ಹೈಕೋರ್ಟಿನ ನ್ಯಾಯವಾದಿ ಅಸಮಾಧಾನಕನ್ನಡಪ್ರಭ ವಾರ್ತೆ ಕೊಪ್ಪಳ
ಸಂವಿಧಾನವನ್ನು ಬದಲಾಯಿಸುವ ಪ್ರಯತ್ನದ ನಡುವೆ ಅದನ್ನು ಕೇಸರೀಕರಣಗೊಳಿಸಲಾಗುತ್ತದೆ. ಅಚ್ಚರಿ ಎಂದರೆ ನ್ಯಾಯಾಂಗದಲ್ಲಿಯೂ ಸಹ ಹಿಂದುತ್ವದ ಪ್ರಭಾವ ಹೆಚ್ಚಾಗುತ್ತಿದೆ ಎಂದು ಹೈಕೋರ್ಟಿನ ನ್ಯಾಯವಾದಿ ಎಸ್. ಬಾಲನ್ ಕಳವಳ ವ್ಯಕ್ತಪಡಿಸಿದರು.ನಗರದ ಶಿವಶಾಂತವೀರ ಮಂಗಲ ಭವನದಲ್ಲಿ ನಡೆಯುತ್ತಿರುವ ಮೇ ಸಾಹಿತ್ಯ ಮೇಳದ ‘ವರ್ತಮಾನದಲ್ಲಿ ಧರ್ಮ ರಾಜಕಾರಣ’ ಕುರಿತ ಎರಡನೇ ಗೋಷ್ಠಿಯಲ್ಲಿ ‘ನ್ಯಾಯ ವ್ಯವಸ್ಥೆ’ ಕುರಿತು ಮಾತನಾಡಿದ ಅವರು, ನ್ಯಾಯಾಂಗ ವ್ಯವಸ್ಥೆಯ ಕುರಿತು ಅಸಮಾಧಾನ ಹೊರಹಾಕಿದರು.
ನ್ಯಾಯಾಧೀಶರು ವೇದ, ಶ್ರುತಿ, ಉಪನಿಷತ್ತು, ರಾಮಾಯಣ, ಮಹಾಭಾರತದ ಕಡೆ ನೋಡಿ ತೀರ್ಪು ಕೊಡುತ್ತಿದ್ದಾರೆ ಎಂದು ಕಟುವಾಗಿ ಟೀಕಿಸಿದರು.ಅಯೋಧ್ಯೆ- ಬಾಬರಿ ಮಸೀದಿ ಪ್ರಕರಣದಲ್ಲಿ ಹಿಂದೂಗಳ ನಂಬಿಕೆ ಆಧರಿಸಿ ತೀರ್ಪು ಕೊಡಲಾಗಿದೆಯೇ ಹೊರತೂ ಅದು ಸಂವಿಧಾನ ಪ್ರಕಾರ ಬಂದ ತೀರ್ಪು ಅಲ್ಲ. ತೀರ್ಪು ಕೊಟ್ಟ ನ್ಯಾಯಾಧೀಶರು ನಿವೃತ್ತರಾದ ಬಳಿಕ ರಾಜ್ಯಸಭೆ ಸದಸ್ಯ, ರಾಜ್ಯಪಾಲರಾದರು. ಇದು ಈಗಿನ ವೈರುಧ್ಯ ಎಂದು ಬಾಲನ್ ನುಡಿದರು.
‘ಚುನಾವಣಾ ಪ್ರಜಾಪ್ರಭುತ್ವ’ ಕುರಿತು ಮಾತನಾಡಿದ ಸುಧೀರ್ ಕುಮಾರ್ ಮುರೊಳ್ಳಿ, ಪ್ರಸಕ್ತ ಚುನಾವಣೆಯಲ್ಲಿ ಧರ್ಮ ಮತ್ತು ನಂಬಿಕೆಗಳ ಪಾತ್ರವೇ ಮಹತ್ವದ್ದಾಗಿದೆ ಎಂದರು.ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ, ಅದನ್ನು ಮಾಡಿದ್ದು ಒಂದು ಸಂಸ್ಥೆ ಅಥವಾ ವಿಚಾರಧಾರೆ ಎಂದರು. ಜನತೆ ಕೊಟ್ಟ ಅಧಿಕಾರ ಬಳಸದೇ ಉದ್ಘಾಟನೆ, ಸಮಾರಂಭಗಳಿಗೆ ಮೀಸಲಾದ ಮಹಾದೊರೆಗಳು, ಸಂವಿಧಾನದ ಮೌಲ್ಯ ಪಾಲಿಸಿದರಷ್ಟೇ ವಿಶ್ವಗುರು ಆಗಲು ಸಾಧ್ಯ ಎಂದು ತಿವಿದರು.
‘ಶಿಕ್ಷಣ ವ್ಯವಸ್ಥೆ’ ಕುರಿತು ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ ಉಪನ್ಯಾಸ ನೀಡಿ, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಉಳಿಸಿಕೊಳ್ಳದೇ ಹೋದರೆ ಸಂವಿಧಾನ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.ಚಲನಚಿತ್ರ ನಿರ್ದೇಶಕ ಕೇಸರಿ ಹರವೂ ‘ಸಿನಿಮಾ ಮಾಧ್ಯಮ’ ಕುರಿತು ಮಾತನಾಡಿ, ‘ತಮ್ಮ ಸಿದ್ಧಾಂತವನ್ನು ಜನರಲ್ಲಿ ಬಿತ್ತುವಂಥ ಸಿನಿಮಾಗಳನ್ನು ರಾಜಕೀಯ ಪಕ್ಷವು ನಿರ್ಮಾಣ ಮಾಡುತ್ತಿದೆ ಎಂದು ಕಿಡಿಕಾರಿದರು.
ಸಾಹಿತಿ ಮಹಾಂತೇಶ ಮಲ್ಲನಗೌಡ, ಪತ್ರಕರ್ತ ರಾಜಾಭಕ್ಷಿ, ಆನಂದ ಸಿಂಗಾಣಿ, ಸಲೀಮಾ ಜಾನ್ ಉಪಸ್ಥಿತರಿದ್ದರು. ಜೀವನಸಾಬ್ ಬಿನ್ನಾಳ ನಿರೂಪಿಸಿದರು.