ವಿವಿಸಾಗರ ಜಲಾಶಯಕ್ಕೆ ಹೆಚ್ಚುತ್ತಿರುವ ಒಳಹರಿವು

KannadaprabhaNewsNetwork |  
Published : Oct 24, 2025, 01:00 AM IST
ಪೋಟೋ, 23ಎಚ್‌ಎಸ್‌ಡಿ1, 23ಎಚ್‌ಎಸ್‌ಡಿ2: ಹೊಸದುರ್ಗ ತಾಲೂಕಿನ ಮಾಡದಕೆರೆ ಹೋಬಳಿಯ ಲಿಂಗದಹಳ್ಳಿ ಹಾಗೂ ಮಾಳಿಗೆಹಳ್ಳಿ ಗ್ರಾಮದ ಬಳಿ ವಿವಿಸಾಗರ ಜಲಾಶಯದ ಹಿನ್ನಿರು ಕೃಷಿ ಬೂಮಿಗೆ ನುಗ್ಗಿರುವುದು. | Kannada Prabha

ಸಾರಾಂಶ

ವಿವಿಸಾಗರ ಜಲಾಶಯ ತುಂಬಿ 4ನೇ ಬಾರಿಗೆ ಕೋಡಿ ಬಿದ್ದ ಸಂತಸದಲ್ಲಿ ಹಿರಿಯೂರು ತಾಲೂಕಿನ ಜನರಿದ್ದರೆ ಇತ್ತ ಹೊಸದುರ್ಗ ತಾಲೂಕಿನ ಜಲಾಶಯದ ಹಿನ್ನೀರಿನ ಗ್ರಾಮಗಳ ಜನ ಕಣ್ಣೀರು ಹಾಕುವಂತಾಗಿದೆ.

ಕನ್ನಡಪ್ರಭ ವಾರ್ತೆ ಹೊಸದುರ್ಗ

ವಿವಿಸಾಗರ ಜಲಾಶಯ ತುಂಬಿ 4ನೇ ಬಾರಿಗೆ ಕೋಡಿ ಬಿದ್ದ ಸಂತಸದಲ್ಲಿ ಹಿರಿಯೂರು ತಾಲೂಕಿನ ಜನರಿದ್ದರೆ ಇತ್ತ ಹೊಸದುರ್ಗ ತಾಲೂಕಿನ ಜಲಾಶಯದ ಹಿನ್ನೀರಿನ ಗ್ರಾಮಗಳ ಜನ ಕಣ್ಣೀರು ಹಾಕುವಂತಾಗಿದೆ.

ಕಳೆದ ಒಂದು ವಾರದಿಂದ ವೇದಾವತಿ ನದಿ ಪಾತ್ರ ಸೇರಿದಂತೆ ವಿವಿ ಸಾಗರ ಜಲಾಶಯಕ್ಕೆ ಹರಿದು ಬರುವ ಹಳ್ಳ ಪ್ರದೇಶ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳ ಹರಿವು ಹೆಚ್ಚಾಗುತ್ತಿರುವ ಕಾರಣ ಹಿನ್ನೀರಿನ ಕೃಷಿ ಜಮೀನು ಸೇರಿದಂತೆ ಗ್ರಾಮಗಳಿಗೆ ಜಲಾಶಯದ ನೀರು ತುಂಬಿಕೊಳ್ಳುತ್ತಿದ್ದು, ಈ ಬಾಗದ ಜನ ಕಂಗಾಲಾಗಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆ ಇದೇ ರೀತಿ ಸುರಿದ ಮಹಾ ಮಳೆಗೆ ಜಲಾಶಯದ ನೀರಿನ ಮಟ್ಟ 135 ಅಡಿ ತಲುಪಿತ್ತು, ಇದರಿಂದ ಹಿನ್ನಿರಿನ ಅನೇಕ ಗ್ರಾಮಗಳು ರಸ್ತೆ ಸಂಪರ್ಕ ಕಡಿತಗೊಂಡು ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ಥವ್ಯಸ್ಥಗೊಂಡಿತ್ತು. ಅಲ್ಲದೆ ವಿವಿಸಾಗರ ಜಲಾಶಯಕ್ಕೆ ಭದ್ರಾ ನೀರು ಹರಿಯುವ ಕಾರಣ ಪ್ರತಿ ವರ್ಷ ಜಲಾಶಯ ತುಂಬುವ ಸಾಧ್ಯತೆ ಹೆಚ್ಚಿದ್ದು, ಕೋಡಿಯನ್ನು ತಗ್ಗಿಸುವಂತೆ ಹೊಸದುರ್ಗ ತಾಲೂಕಿನ ಜನ ಪ್ರತಿನಿಧಿಗಳಿಂದ ಒತ್ತಾಯ ಕೇಳಿ ಬಂದಿತ್ತು, ಆದರೆ ಇದಕ್ಕೆ ಹಿರಿಯೂರು ತಾಲೂಕಿನ ರೈತ ಸಂಘಟನೆಗಳು , ಜಿಲ್ಲೆಯ ರೈತ ಮುಖಂಡರು ಸೇರಿದಂತೆ ಹೊಸದುರ್ಗ ತಾಲೂಕಿನ ಕೆಲ ರೈತ ಮುಖಂಡರು ವಿರೋಧ ವ್ಯಕ್ತ ಪಡಿಸಿದ್ದರು.

ರೈತ ಸಂಘಟನೆಗಳ ವಿರೋಧವನ್ನು ಲೆಕ್ಕಿಸದೆ ಶಾಸಕ ಬಿಜಿ ಗೋವಿಂದಪ್ಪ, ನಮ್ಮ ತಾಲೂಕಿನ ರೈತರ ಜನರ ಹಿತ ಮುಖ್ಯ ಎಂದು ಕೋಡಿಗೆ ಕ್ರಸ್ಟ್ ಗೇಟ್‌ ಅಳವಡಿಸಲು ಸರ್ಕಾರದ ಗಮನಕ್ಕೆ ತಂದು ಯೋಜನೆ ತಯಾರಿಸಿ ಕೇಂದ್ರದ ಅನುಮೋದನೆಗೆ ಕಳಿಸಿದ್ದಾರೆ. ಸದ್ಯದಲ್ಲಿಯೇ ಕೆಲಸ ಪ್ರಾರಂಭಗೊಳ್ಳಲಿದೆ ಎನ್ನುವ ಭರವಸೆಯನ್ನು ನೀಡುತ್ತಿದ್ದಾರೆ. ಅಲ್ಲದೆ ಸದ್ಯದ ಪರಿಸ್ಥಿತಿಯನ್ನು ನಿಭಾಯಿಸಲು ಜಲಾಶಯದ ತೂಬನ್ನು ಎತ್ತಿ ನೀರು ಬಿಡಿಸಲಾಗುತ್ತಿದೆಯಾದರೂ ಜಲಾಶಯದಿಂದ ಹೊರಹೋಗುತ್ತಿರುವ ನೀರಿನ ಪ್ರಮಾಣಕ್ಕಿಂತ ಹೆಚ್ಚಿನ ನೀರು ಒಳಬರುತ್ತಿದೆ ಹಾಗಾಗಿ ಇದರಿಂದ ಮತ್ತೆ ಹಿನ್ನಿರಿನ ಗ್ರಾಮಗಳು ಜಲಾವೃತವಾಗುತ್ತಿವೆ.

ಶಾಶ್ವತ ಪರಿಹಾರ ನೀಡಿ: ಗೂಳೀಹಟ್ಟಿ

ವಿವಿಸಾಗರ ಜಲಾಶಯದ ಹಿನ್ನಿರಿನ ಗ್ರಾಮಗಳ ಕೃಷಿ ಜಮೀನು ಸೇರಿದಂತೆ ಗ್ರಾಮಗಳಿಗೆ ನೀರು ನುಗ್ಗುತ್ತಿರುವ ಹಿನ್ನಲೆಯಲ್ಲಿ ಮಾಜಿ ಶಾಸಕ ಗೂಳೀಹಟ್ಟಿ ಶೇಖರ್‌ ಮತ್ತೆ ಜಲಾಶಯದ ಕೋಡಿ ತಗ್ಗಿಸಿ ಹೊಸದುರ್ಗ ತಾಲೂಕಿನ ಹಿನ್ನಿರಿನ ಜನರಿಗೆ ಶಾಶ್ವತ ಪರಿಹಾರ ಒದಗಿಸಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಜಲಾಶಯ ತುಂಬಿ ಕೋಡಿ ಬಿದ್ದಿರುವುದು ಸಂತಸವೇ ಆದರೆ, ಇದರಿಂದ ನಮ್ಮ ತಾಲೂಕಿನ ಜನ ಸಂಕಷ್ಠದಲ್ಲಿರುವಾಗ ಹೇಗೆ ಸಂತಸ ಪಡಲು ಸಾಧ್ಯ. ಜನರ ಹಿತ ಕಾಯಲು ಸರ್ಕಾರಗಳು ಮುಂದಾಗಬೇಕು ಜಲಾಶಯಕ್ಕೆ ಜಮೀನು ಕಳೆದುಕೊಂಡಿರುವ ನಮ್ಮ ಜನರಿಗೆ ಶಾಶ್ವತ ಪರಿಹಾರ ಸಿಗಬೇಕು ಎಂದಿದ್ದಾರೆ. ಅಲ್ಲದೆ ಕೋಡಿ ಬಿದ್ದ ಸಂತಸದಲ್ಲಿರುವ ಹಿರಿಯೂರಿನ ರೈತ ಮುಖಂಡರೆ ಒಮ್ಮೆ ಹಿನ್ನಿರಿನ ಜನರ ಸಂಕಷ್ಠ ನೋಡಿ. ರೈತರೆಂದರೆ ಕೇವಲ ನೀವುಗಳು ಮಾತ್ರವಲ್ಲ ಹೊಸದುರ್ಗ ತಾಲೂಕಿನಲ್ಲಿಯೂ ರೈತರಿದ್ದಾರೆ ಅವರು ಸಂಕಷ್ಠದಲ್ಲಿದ್ದಾರೆ, ನಿಮಗೆ ಮಾನವೀಯತೆ ಇದ್ದರೆ ಅವರಿಗೆ ಪರಿಹಾರ ಕೊಡಿಸಿ ನಿಮ್ಮ ಭಾಗದಲ್ಲಿಯೇ ಅವರಿಗೂ ಕೃಷಿ ಭೂಮಿ ಕೊಡಿಸಿ ಎಂದಿದ್ದಾರೆ.

ಶಾಶ್ವತ ಪರಿಹಾರಕ್ಕೆ ಸಿದ್ದತೆ: ಬಿಜಿ ಗೋವಿಂದಪ್ಪ

ಜಲಾಶಯದ ಹಿನ್ನೀರಿನ ವ್ಯಾಪ್ತಿಯಲ್ಲಿ ಬರುವ ಲಕ್ಕಿಹಳ್ಳಿ, ಅತ್ತಿಮಗ್ಗೆ, ಕಾರೇಹಳ್ಳಿ, ಹುಣವಿನಡು, ಮತ್ತೋಡು ಹಾಗೂ ಗುಡ್ಡದ ನೇರಲಕೆರೆ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಹಾಳಾಗಿರುವ ರಸ್ತೆ, ಚರಂಡಿ ಸೇರಿದಂತೆ ಮೂಲಭೂತ ಸೌಕರ್ಯಗಳ ಪುನರ್‌ ನಿರ್ಮಾಣಕ್ಕೆ ಕಾಂಗ್ರೆಸ್‌ ಸರ್ಕಾರ ಬದ್ದವಾಗಿದ್ದು, ಈಗಾಗಲೇ 124 ಕೋಟಿ ರು. ವೆಚ್ಚದಲ್ಲಿ ಯೋಜನೆ ತಯಾರಿಸಲಾಗಿದೆ. ಇದೆ 26ರಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕರೆಯಲಾಗಿದ್ದು, ಅಂದು ಅಧಿಕೃತವಾಗಿ ಅನುಮೋದನೆ ಸಿಗಲಿದೆ ಎಂದು ಶಾಸಕ ಬಿಜಿ ಗೋವಿಂದಪ್ಪ ತಿಳಿಸಿದ್ದಾರೆ.

ಅಲ್ಲದೆ ಕೃಷಿ ಭೂಮಿಗೆ ನೀರು ನುಗ್ಗಿ ನಷ್ಟವಾಗಿರುವ 122 ರೈತರಿಗೆ ಪರಿಹಾರ ಕೊಡಿಸಲು ಈಗಾಗಲೇ ರೈತರಿಂದ ಅರ್ಜಿ ಪಡೆದಿದ್ದು, ಸರ್ಕಾರದಿಂದ ಇವರಿಗೆ ಪರಿಹಾರ ಕೊಡಿಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಮತ್ತೆ ಗ್ರಾಮಗಳಿಗೆ ನೀರು ನುಗ್ಗುತ್ತಿರುವ ಕಾರಣ ಮನೆಗಳು ಬೀಳುವ ಸಂಭವವಿದ್ದು, ಸಂತ್ರಸ್ಥರಿಗೆ ಪರಿಹಾರ ಒದಗಿಸಲು ತಾಲೂಕು ಆಡಳಿತ ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹರಿಹರ ಪ್ರಮುಖ ರಸ್ತೆಗಳಲ್ಲಿ ಬೀದಿದೀಪ, ಸಿಸಿ ಕ್ಯಾಮೆರಾ ಅಳವಡಿಸಿ
ಪ್ರೀತಿಸುವಂತೆ ಪೊಲೀಸ್‌ ಇನ್‌ಸ್ಪೆಕ್ಟರ್‌ಬೆನ್ನತ್ತಿದ್ದ ಮಹಿಳೆ ಈಗ ಜೈಲು ಪಾಲು