- ಗ್ರಾಮ ಆಡಳಿತ ಅಧಿಕಾರಿಗಳಿಂದ ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರದಿಂದ ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದರು.
ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಕರೆ ಮೇರೆಗೆ ಸೋಮವಾರ ಗಾಂಧಿ ಪ್ರತಿಮೆ ಎದುರು ನೌಕರರು ಪ್ರತಿಭಟನೆ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ತೇಜೇಶ್ವರಾಚಾರ್ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಚೇರಿ, ಉತ್ತಮ ಗುಣಮಟ್ಟದ ಪೀಠೋಪಕರಣ, ಮೊಬೈಲ್, ಲ್ಯಾ ಪ್‌ಟಾಪ್ ಇನ್ನಿತರೆ ಪರಿಕರಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್. ನಿಯಮ ಮರು ಸ್ಥಾಪಿಸಬೇಕು. ಇತರೆ ಎಲ್ಲಾ ಇಲಾಖೆಗಳಲ್ಲಿರುವಂತೆ ಕಂದಾಯ ಇಲಾಖೆಯಲ್ಲಿ ವರ್ಗಾವಣೆಗಾಗಿ ವಿಶೇಷ ಮಾರ್ಗಸೂಚಿ ರಚಿಸಬೇಕು. ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಸೌಲಭ್ಯ ಕಲ್ಪಿಸಿಕೊಡಬೇಕು ಎಂದರು.
ಆಯುಕ್ತಾಲಯದಡಿ ಗ್ರಾಮಾಡಳಿತ ಅಧಿಕಾರಿಗಳ ಜೇಷ್ಟತೆಯನ್ನು ರಾಜ್ಯಮಟ್ಟದ ಜೇಷ್ಟತೆಯಾಗಿ ಪರಿಗಣಿಸಬೇಕು. ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೇಮೋ ಹಾಕದಂತೆ ಹಾಗೂ ಕಚೇರಿ ಅವಧಿ ಹೊರತುಪಡಿಸಿ ಸಭೆ, ವರ್ಚುವಲ್ ಸಭೆ ನಡೆಸದಂತೆ ಸರ್ಕಾರ ಸುತ್ತೋಲೆ ಹೊರಡಿಸಿದ ನಂತರವೂ ಕೂಡ ಕೆಲವು ಜಿಲ್ಲೆಗಳಲ್ಲಿ ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ವಂಶವೃಕ್ಷ, ಜಾತಿ ಪ್ರಮಾಣಪತ್ರ ಸೇರಿದಂತೆ ಇತರೆ ಪ್ರಮಾಣ ಪತ್ರಗಳ ವಿತರಣೆ ವಿಚಾರವಾಗಿ ಕಂದಾಯ ಇಲಾಖೆ ಮತ್ತು ಗ್ರಾಮಾಡಳಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಿ ಎಫ್‌ಐಆರ್ ದಾಖಲಿಸುತ್ತಿರುದನ್ನು ತಡೆಗಟ್ಟಿ, ತಪ್ಪೆಸಗುವ ಅರ್ಜಿದಾರರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಪ್ರಕರಣ ದಾಖಲಿಸಲು ಇಲಾಖೆ ಮುಖಸ್ಥರಿಗೆ ಆದೇಶಿಸಬೇಕು ಎಂದು ಹೇಳಿದರು.
ಕ್ಷೇತ್ರ ಮಟ್ಟದ ಗ್ರಾಮಾಡಳಿತ ಅಧಿಕಾರಿಗಳನ್ನು ಕಚೇರಿಗಳಿಗೆ ನಿಯೋಜಿಸಿಕೊಂಡಿರುವ ಪ್ರಕರಣಗಳಲ್ಲಿ ಅವರುಗಳ ಮೂಲ ಹುದ್ದೆಗಳಿಗೆ ಬಿಡುಗಡೆಗೊಳಿಸಲು ಸರ್ಕಾರ ಸುತ್ತೋಲೆ ಹೊರಡಿಸಿದ್ದು ಈ ಬಳಿಕ ಕ್ಷೇತ್ರ ಮಟ್ಟದ ಅಧಿಕಾರಿಗಳನ್ನು ಕಚೇರಿ ನಿಯೋಜನೆಯಿಂದ ಬಿಡುಗಡೆಗೊಳಿಸದೇ ಇರುವ ಪ್ರಕರಣಗಳಲ್ಲಿ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಇಷ್ಟೆಲ್ಲಾ ಬೇಡಿಕೆಗಳ ಈಡೇರಿಕೆಗೆ ರಾಜ್ಯಾದ್ಯಂತ ಸಂಘ ಮುಷ್ಕರ ಹಮ್ಮಿಕೊಂಡಿದ್ದು ಅದರಂತೆ ಎಲ್ಲಾ ಬಗೆಯ ಮೊಬೈಲ್ ಆಪ್, ವೆಬ್ ಆಪ್ಲಿಕೇಷನ್ ಸ್ಥಗಿತಗೊಳಿಸಿ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ತಾಲೂಕಿನಲ್ಲಿ ಪ್ರತಿಭಟನೆ ನಡೆಸ ಲಾಗುತ್ತಿದ್ದು, ನ್ಯಾಯಯುತ ಬೇಡಿಕೆಗಳಿಗೆ ಗೌರವಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷೆ ಈರಮ್ಮ, ಖಜಾಂಚಿ ಎನ್.ಟಿ.ರಘು, ಸದಸ್ಯರಾದ ಹರ್ಷವರ್ಧನ್, ಪಲ್ಲವಿ, ಹೇಮಶೇಖರ್, ಸಂಗೀತ, ನಾಗೇಶ್, ಶಾಶ್ವತ್, ರುದ್ರೇಶ್, ಪ್ರಶಾಂತ್ ಇದ್ದರು. 10 ಕೆಸಿಕೆಎಂ 2ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಸೋಮವಾರ ಚಿಕ್ಕಮಗಳೂರಿನಲ್ಲಿ ಅನಿರ್ಧಿಷ್ಟಾವಧಿಯ ಮುಷ್ಕರ ಆರಂಭಿಸಿದರು.