ರವಿ ಮೇಗಳಮನಿ
ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದ್ದು, ಇದರಿಂದ ಬೀದಿಬದಿ ವ್ಯಾಪಾರಸ್ಥರು, ವೃದ್ಧರು, ಮಹಿಳೆಯರು, ಮಕ್ಕಳು ಮನೆಯಿಂದ ಹೊರಬರಲು ಭಯಪಡುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣ, ಸಂತೆ ಮೈದಾನ, ಸಿಇಎಸ್ ಸಂಸ್ಥೆ, ಪೇಟೆ ಬಸವೇಶ್ವರ ದೇವಸ್ಥಾನದ ಬಳಿ, ಚೌಡಿ ಸರ್ಕಲ್, ಜಾಲಿಕಟ್ಟೆ, ಮಿನಿ ವಿಧಾನಸೌಧದ ಮುಂಭಾಗ, ಸರ್ವಜ್ಞ ಸರ್ಕಲ್, ಗುರುಭವನ, ವಿದ್ಯಾನಗರ, ಜನತಾ ಪ್ಲಾಟ್, ಹೌಸಿಂಗ್ ಬೋರ್ಡ್, ಸಂತೆ ಮೈದಾನ, ಪಟ್ಟಣ ಪಂಚಾಯಿತಿ ಬಳಿ ಸೇರಿದಂತೆ ಪ್ರಮುಖ ರಸ್ತೆ, ವಿವಿಧ ಕಾಲನಿಗಳಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದೆ.ಗುಂಪು ಗುಂಪಾಗಿ ಬೀದಿ ನಾಯಿಗಳು ಬೀಡು ಬಿಟ್ಟಿವೆ. ಇನ್ನು ಹಂದಿಗಳ ಮೇಲಿನ ದಾಳಿಗಳ ಸಂಖ್ಯೆಯಂತೂ ಮೀತಿ ಮೀರುತ್ತಿದೆ. ಬೆಳಗ್ಗೆ ವಾಯು ವಿಹಾರಕ್ಕೆ ತೆರಳುವ ಸಾರ್ವಜನಿಕರ ಮೇಲೂ ನಾಯಿಗಳು ಎರಗಿ ಗಾಯಗೊಳಿಸಿದ ಘಟನೆಗಳು ನಡೆದಿವೆ. ಇನ್ನು ಬೈಕಿಗೆ ನಾಯಿಗಳು ಅಡ್ಡ ಬಂದ ಪರಿಣಾಮ ಅನೇಕ ಬೈಕ್ ಸವಾರರು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಕ್ಕಳು ಜೀವಭಯದಿಂದಲೇ ಶಾಲೆಗೆ ಹೋಗಿ ಬರುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಮಹಿಳೆಯರು, ವೃದ್ಧರು ಪಟ್ಟಣದಲ್ಲಿ ರಸ್ತೆಗಿಳಿಯಲು ಯೋಚನೆ ಮಾಡುವಂತಾಗಿದೆ.
ಬೀದಿ ನಾಯಿಗಳ ಹಾವಳಿ ಕುರಿತು ನನ್ನ ಗಮನಕ್ಕೆ ಈಗಾಗಲೇ ಬಂದಿದ್ದು, ಕಿರಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ಪಟ್ಟಣದಲ್ಲಿ ನಾಯಿಗಳ ಹಾವಳಿ ನಿಯಂತ್ರಣ ಕ್ರಮಕೈಗೊಳ್ಳಲಾಗುವುದು. ಶೀಘ್ರದಲ್ಲಿ ಬೀದಿ ನಾಯಿಗಳನ್ನು ಹಿಡಿದು ಸ್ಥಳಾತರಿಸಲಾಗುವುದು ಎನ್ನುತ್ತಾರೆ ಪಪಂನ ಸಮುದಾಯ ಸಂಘಟನಾಧಿಕಾರಿ ಸಿ.ಎಂ. ಪುಟ್ಟಕ್ಕಳವರ.