ತುರುವೇಕೆರೆ ತಾಲೂಕಿನಲ್ಲಿ ಹೆಚ್ಚಿದ ಚಿರತೆ ದಾಳಿ

KannadaprabhaNewsNetwork | Published : Dec 11, 2024 12:45 AM

ಸಾರಾಂಶ

ತಾಲೂಕಿನ ಅಮ್ಮಸಂದ್ರ, ಹಡವನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ, ತುರುವೇಕೆರೆ

ತಾಲೂಕಿನ ಅಮ್ಮಸಂದ್ರ, ಹಡವನಹಳ್ಳಿ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿದೆ. ಅಮ್ಮಸಂದ್ರದ ಸುತ್ತಮುತ್ತಲ ಗ್ರಾಮಗಳಾಗಿರುವ ಹಡವನಹಳ್ಳಿ, ಚಾಕುವಳ್ಳಿ, ಚಾಕುವಳ್ಳಿ ಪಾಳ್ಯ, ಹಾಲಪ್ಪನ ಕಟ್ಟೆ, ಹೊನ್ನೇನಹಳ್ಳಿ, ಗೊಲ್ಲರಹಟ್ಟಿ, ಜನತಾ ಕಾಲೋನಿ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಲ್ಲಿ ಚಿರತೆಯ ಕಾಟ ಹೆಚ್ಚಾಗಿದೆ. ಕಳೆದ ಒಂದು ತಿಂಗಳಿನಿಂದ ಚಿರತೆಯ ದಾಳಿಗೆ ಮೂವತ್ತಕ್ಕೂ ಹೆಚ್ಚು ಮೇಕೆ, ಟಗರು, ಕುರಿಗಳು, ಎಮ್ಮೆ, ಹಸು ಸೇರಿದಂತೆ ಸಾಕು ಪ್ರಾಣಿಗಳು ಚಿರತೆಗೆ ಬಲಿಯಾಗಿವೆ.

ಅಮ್ಮಸಂದ್ರ ಸುತ್ತಮುತ್ತ ಇರುವ ಅರಣ್ಯ ಪ್ರದೇಶದಲ್ಲಿ ರೈತಾಪಿಗಳು ದನಕರುಗಳನ್ನು ಮೇಯಿಸಲು ಹೋದ ಸಂದರ್ಭದಲ್ಲಿ ಹಾಡುಹಗಲೇ ಚಿರತೆಗಳು ದಾಳಿ ಮಾಡಿ ಸಾಕು ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿವೆ ಎಂದು ಗ್ರಾಮದ ಮುಖಂಡರಾದ ಹೊಣಕೆರೆ ಕೃಷ್ಣಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ. ಈ ಗ್ರಾಮಗಳ ಸುತ್ತಮುತ್ತ ನಾಲ್ಕೈದು ಚಿರತೆಗಳು ಇದೆ ಎಂದು ಕೃಷ್ಣಸ್ವಾಮಿ ತಿಳಿಸಿದ್ದಾರೆ. ಚಾಕುವಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಜಗದೀಶ್ ಎಂಬುವವರ ಸೀಮೆ ಹಸುವಿನ ಮೇಲೆ ಚಿರತೆ ಹಾಡುಹಗಲೇ ದಾಳಿ ಮಾಡಿದೆ. ಜನರು ಕಿರುಚಾಡಿದ್ದರಿಂದ ಚಿರತೆ ಓಡಿಹೋಗಿದೆ. ಗೊಲ್ಲರಹಟ್ಟಿಯ ಸೋಮಶೇಖರ್, ನಾಗರಾಜ್, ಹಾಲಪ್ಪನಕಟ್ಟೆಯ ಮುನ್ನನರಸಯ್ಯ, ಆಸೀಫ್, ರಫೀಕ್, ಖಲೀಲ್, ಜಯರಾಮ್ ಎಂಬುವರಿಗೆ ಸೇರಿದ ಮೇಕೆ, ಕುರಿಗಳು ಮತ್ತು ಟಗರುಗಳನ್ನು ಚಿರತೆ ಬೇಟೆಯಾಡಿದೆ. ಹಾಗಾಗಿ ರೈತರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕೆಂದು ಹೊಣಕೆರೆ ಕೃಷ್ಣಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗ್ರಾಮದ ಮುಖಂಡರಾದ ನಾಗರಾಜು, ಜಗದೀಶ್, ತಿಮ್ಮೇಗೌಡ, ಹೋಟೆಲ್ ಸ್ವಾಮಿ ಸೇರಿದಂತೆ ಹಲವಾರು ಮಂದಿ ಚಿರತೆಯ ಕಾಟಕ್ಕೆ ಆತಂಕ ವ್ಯಕ್ತಪಡಿಸಿದ್ದಾರೆ. ಮುಂಬರುವ ದಿನಗಳಲ್ಲಿ ಜನರ ಮೇಲೂ ಚಿರತೆ ದಾಳಿ ಮಾಡುವ ಸಂಭವವಿದೆ. ಹಾಗಾಗಿ ಅರಣ್ಯ ಇಲಾಖೆಯವರು ಕೂಡಲೇ ಚಿರತೆಯನ್ನು ಹಿಡಿಯಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

Share this article