ಕನ್ನಡಪ್ರಭವಾರ್ತೆ ತುರುವೇಕೆರೆ
ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಉಳಿತಾಯದ ಮನೋಭಾವವನ್ನು ಬೆಳೆಸಬೇಕು. ಅಲ್ಲದೇ ಇಂದು ಮಾಡಿದ ಉಳಿತಾಯ ನಾಳೆಗೆ ಸಹಾಯಕ್ಕೆ ಬರುವುದು ಎಂಬ ವಿಷಯವನ್ನು ಮಕ್ಕಳಿಗೆ ಮನದಟ್ಟು ಮಾಡಿಕೊಡಬೇಕೆಂದು ಶಿಕ್ಷಕರು ಮತ್ತು ಪೋಷಕರಿಗೆ ಪಟ್ಟಣ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀನಾಥ್ ಪ್ರಭು ಕರೆ ನೀಡಿದರು.ಪಟ್ಟಣದ ಇಂಡಿಯನ್ ಪಬ್ಲಿಕ್ ಶಾಲೆಯು ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಮತ್ತು ಹಣ ಉಳಿತಾಯ ಆಂದೋಲನದ ಅಂಗವಾಗಿ ಮಕ್ಕಳಿಗೆ ಹಣ ತುಂಬಿಸುವ ಡಬ್ಬಿಯನ್ನು ವಿತರಿಸಿ ಅವರು ಮಾತನಾಡುತ್ತಿದ್ದರು.ಮಕ್ಕಳಿಗೆ ಪೋಷಕರು ಕೊಡುವ ಹಣ ವೃಥಾ ಪೋಲಾಗುತ್ತಿದೆ. ಮಕ್ಕಳು ಸಿಕ್ಕ ಹಣವನ್ನು ಜಂಕ್ ಫುಡ್ ಗೆ ಹಾಕುತ್ತಿದ್ದಾರೆ. ಇದರಿಂದ ಆರೋಗ್ಯವೂ ಹಾಳು ಹಣವೂ ಹಾಳಾಗುತ್ತಿದೆ. ಇದನ್ನು ತಪ್ಪಿಸುವ ಸಲುವಾಗಿ ಇಂಡಿಯನ್ ಪಬ್ಲಿಕ್ ಶಾಲೆಯ ಮಕ್ಕಳಿಗೆ ಉಳಿತಾಯ ಮನೋಭಾವವನ್ನು ಮೂಡಿಸುತ್ತಿರುವುದು ಸ್ವಾಗತಾರ್ಹ. ತಮ್ಮ ಪಟ್ಟಣ ಪಂಚಾಯಿತಿಯಿಂದಲೂ ಪಟ್ಟಣದಲ್ಲಿರುವ ಮಕ್ಕಳಿಗೆ ಹಣ ಕೂಡಿಡುವ ಡಬ್ಬಿಯನ್ನು ವಿತರಿಸುವುದಾಗಿ ಅವರು ಹೇಳಿದರು. ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷ ರಂಗನಾಥ್ ಮಾತನಾಡಿ, ಮಕ್ಕಳಿಗೆ ಉಳಿತಾಯ ಮನೋಭಾವ ಮೂಡಿಸುತ್ತಿರುವ ಪರಿ ಉತ್ತಮವಾಗಿದೆ. ವಿನಾ ಕಾರಣ ಹಣ ಪೋಲು ಮಾಡದೇ ಮಕ್ಕಳು ಪೋಷಕರು ತಮಗೆ ನೀಡಿರುವ ಹಣವನ್ನು ಉಳಿತಾಯ ಮಾಡಿದಲ್ಲಿ ಅದೇ ಮುಂದೊಂದು ದಿನ ನೆರವಿಗೆ ಬರಲಿದೆ. ಇದು ಮುಂದಿನ ಜೀವನಕ್ಕೆ ದಾರಿದೀಪವಾಗಲಿದೆ ಎಂದು ಅವರು ಹೇಳಿದರು. ಇಂಡಿಯನ್ ಪಬ್ಲಿಕ್ ಸ್ಕೂಲ್ ನ ಆಡಳಿತಾಧಿಕಾರಿ ಡಾ.ರುದ್ರಯ್ಯ ಹಿರೇಮಠ್ ಮಾತನಾಡಿ ಇತ್ತೀಚೆಗೆ ಮಕ್ಕಳು ಪೋಷಕರು ನೀಡುವ ಹಣವನ್ನು ಜಂಕ್ ಫುಡ್ ಗೆ ಹಾಕುತ್ತಿದ್ದಾರೆ. ಅಲ್ಲದೇ ಅದಕ್ಕೆ ದಾಸರೂ ಆಗುತ್ತಿದ್ದಾರೆ. ಜಂಕ್ ಫುಡ್ ಸೇವನೆಯಿಂದ ಆರೋಗ್ಯವೂ ಹಾಳಾಗುತ್ತಿದೆ. ಅಲ್ಲದೇ ಮನೆಯಲ್ಲಿ ಮಾಡುವ ಊಟಗಳು ರುಚಿಸದಂತಾಗಿದೆ. ಇದನ್ನು ಮನಗಂಡ ತಾವು ಮಕ್ಕಳಿಗೆ ಉಳಿತಾಯದ ಮನೋಭಾವವನ್ನು ಇಂದಿನಿಂದಲೇ ಮೂಡಿಸಲಾಗುತ್ತಿದೆ. ಇದು ಆರೋಗ್ಯವನ್ನೂ ಸಹ ಕಾಪಾಡಿಕೊಳ್ಳಲು ಸಹಕಾರಿ ಆಗಲಿದೆ ಎಂಬ ಭಾವನೆಯಿಂದ ಉಳಿತಾಯ ಆಂದೋಲನವನ್ನು ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.
ಮಕ್ಕಳು ಉಳಿತಾಯ ಮಾಡುವ ಹಣದಲ್ಲಿ ತಮ್ಮ ಶಿಕ್ಷಣ ಸಂಸ್ಥೆಗೆ ವರ್ಷಕ್ಕೆ ಒಂದು ಸಾವಿರ ರು ನೀಡಬೇಕು. ದುರಾದೃಷ್ಠವಶಾತ್ ಕುಟುಂಬದ ಹೊಣೆ ಹೊತ್ತವರಿಗೆ ತೊಂದರೆಯಾದರೆ ತಮ್ಮ ಸಂಸ್ಥೆಯಿಂದ ಆ ಮಗುವಿಗೆ 5 ವರ್ಷಗಳ ತನಕ ಉಚಿತ ಶಿಕ್ಷಣ ನೀಡಲಾಗುವುದು ಎಂದು ಡಾ.ರುದ್ರಯ್ಯ ಹಿರೇಮಠ್ ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ್ ದುಂಡ, ಶಾಲೆಯ ಹಿರಿಯ ವಿದ್ಯಾರ್ಥಿ ಚಿರಂತ್ ಪ್ರಸಾದ್, ಪ್ರಾಂಶುಪಾಲೆ ಪುಷ್ಪಾ ಎಸ್ ಪಾಟೀಲ್, ಮುಖ್ಯ ಶಿಕ್ಷಕಿ ಶಶಿಕಲಾ ಸೇರಿದಂತೆ ಹಲವಾರು ಶಿಕ್ಷಕರು ಇದ್ದರು.