡೆಸುತ್ತಿವೆ. ಪ್ರಮುಖವಾಗಿ ಈ ಹಿಂದಿನಿಂದಲೂ ಜೇಡಿ ಮಣ್ಣಿನ ಗಣೇಶ ಮೂರ್ತಿ ತಯಾರಿಕೆಯಲ್ಲಿ ಹಲವು ಕುಂಬಾರಿಕೆ ಕುಟುಂಬಗಳು ಗುರುತಿಸಿಕೊಂಡಿವೆ.

ಗೌರಿ ಮತ್ತು ಗಣೇಶ ಹಬ್ಬಕ್ಕೆ ಮುಂಚಿತವಾಗಿ ಮಣ್ಣು ಹದ ಮಾಡಿ ಕುಸುರಿಯಲ್ಲಿ ನೂರಾರು ಗಣೇಶ ಮೂರ್ತಿ ತಯಾರಿಸಿ ಹಾನಿಕಾರಕವಲ್ಲದ ನೈಸರ್ಗಿಕ ಬಣ್ಣ ಹಚ್ಚಿ, ನಗರ ಪ್ರದೇಶದಲ್ಲಿ ಗಣೇಶಮೂರ್ತಿ ಮಾರಾಟಮಾಡಿ ಬದುಕು ಸಾಗಿಸುತ್ತಿವೆ.

ಚಿಕ್ಕ ಮೂರ್ತಿಗಳಿಂದ ಹಿಡಿದು ದೊಡ್ಡ ದೊಡ್ಡ ಗಣೇಶಮೂರ್ತಿಗಳನ್ನು ಪರಿಸರಸ್ನೇಹಿಯಾಗಿ ತಯಾರು ಮಾಡುವುದು ವಿಶೇಷ. ಜಿಲ್ಲೆಯ ನೂರಾರು ಗ್ರಾಮಗಳ ಭಕ್ತ ಮಂಡಳಿಗಳು ನಗರದ ಗಣೇಶಮೂರ್ತಿಗಳನ್ನೇ ಕೊಂಡು ಗಣೇಶ ಹಬ್ಬ ಆಚರಿಸುತ್ತಿದ್ದ ಕಾಲವೂ ಇತ್ತು. ಆದರೆ, ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬಣ್ಣ ಬಣ್ಣದ ಗಣೇಶಮೂರ್ತಿಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿರುವುದು ಹಾಗೂ ರಾಜಕಾರಣಿಗಳು ಬೇರೆ ಕಡೆಯಿಂದ ನೂರಾರು ಮೂರ್ತಿಗಳನ್ನು ಒಟ್ಟಿಗೆ ತಂದು ಮಾರಾಟ ಮಾಡುತ್ತಿರುವುದರಿಂದ ಇತ್ತೀಚೆಗೆ ಜೇಡಿ ಮಣ್ಣಿನ ಗಣೇಶಮೂರ್ತಿಗಳಿಗೆ ಅಷ್ಟಾಗಿ ಬೇಡಿಕೆ ಇಲ್ಲದಂತಾಗಿದೆ.

ನೂರಾರು ಗಣೇಶಮೂರ್ತಿ ತಯಾರಿಸುತ್ತಿದ್ದ ಗಣೇಶ ಮೂರ್ತಿ ತಯಾರಿಕರು ಈಗ ಬೆರಳೆಣಿಕೆಯಷ್ಟು ಮಾತ್ರ ಮೂರ್ತಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಅಲ್ಲದೆ ಗಣೇಶ ಮೂರ್ತಿ ತಯಾರಿಸುತ್ತಿದ್ದ ಕಲಾವಿದರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ನಡುವೆ ಮೋಲ್ಡ್‌ಗಳಿಂದ ತಯಾರಿಸುವ ಮೂರ್ತಿಗಳನ್ನು ಹೊರ ಜಿಲ್ಲೆಗಳಿಂದ ತಂದು ಮನಬಂದಂತೆ ದರ ನಿಗದಿಪಡಿಸಿ ಮಾರಾಟ ಮಾಡುವುದು ಸ್ಥಳೀಯರ ದುಡಿಮೆಗೆ ಪೆಟ್ಟು ನೀಡುತ್ತಿದೆ.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ