)
ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಕೃಷಿ ಕ್ಷೇತ್ರದಲ್ಲಿ ಹೆಚ್ಚುವರಿ ಇಳುವರಿಗಾಗಿ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸಿ ಕೈ ಸುಟ್ಟುಕೊಳ್ಳುವ ಬದಲು ಭೂಮಿಯ ಫಲವತ್ತತೆ ಹೆಚ್ಚಿಸಲು ರೈತರು ಕಂಡುಕೊಂಡ ಮಾರ್ಗ ಇದಾಗಿದೆ. ಮಣ್ಣಿನ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಗಣಿ ಗೊಬ್ಬರ ರೈತರಿಗೆ ವರದಾನವಾಗಿದೆ.
ಪಟ್ಟಣ ಸೇರಿದಂತೆ ತಾಲೂಕಿನ ದೋಟಿಹಾಳ, ಮುದೇನೂರು, ತಾವರಗೇರಾ, ಬಿಜಕಲ್ ಹೆಸರೂರು, ಕೇಸೂರು, ಕ್ಯಾದಿಗುಪ್ಪ, ಗೋತಗಿ, ಹಿರೇಮನ್ನಾಪೂರು, ಕಂದಕೂರು, ಟಕ್ಕಳಕಿ, ಶಾಖಾಪೂರು, ತಳುವಗೇರಾ ಸೇರಿದಂತೆ ಅನೇಕ ಗ್ರಾಮಗಳ ರೈತರು ಸಗಣಿ ಗೊಬ್ಬರ ಹೆಚ್ಚು ಬಳಕೆಗೆ ಮುಂದಾಗಿದ್ದಾರೆ. ಇಲ್ಲಿನ ರೈತರು ಜಾನುವಾರುಗಳ ಸಗಣಿ, ಮೂತ್ರ, ಕಸಕಡ್ಡಿ ನಿತ್ಯ ತಿಪ್ಪೆಗುಂಡಿಗೆ ಸೇರಿಸುತ್ತಿದ್ದಾರೆ. ಎರೆಹುಳು ತ್ಯಾಜ್ಯ ತಿಂದು ಅತ್ಯುತ್ತಮ ಗೊಬ್ಬರ ತಯಾರಾಗುತ್ತದೆ. ಒಮ್ಮೆ ಸಗಣಿ ಗೊಬ್ಬರ ಹೊಲದಲ್ಲಿನ ಮಣ್ಣಿಗೆ ಸುರಿದರೆ ಅದು ಮೂರ್ನಾಲ್ಕು ವರ್ಷ ಪೋಷಕಾಂಶ ಒದಗಿಸುತ್ತದೆ.ಸಗಣಿ ಗೊಬ್ಬರಕ್ಕೆ ಬೇಡಿಕೆ:ತಂತ್ರಜ್ಞಾನ ಬೆಳೆದಂತೆ ರೈತರು ಯಂತ್ರಗಳಿಗೆ ಮಾರು ಹೋಗಿದ್ದರಿಂದ ದಿನದಿಂದ ದಿನಕ್ಕೆ ಜಾನುವಾರುಗಳ ಸಾಕಾಣಿಕೆ ಕಡಿಮೆ ಆಗುತ್ತಿದೆ. ಇದು ಸಗಣಿ ಗೊಬ್ಬರದ ಬೇಡಿಕೆ ಹೆಚ್ಚಾಗಲು ಕಾರಣವಾಗಿದೆ. ಅತ್ಯಂತ ಗುಣಮಟ್ಟದ ಸಗಣಿ ಗೊಬ್ಬರ ಟ್ರಾಕ್ಟರ್‌ಗೆ ₹6 ಸಾವಿರದಿಂದ ₹ 8 ಸಾವಿರ ಬೆಲೆ ಇದೆ. ಮೊದಲಿನಿಂದಲೂ ಭೂಮಿಯ ಫಲವತ್ತತೆಗೆ ಸಗಣಿ ಗೊಬ್ಬರ ಬಳಸುತ್ತಿದ್ದರು. ಆದರೆ ರಾಸಾಯನಿಕ ಗೊಬ್ಬರದ ಬಳಕೆ ಆರಂಭವಾಗುತ್ತಿದ್ದಂತೆ ಸಾಂಪ್ರದಾಯಿಕ ಸಗಣಿ ಗೊಬ್ಬರಕ್ಕೆ ಬೇಡಿಕೆ ಕಡಿಮೆಯಾಗಿತ್ತು. ಇದೀಗ ಮತ್ತೆ ರೈತರು ಸಗಣಿ ಗೊಬ್ಬರದತ್ತ ಮುಖ ಮಾಡಿದ್ದಾರೆ.
ಸಗಣಿ ಒಂದು ಬಹುಮುಖ ನೈಸರ್ಗಿಕ ಸಂಪನ್ಮೂಲವಾಗಿದ್ದು, ಕೃಷಿ, ಪರಿಸರ ಕ್ಷೇತ್ರಗಳಲ್ಲಿ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಮಣ್ಣಿಗೆ ನೈಸರ್ಗಿಕ ಪೋಷಕಾಂಶ ಒದಗಿಸುತ್ತದೆ. ಮಣ್ಣಿನ ಆರೋಗ್ಯ ಸುಧಾರಣೆ ಸಗಣಿ ಮಣ್ಣಿನ ಭೌತಿಕ ಮತ್ತು ರಾಸಾಯನಿಕ ಗುಣ ಉತ್ತಮಗೊಳಿಸುತ್ತದೆ ಎಂದು ಕುಷ್ಟಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಕಾತರಕಿ ತಿಳಿಸಿದ್ದಾರೆ.