ಮುಂಡರಗಿಯಲ್ಲಿ ಹೆಚ್ಚಿದ ಬೀದಿ ನಾಯಿಗಳ ಹಾವಳಿ

KannadaprabhaNewsNetwork |  
Published : Mar 16, 2024, 01:51 AM IST
ಮುಂಡರಗಿ ಪಟ್ಟಣದ ಜಾಗೃತ ವೃತ್ತದ ಹತ್ತಿರವಿರುವ  ಬೀದಿ ನಾಯಿಗಳು. | Kannada Prabha

ಸಾರಾಂಶ

ಸ್ವತಃ ಸದಸ್ಯರೇ ಈ ಹಿಂದೆ ಅನೇಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರೂ ಸಹ ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಕ್ರಮವಾಗಿಲ್ಲ

ಶರಣು ಸೊಲಗಿ ಮುಂಡರಗಿ

ಮುಂಡರಗಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿಯಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದು, ಜ.30 ರಂದು ಜರುಗಿದ ಜನತಾ ದರ್ಶನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಪಶು ಸಂಗೋಪನಾ ಇಲಾಖೆಗೆ ತಿಂಗಳೊಳಗೆ ಬೀದಿ ನಾಯಿಗಳನ್ನು ಹಿಡಿಯುವಂತೆ ಸೂಚಿಸಿದರೂ ಇದುವರೆಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.

ಪಟ್ಟಣದ ಜಾಗೃತ ವೖತ್ತ, ಭಜಂತ್ರಿ ಓಣಿ, ಕೊಪ್ಪಳ ವೃತ್ತ, ಬಜಾರ, ದೋಸಿಗೇರ ಓಣಿ, ಹೆಸರೂರ ರಸ್ತೆ ಆಶ್ರಯ ಕಾಲನಿ, ಗದಗ ಮುಂಡರಗಿ ಪ್ರಮುಖ ರಸ್ತೆ, ಎಸ್.ಎಸ್. ಪಾಟೀಲನಗರ, ಹೊಸ ಎಪಿಎಂಸಿ, ಬ್ಯಾಲವಾಡಗಿ, ವಿದ್ಯುತ್ ನಗರ ಸೇರಿದಂತೆ ಅನೇಕ ಕಡೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ರಾತ್ರಿ ವೇಳೆ ಕೆಲವು ಪ್ರದೇಶಗಳಲ್ಲಿ ಜನರು ಓಡಾಡಲು ಭಯಪಡುವಂತಾಗಿದೆ.

ಪಟ್ಟಣದ ಜಾಗೃತ ವೃತದ ಆಸುಪಾಸಿನಲ್ಲಿ ಸುಮಾರು 20 ಬೀದಿ ನಾಯಿಗಳು ವಾಸವಾಗಿದ್ದು, ಹಗಲು ಹೊತ್ತಿನಲ್ಲಿಯೇ ಜನರ ಮೇಲೆ ದಾಳಿ ಮಾಡಿ ಅಲ್ಲಿ ಯಾರೂ ಓಡಾಡದಂತೆ ಮಾಡಿವೆ. ಭಜಂತ್ರಿ ಓಣಿ, ಬ್ಯಾಲವಾಡಗಿ ರಸ್ತೆ, ಹೆಸರೂರ ರಸ್ತೆ ಆಶ್ರಯ ಕಾಲನಿಯಲ್ಲಿಯೂ ಸಹ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ. ಸಂಜೆ ವೇಳೆ ಅಲ್ಲಿನ ನಿವಾಸಿಗಳೇ ಬಂದರೂ ನಾಯಿಗಳು ಒಮ್ಮೆಲೆ ದಾಳಿ ಮಾಡುತ್ತದೆ. ಅನೇಕರು ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಬೈಕ್ ಹಾಕಿಕೊಂಡು ಬಿದ್ದಿರುವ ಉದಾಹರಣೆಗಳಿವೆ.

ಬೀದಿನಾಯಿಗಳ ಹಾವಳಿ ತಡೆಯುವಂತೆ ಅನೇಕ ಬಾರಿ ಸಾರ್ವಜನಿಕರು ಪುರಸಭೆಗೆ ಮನವಿ ಸಲ್ಲಿಸಿದ್ದಾರೆ. ಸ್ವತಃ ಸದಸ್ಯರೇ ಈ ಹಿಂದೆ ಅನೇಕ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರೂ ಸಹ ಸಂಬಂಧ ಪಟ್ಟ ಇಲಾಖೆಯಿಂದ ಯಾವುದೇ ಕ್ರಮವಾಗಿಲ್ಲ.

ಜ.30 ರಂದು ಮುಂಡರಗಿಯಲ್ಲಿ ಜರುಗಿದ ಜನತಾ ದರ್ಶನದಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವಂತೆ ಮನವಿ ಸಲ್ಲಿಸಿದ ಹಿನ್ನೆಲೆ ಸಚಿವ ಎಚ್.ಕೆ.ಪಾಟೀಲ ಅವರು ಪಶು ಸಂಗೋಪನಾ ಇಲಾಖೆಗೆ ತಿಂಗಳಲ್ಲಿ ಬೀದಿ ನಾಯಿಗಳನ್ನು ಹಿಡಿದು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಲು ಸೂಚನೆ ನೀಡಿ ಒಂದೂವರೆ ತಿಂಗಳಾದರೂ ಇದುವರೆಗೂ ಒಂದೇ ಒಂದು ಬೀದಿನಾಯಿಯ ಸಂಖ್ಯೆ ಕಡಿಮೆಯಾಗಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಪಟ್ಟಣದ ಜಾಗೃತ ವೃತ್ತದ ಹತ್ತಿರ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಅವುಗಳಿಂದ ಸಾರ್ವಜನಿಕರಿಗೆ ನಿತ್ಯ ಒಂದಿಲ್ಲೊಂದು ರೀತಿಯ ತೊಂದರೆಯಾಗುತ್ತಿದೆ. ಹೀಗಾಗಿ ತಕ್ಷಣವೇ ಕ್ರಮ ತೆಗೆದುಕೊಂಡು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಿ, ನಿರ್ಭಿಡೆಯಿಂದ ಓಡಾಡುವಂತೆ ಮಾಡಬೇಕು ಎಂದು ಯುವಮುಖಂಡ ದೇವಪ್ಪ ಇಟಗಿ ಹೇಳಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ