ವಿವಿಧ ಬೇಡಿಕೆಗಳಿಗೆ ಕರ್ನಾಟಕ ರೈತ ಸಂಘ, ರೈತಪರ ಸಂಘಟನೆ ಆಗ್ರಹಕನ್ನಡಪ್ರಭ ವಾರ್ತೆ ರೋಣ
ಪಟ್ಟಣದ ಸಿದ್ಧಾರೂಢ ಮಠದಿಂದ ಪಾದಯಾತ್ರೆ ಕೈಗೊಂಡು ಸೂಡಿ ವೃತ್ತ, ಮುಲ್ಲನಬಾವಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಬೇಡಿಕೆಗೆ ಆಗ್ರಹಿಸಿ, ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ಧರಣಿ ಕುಳಿತರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತಣಗೌಡ ಚೌಡರಡ್ಡಿ ಮಾತನಾಡಿ, ರೋಣ-ಗಜೇಂದ್ರಗಡ ತಾಲೂಕಿನಲ್ಲಿ ಬಹುತೇಕ ರೈತರು ಮಳೆ ಆಶ್ರಿತ ವ್ಯವಸಾಯವನ್ನೆ ಅವಲಂಬಿಸಿದ್ದು, ಹವಾಮಾನ ವೈಪರಿತ್ಯಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕೈಗೆ ಬಂದ ಬೆಳೆ ಮನೆಗೆ ಬಾರದೆ ಹಾನಿಯಾಗಿದೆ. ಅಲ್ಪ ಸ್ವಲ್ಪ ಬೆಳೆ ಬಂದರೂ ಅದಕ್ಕೂ ಕೂಡ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದಂತಾಗಿದೆ. ಬೆಳೆನಾಶವಾದಾಗಲೂ ಕೂಡ ವಿಮಾ ಕಂಪನಿಗಳ ಬ್ರಹ್ಮಾಂಡ ಬ್ರಷ್ಟಾಚಾರದ ಫಲಾವಾಗಿ ಬೆಳೆ ವಿಮೆ ಮಾಡಿಸಿದ ರೈತರಿಗೆ ವಿಮೆ ಬಾರದಂತಾಗಿದೆ. ಈ ಕುರಿತು ಜಿಲ್ಲಾಡಳಿತ ಮತ್ತು ರಾಜಕಾರಣಿಗಳು ಚಕಾರ ಎತ್ತುವುದಿಲ್ಲ. ರೋಣ ಹಾಗೂ ಗಜೇಂದ್ರಗಡ ತಾಲೂಕಿನಲ್ಲಿ ಶೇ. 90ರಷ್ಟು ಹೆಸರು, ಗೋವಿನಜೋಳ, ಈರುಳ್ಳಿ, ಶೇಂಗಾ, ಮೆಣಸಿನಕಾಯಿ ಬೆಳೆ ಮಳೆ ಇಲ್ಲದೆ ಸಂಪೂರ್ಣ ನಾಶವಾಗಿವೆ. ರೈತರ ಪರಸ್ಥಿತಿ ಹೇಳತೀರದಾಗಿದೆ. ಇಂತಹ ಸಂದರ್ಭಗಳಲ್ಲಿ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.ರೈತ ಮುಖಂಡರಾದ ವೀರೇಶ ದೊಡ್ಡಣ್ಣವರ, ಶಿವಲಿಂಗ ಬೊಪಳಾಪೂರ, ಮುತ್ತಣ್ಣ ಕುರಿ ಮಾತನಾಡಿ, ರೋಣ, ಗದಗ, ಶಿರಹಟ್ಟಿ, ಲಕ್ಷ್ಮೀಶ್ವರ, ಮುಂಡರಗಿ, ನರಗುಂದ ತಾಲೂಕುಗಳನ್ನು ಬರ ಪೀಡಿತ ತಾಲೂಕು ಎಂದು ಘೋಷಿಸಬೇಕು. ರೈತರ ಬೆಳೆ ಪರಿಹಾರ ಶೀಘ್ರವಾಗಿ ವಿತರಿಸಬೇಕು. ಎಲ್ಲಾ ಬೆಳೆಗಳಿಗೆ ವಿಮಾ ಮೊತ್ತವನ್ನು ಶೀಘ್ರ ಪಾವತಿಸಬೇಕು. ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು. ರೈತ ಪಂಪ್‌ಸೆಟ್‌ಗಳಿಗೆ ನಿತ್ಯ 10 ಗಂಟೆಗಳ ಕಾಲ ತ್ರಿಫೇಸ್ ವಿದ್ಯುತ್ ಪೂರೈಸಬೇಕು ಎಂದು ಆಗ್ರಹಿಸಿದರು.
ರೋಣ ಶಾಸಕರು ಆಗಿರುವ ಸಭಾಧ್ಯಕ್ಷ ಜಿ.ಎಸ್. ಪಾಟೀಲರು ಸರ್ಕಾರದ ಮಟ್ಟದಲ್ಲಿ ಪ್ರಭಾವಿಯಾಗಿದ್ದು, ತಕ್ಷಣವೇ ರೋಣ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಸೂಚಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟಣೆಯಲ್ಲಿ ರೈತ ಮುಖಂಡರಾದ ಮಾದೇಗೌಡ ಪಾಟೀಲ, ಸಂಗಣ್ಣ ದಂಡಿನ, ವೆಂಕನಗೌಡ ಪಾಟೀಲ, ಬಸನಗೌಡ ಚನ್ನಪ್ಪಗೌಡ್ರ, ಶಾಂತವೀರಯ್ಯ ಬೆನಹಾಳಮಠ, ಶರಣಪ್ಪ ಧರ್ಮಾಯತ, ಪರಸಪ್ಪ ಶಂಕರಿ, ಲಕ್ಕಪ್ಪ ಹರಪನಹಳ್ಳಿ, ಸಂಗಪ್ಪ ಪವಾಡಶೆಟ್ಟಿ, ವಸಂತಕುಮಾರ ಮಾರನಬಸರಿ, ಬಾವರಾಜ ತೊಂಡಿಹಾಳ, ಯಮನೂರ ಬಿಚ್ಚುಮನಿ, ಶರಣಪ್ಪ ಚನ್ನಪ್ಪಗೌಡ್ರ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.