ಕನ್ನಡಪ್ರಭ ವಾರ್ತೆ ಬೆಂಗಳೂರು
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ ಮತ್ತು ಉಪವಲಯ ಅರಣ್ಯಾಧಿಕಾರಿ ಹುದ್ದೆಯ ನೇಮಕಾತಿಯಲ್ಲಿ ಬಿಎಸ್‌ಸಿ ಅರಣ್ಯ ಶಾಸ್ತ್ರ ಪದವಿಯನ್ನು ಕನಿಷ್ಠ ವಿದ್ಯಾರ್ಹತೆಯಾಗಿ ಪರಿಗಣಿಸುವಂತೆ ಒತ್ತಾಯಿಸಿ ಕೊಡಗು, ಶಿರಸಿ ಹಾಗೂ ಶಿವಮೊಗ್ಗ ಅರಣ್ಯಶಾಸ್ತ್ರ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.ಕರ್ನಾಟಕ ಅರಣ್ಯ ಪದವಿ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೂರು ಜಿಲ್ಲೆಗಳ ಸುಮಾರು 800 ವಿದ್ಯಾರ್ಥಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. ಕಳೆದ 17 ದಿನಗಳಿಂದ ತರಗತಿ ಬಹಿಷ್ಕರಿಸಿ ಧರಣಿ ನಡೆಸುತ್ತಿದ್ದ ವಿದ್ಯಾರ್ಥಿಗಳು ಸೋಮವಾರದಿಂದ ರಾಜಧಾನಿಯಲ್ಲಿ ಹೋರಾಟ ಮುಂದುವರಿಸಿದ್ದಾರೆ.
ಅರಣ್ಯ ಇಲಾಖೆಯಲ್ಲಿನ ಉದ್ಯೋಗಗಳಿಗೆ ಅರಣ್ಯ ಪದವೀಧರರಿಗಿದ್ದ ಶೇ. 70 ಮೀಸಲಾತಿಯನ್ನುಅಸಮಂಜಸ ಕಾರಣ ನೀಡಿ ಶೇ. 50ಕ್ಕೆ ಇಳಿಸಲಾಗಿದೆ. ಕಳೆದ ಮೂರು ವರ್ಷಗಳಿಂದ ಇಲಾಖೆಯಲ್ಲಿ ಯಾವುದೇ ನೇಮಕಾತಿ ಪ್ರಕ್ರಿಯೆ ನಡೆದಿಲ್ಲ ಎಂದು ದೂರಿದರು. ಕೃಷಿ, ತೋಟಗಾರಿಕೆ, ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿದ್ಯಾರ್ಥಿಗಳಿಗೆ ಅವರದ್ದೇ ಆಗ ವೃತ್ತಿಪರ ಹುದ್ದೆಗಳಿವೆ. ಅವರಿಗೆ ಅರಣ್ಯ ಇಲಾಖೆಯಲ್ಲೂ ಶೇ. 50ರಷ್ಟು ಉದ್ಯೋಗಾವಕಾಶ ಪಡೆಯಲು ಅವಕಾಶ ನೀಡಿರುವುದು ಸರಿಯಲ್ಲ. ಜತೆಗೆ ತಮಗೆ ತೋಟಗಾರಿಕೆಯಂತ ಇಲಾಖೆಗಳ ಹುದ್ದೆ ಪಡೆಯಲು ಅವಕಾಶವಿಲ್ಲದಂತೆ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ನಾಲ್ಕು ವರ್ಷ ಅರಣ್ಯ ಶಾಸ್ತ್ರದಲ್ಲಿ ಎಸಿಎಫ್, ಆರ್‌ಎಫ್‌ಒ, ಡಿವೈಆರ್‌ಎಫ್‌ಒ ಹುದ್ದೆಗಳಿಗೆ ಅಗತ್ಯ ತರಬೇತಿಯ ಕೋರ್ಸ್ ಇದೆ. ಆದರೆ, ನಮಗೆ ಕಾಡಿನ ಸಂರಕ್ಷಣೆ, ವೈಜ್ಞಾನಿಕ ನಿರ್ವಹಣೆ ಅವಕಾಶ ನೀಡದಿರುವುದು ಸರಿಯಲ್ಲ. ಸರ್ಕಾರ ಹಿಂದಿನಂತೆ ಮೀಸಲಾತಿ ಮರುಸ್ಥಾಪಿಸಬೇಕು, ಹೆಚ್ಚಿನ ಮೀಸಲು ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಯಶಸ್ ಟಿ.ಎನ್. ಸೇರಿದಂತೆ ಕಿಶನ್ ಗೌಡ ಜಿ.ಸಿ., ರಾಘವೇಂದ್ರ ಎಸ್.ಎಂ., ಬಸವನಗೌಡ ಎಸ್.ಎಂ., ಸೂರಜ್ ರೆಡ್ಡಿ ಸೇರಿ ಹಲವರಿದ್ದರು.