ಬೀದಿ ಬದಿ ವ್ಯಾಪಾರಸ್ಥರ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork |  
Published : Jan 07, 2025, 12:30 AM IST
ಗಜೇಂದ್ರಗಡ ಪುರಸಭೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹೋರಾಟ ನಡೆಸಿದರು. | Kannada Prabha

ಸಾರಾಂಶ

ಗಜೇಂದ್ರಗಡ ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ಸ್ಥಳೀಯ ಜೋಡು ರಸ್ತೆಯಿಂದ ಒಕ್ಕಲೆಬ್ಬಿಸಿ ಬಯಲು ಜಾಗಕ್ಕೆ ಸ್ಥಳಾಂತರ ಮಾಡಿದ್ದನ್ನು ಖಂಡಿಸಿ ಕಾರ್ಮಿಕ ಸಂಘಟನೆ (ಸಿಐಟಿಯ) ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ್ ಕಚೇರಿಯಿಂದ ಮೆರವಣಿಗೆ ಪ್ರಾರಂಭಿಸಿ ಸ್ಥಳೀಯ ಪುರಸಭೆ ಆವರಣದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ‌ ನಡೆಸಿದರು.

ಗಜೇಂದ್ರಗಡ: ಪಟ್ಟಣದ ಬೀದಿ ಬದಿ ವ್ಯಾಪಾರಸ್ಥರನ್ನು ಏಕಾಏಕಿ ಸ್ಥಳೀಯ ಜೋಡು ರಸ್ತೆಯಿಂದ ಒಕ್ಕಲೆಬ್ಬಿಸಿ ಬಯಲು ಜಾಗಕ್ಕೆ ಸ್ಥಳಾಂತರ ಮಾಡಿದ್ದನ್ನು ಖಂಡಿಸಿ ಕಾರ್ಮಿಕ ಸಂಘಟನೆ (ಸಿಐಟಿಯ) ನೇತೃತ್ವದಲ್ಲಿ ಇಲ್ಲಿನ ತಹಸೀಲ್ದಾರ್ ಕಚೇರಿಯಿಂದ ಮೆರವಣಿಗೆ ಪ್ರಾರಂಭಿಸಿ ಸ್ಥಳೀಯ ಪುರಸಭೆ ಆವರಣದಲ್ಲಿ ಸೋಮವಾರ ಅನಿರ್ದಿಷ್ಟಾವಧಿ ಧರಣಿ‌ ನಡೆಸಿದರು.

ಈ ವೇಳೆ ಕಾರ್ಮಿಕ ಸಂಘಟನೆಯ ಮುಖಂಡ ಎಂ.ಎಸ್. ಹಡಪದ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರ ಕಾಯ್ದೆ ೨೦೧೪ ಜಾರಿಗೊಳಿಸಿದ್ದು, ಆ ಕಾಯ್ದೆ ಪ್ರಕಾರ ಬೀದಿ ಬದಿ ವ್ಯಾಪಾರಸ್ಥರು ಸಂರಕ್ಷಣಾ ಹೊಣೆಗಾರಿಕೆ ಸ್ಥಳೀಯ ಪುರಸಭೆಯದ್ದು. ಆದರೆ ಕೆಲವು ಪ್ರಭಾವಿ ವ್ಯಕ್ತಿಗಳ ಮಾತು ಕೇಳಿ ಅವರ ಅಣತೆಯಂತೆ ಇಡೀ ಆಡಳಿತ ವ್ಯವಸ್ಥೆ ಜನ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.

ಸ್ಥಳೀಯ ಆಡಳಿತಕ್ಕೆ ತನ್ನದೆ ಆದ ಘನತೆ-ಗೌರವವಿದೆ. ಯಾರೋ ಎಲ್ಲಿಯೋ ಕುಳಿತು ಪಾಳೆಗಾರರ ರೀತಿಯಲ್ಲಿ ವರ್ತಿಸುವುದು ತರವಲ್ಲ. ಅವರಿಗೆ ಆಡಳಿತ ಮಾಡುವುದಿದ್ದರೆ ಜನರಿಂದ ಆಯ್ಕೆಯಾಗಿ ಬಂದು ಆಡಳಿತ ನಡೆಸಲಿ. ಅದನ್ನು ಬಿಟ್ಟು ಹಿಂದಿನ ರಾಜಕಾರಣ ಮಾಡುವುದನ್ನು ಬಿಡಲಿ ಎಂದು ಕಿಡಿಕಾರಿದರು.

ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ ಮಾತನಾಡಿ, ಸ್ಥಳೀಯ ಪುರಸಭೆ ಜನರ ಪಾಲಿಗೆ ಇದ್ದು ಸತ್ತಾಂತಾಗಿದೆ. ಆಡಳಿತಕ್ಕೆ ಇಂತಹ ದುಸ್ಥಿತಿ ಬಂದಿರುವುದನ್ನು ನೋಡಿ ಬೇಸರವಾಗುತ್ತಿದೆ. ಅಧಿಕಾರಿಗಳು ಜನರ ಪರವಾಗಿ ಕೆಲಸ ಮಾಡಿ ಉಳ್ಳವರ ಪರ ಕೆಲಸ ಮಾಡುವುದನ್ನು ಕೈ ಬಿಡಿ, ಜನರ ಹಿತಕ್ಕಿಂತಲೂ ಕಾಣದ ಕೈಗಳ ಹಿತಾಸಕ್ತಿಯೇ ನಿಮಗೆ ಮುಖ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ‌ರು. ಶಾಸಕರು, ಪುರಸಭೆ, ಪೊಲೀಸ್‌ ಇಲಾಖೆ, ತಹಸೀಲ್ದಾರ್‌ ಇವರನ್ನೊಳಗೊಂಡಂತೆ ಬೀದಿ ಬದಿಯ ವ್ಯಾಪಾರಸ್ಥರ ಸಂಕಷ್ಟ ಚರ್ಚಿಸಿ ತ್ವರಿತಗತಿಯಲ್ಲಿ ಪರಿಹಾರ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗದೆ ಇದ್ದರೆ ಜ. ೮ರಂದು ಗಜೇಂದ್ರಗಡ ಪಟ್ಟಣ ಬಂದ್ ಮಾಡಿ ಹೋರಾಟದ ಸ್ವರೂಪ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.

ಪಟ್ಟಣದ ತಹಸೀಲ್ದಾರ್ ಕಚೇರಿಯಿಂದ ಆರಂಭವಾದ ಹೋರಾಟದ ಮೆರವಣಿಗೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರು ಹಾಗೂ ಸಂಘಟನೆಯ ಮುಖಂಡರು, ಸ್ಥಳೀಯ ಪುರಸಭೆ ಆಡಳಿತ, ಪೊಲೀಸ್‌ ಇಲಾಖೆ ಹಾಗೂ ಶಾಸಕರ ವಿರುದ್ಧ ಘೋಷಣೆ ಕೂಗಿದರು.

ಧರಣಿ ಸ್ಥಳಕ್ಕೆ ಪುರಸಭೆಯ ಅಧಿಕಾರಿಗಳು, ಪುರಸಭೆಯ ಅಧ್ಯಕ್ಷರು, ವಿರೋಧ ಪಕ್ಷದ ನಾಯಕರು, ಪುರಸಭೆಯ ಸದಸ್ಯರು ಭೇಟಿ ನೀಡಿ ಹೋರಾಟ ಹಿಂತೆಗೆದುಕೊಳ್ಳಿ ಎಂದು ಕೋರಿದರು. ಸಮಸ್ಯೆ ಬಗೆಹರಿಸಲು ಕಾಲವಕಾಶ ಕೇಳಿದಾಗ ಹೋರಾಟಗಾರರು ತರಾಟೆಗೆ ತೆಗೆದುಕೊಂಡರು. ಇನ್ನು ಎಷ್ಟು ಬಾರಿ ನಿಮಗೆ ಕಾಲವಕಾಶ ಕೊಡಬೇಕು? ೨೪ ದಿನಗಳಾದರೂ ನಿಮ್ಮಿಂದ ಯಾವುದೇ ಉತ್ತರ ಸಿಗುತ್ತಿಲ್ಲ. ಮತ್ತೆ ಕಾಲವಕಾಶ ಎಂದರೆ ಹೇಗೆ? ತುರ್ತು ಸಭೆ ಕರೆದು ಸಮಸ್ಯೆ ಬಗೆಹರಿಸಿ, ಅಲ್ಲಿಯವರೆಗೆ ಧರಣಿ ನಡೆಯಲಿದೆ ಎಂದರು.

ಧರಣಿಯಲ್ಲಿ ಸಂಘದ ಅಧ್ಯಕ್ಷ ಎಸ್.ಎ. ದಿಂಡವಾಡ, ಸಿಪಿಐಎಂ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಜಿಲ್ಲಾ ಸಮಿತಿ ಸದಸ್ಯ ಮೆಹಬೂಬ್ ಹವಾಲ್ದಾರ್, ಗಣೇಶ್ ರಾಠೋಡ, ಚೆನ್ನಪ್ಪ ಗುಗಲೊತ್ತರ, ಶಿವಾಜಿ ಗಡ್ಡದ, ಮೆಹಬೂಬ್ ಮಾಲ್ದಾರ, ಕರಿಯಮ್ಮ ಗುರಿಕಾರ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ