ಡಿಸಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork |  
Published : Apr 23, 2026, 01:45 AM IST
22ಎಚ್ಎಸ್ಎನ್13 :  | Kannada Prabha

ಸಾರಾಂಶ

ರಾಮನಾಥಪುರ ಗ್ರಾಮಸ್ಥ ವಿಜಯ್ ಮಾಧ್ಯಮದೊಂದಿಗೆ ಮಾತನಾಡಿ, ೨೦೨೦-೨೧ನೇ ಸಾಲಿನಲ್ಲಿ “ರಾಜೀವ್ ಗಾಂಧಿ ವಸತಿ ನಿಗಮ” ಯೋಜನೆಯಡಿ ಅರ್ಹ ಪಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ತಯಾರಿಸಿ, ಸಾರ್ವಜನಿಕವಾಗಿ ಪ್ರಕಟಿಸಿತ್ತು. ೨೦೨೦ರ ಮಾರ್ಚ್ ೭ರಿಂದ ಸುಮಾರು ನಾಲ್ಕು-ಐದು ತಿಂಗಳುಗಳ ಕಾಲ ನೋಟಿಸ್ ಬೋರ್ಡಿನಲ್ಲಿ ಪಟ್ಟಿ ಪ್ರದರ್ಶಿಸಲಾಗಿತ್ತು. ನಂತರ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಾಗೂ ಗ್ರಾಮಸಭೆ ನಡೆಸಿ, ಯಾವುದೇ ಆಕ್ಷೇಪಣೆ ಇಲ್ಲದ ಹಿನ್ನೆಲೆಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದು ವಿವರಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಕ್ಕುಪತ್ರಗಳನ್ನು ವಿತರಿಸಿ ನಾಲ್ಕು ವರ್ಷಗಳಾದರೂ ಖಾತೆ ಮಾಡಿಕೊಡದೆ ವಿಳಂಬ ಮಾಡುತ್ತಿರುವುದಾಗಿ ಆರೋಪಿಸಿ ಅರಕಲಗೂಡು ತಾಲೂಕು ರಾಮನಾಥಪುರ ಗ್ರಾಮದ ವಸತಿರಹಿತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಆರಂಭಿಸಿದ್ದಾರೆ.

ರಾಮನಾಥಪುರ ಗ್ರಾಮಸ್ಥ ವಿಜಯ್ ಮಾಧ್ಯಮದೊಂದಿಗೆ ಮಾತನಾಡಿ, ೨೦೨೦-೨೧ನೇ ಸಾಲಿನಲ್ಲಿ “ರಾಜೀವ್ ಗಾಂಧಿ ವಸತಿ ನಿಗಮ” ಯೋಜನೆಯಡಿ ಅರ್ಹ ಪಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿ ತಯಾರಿಸಿ, ಸಾರ್ವಜನಿಕವಾಗಿ ಪ್ರಕಟಿಸಿತ್ತು. ೨೦೨೦ರ ಮಾರ್ಚ್ ೭ರಿಂದ ಸುಮಾರು ನಾಲ್ಕು-ಐದು ತಿಂಗಳುಗಳ ಕಾಲ ನೋಟಿಸ್ ಬೋರ್ಡಿನಲ್ಲಿ ಪಟ್ಟಿ ಪ್ರದರ್ಶಿಸಲಾಗಿತ್ತು. ನಂತರ ತಾಲೂಕು ದಂಡಾಧಿಕಾರಿಗಳ ಸಮ್ಮುಖದಲ್ಲಿ ಸಭೆ ಹಾಗೂ ಗ್ರಾಮಸಭೆ ನಡೆಸಿ, ಯಾವುದೇ ಆಕ್ಷೇಪಣೆ ಇಲ್ಲದ ಹಿನ್ನೆಲೆಯಲ್ಲಿ ಅನುಮೋದನೆ ನೀಡಲಾಗಿತ್ತು ಎಂದು ವಿವರಿಸಿದರು.

ಇದಾದ ಬಳಿಕ ೨೦೨೨ರ ಅಕ್ಟೋಬರ್‌ ೧೦ರಂದು ರಾಮನಾಥಪುರ ನೂತನ ಬಸ್ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ೪೭ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಆದರೆ ಇದುವರೆಗೆ ಖಾತೆ ಮಾಡಿಕೊಡದಿರುವುದು ಅನ್ಯಾಯ ಎಂದು ಅವರು ಆರೋಪಿಸಿದರು. ಪಂಚಾಯಿತಿ ಅಧಿಕಾರಿಗಳು ಕೋವಿಡ್ ಅವಧಿಯಲ್ಲಿ ಕೇವಲ ೧೫ ದಿನ ಮಾತ್ರ ನೋಟಿಸ್ ನೀಡಲಾಗಿದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಆದರೆ ಆ ಅವಧಿಯಲ್ಲಿ ಇತರೆ ಕಾರ್ಯಗಳು ನಡೆದಿರುವುದು ದಾಖಲೆಗಳಿಂದ ಸ್ಪಷ್ಟವಾಗುತ್ತದೆ ಎಂದು ಪ್ರಶ್ನಿಸಿದರು. ಈಗ ಕೆಲವರು ಹಣಕ್ಕಾಗಿ ಉದ್ದೇಶಪೂರ್ವಕವಾಗಿ ತಕರಾರು ಎಬ್ಬಿಸುತ್ತಿದ್ದಾರೆ ಹಾಗೂ ಇಲ್ಲಿನ ಜನಪ್ರತಿನಿಧಿಗಳ ಕುಮಕ್ಕು ಇದೆ ಎಂದು ಗಂಬೀರವಾಗಿ ದೂರಿದರು.

ಖಾತೆ ಮಾಡಲು ಹಲವು ದಾಖಲೆಗಳನ್ನು ಕೇಳಲಾಗುತ್ತಿದೆ. ಹೆಚ್ಚಿನ ದಾಖಲೆಗಳನ್ನು ನೀಡಲು ಸಿದ್ಧರಾಗಿದ್ದರೂ, “ಮೂರು ತಲೆಮಾರಿನ ವಂಶವೃಕ್ಷಂತಹ ದಾಖಲೆಗಳನ್ನು ಒದಗಿಸುವುದು ಬಡ ಕಾರ್ಮಿಕರಿಗೆ ಸಾಧ್ಯವಾಗುತ್ತಿಲ್ಲ. ಇದನ್ನೇ ನೆಪ ಮಾಡಿಕೊಂಡು ಅಧಿಕಾರಿಗಳು ಖಾತೆ ನೀಡಲು ವಿಳಂಬ ಮಾಡುತ್ತಿದ್ದಾರೆ ಎಂದು ಹೇಳಿದರು. ಇದಲ್ಲದೆ, ಏಪ್ರಿಲ್ ೧೫ ಹಾಗೂ ಮೇ ೨೭ರಿಂದ ನಾಲ್ಕು ದಿನಗಳ ಕಾಲ ಮಳೆ ಮಧ್ಯೆಯೇ ವೃದ್ಧರು, ಮಹಿಳೆಯರು, ಮಕ್ಕಳು ಸೇರಿ ಪಂಚಾಯಿತಿ ಮುಂದೆ ಧರಣಿ ನಡೆಸಿದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವಸತಿ ಇಲ್ಲದೆ ಬಾಡಿಗೆ ಕಟ್ಟುತ್ತ ಜೀವನ ಸಾಗಿಸುವ ಸ್ಥಿತಿಯಲ್ಲಿರುವ ನಾವು, ಸ್ವಂತ ಮನೆ ಕಟ್ಟಿಕೊಳ್ಳಲು ಅವಕಾಶ ನೀಡಬೇಕು. ಸಂಬಂಧಿತ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಖಾತೆ ಮಾಡಿ, ನೊಂದ ಬಡವರಿಗೆ ನ್ಯಾಯ ಒದಗಿಸಬೇಕು ಎಂದು ವಸತಿರಹಿತರು ಮನವಿ ಮಾಡಿದ್ದಾರೆ.

ಧರಣಿಯಲ್ಲಿ ರಾಮನಾಥಪುರ ಗ್ರಾಮದ ಸುಜಾತ, ಗೌರಿ, ಕಲಾವತಿ, ಉಷಾ, ರಾಗಿಣಿ, ರೇಖಾ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸುವ ಅವಶ್ಯಕತೆ ಇದೆ
ಗುಂಡ್ಲುಪೇಟೆಯ ಕಣಿಯರ ಬೀದೀಲಿ ರಸ್ತೆ ಮೇಲೆ ಕೊಳಚೆ ನೀರು ಹರಿವು!