ಬಿಸಿಯೂಟ ನೌಕರರ ಅನಿರ್ದಿಷ್ಟಾವಧಿ ಧರಣಿ

KannadaprabhaNewsNetwork |  
Published : Jul 16, 2024, 01:35 AM ISTUpdated : Jul 16, 2024, 05:51 AM IST
Freedom Park | Kannada Prabha

ಸಾರಾಂಶ

ವೇತನ ಹೆಚ್ಚಳ, ನಿವೃತ್ತ ಬಿಸಿಯೂಟ ನೌಕರರಿಗೆ ಇಡುಗಂಟು ಅನುಷ್ಠಾನಕ್ಕೆ ಆಗ್ರಹಿಸಿ ಬಿಸಿಯೂಟ ತಯಾರಕಿಯರು ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

 ಬೆಂಗಳೂರು :  ವೇತನ ಹೆಚ್ಚಳ, ನಿವೃತ್ತ ಬಿಸಿಯೂಟ ನೌಕರರಿಗೆ ಇಡುಗಂಟು ಅನುಷ್ಠಾನಕ್ಕೆ ಆಗ್ರಹಿಸಿ ಬಿಸಿಯೂಟ ತಯಾರಕಿಯರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ. ಮಳೆಯಲ್ಲೇ ಹೋರಾಟ ನಡೆಸಿರುವ ಸಾವಿರಾರು ಮಹಿಳೆಯರು ಬೇಡಿಕೆ ಈಡೇರುವ ತನಕ ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸಿಐಟಿಯು ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ಆರಂಭಿಸಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಬಂದಿರುವ ಬಿಸಿಯೂಟ ನೌಕರರು ಭಾಗಿಯಾಗಿದ್ದು, ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಸ್ಥಳಕ್ಕೆ ಮುಖ್ಯಮಂತ್ರಿ, ಸಚಿವರು ಬಂದು ಮನವಿ ಸ್ವೀಕರಿಸಿ ಸ್ಪಷ್ಟ ಭರವಸೆ ನೀಡುವಂತೆ ಆಗ್ರಹಿಸಿದ್ದಾರೆ.

ಸಂಘಟನೆಯ ಗೌರವಾಧ್ಯಕ್ಷೆ ಎಸ್‌.ವರಲಕ್ಷ್ಮೀ ಮಾತನಾಡಿ, ‘2023ರ ಅಕ್ಟೋಬರ್‌ನಿಂದ ನವೆಂಬರ್‌ 10ರವರೆಗೆ ಧರಣಿ ನಡೆಸಿದ ವೇಳೆ ಬೇಡಿಕೆ ಈಡೇರಿಕೆಗೆ ಕ್ರಮ ವಹಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ನಮ್ಮ ಸಮಸ್ಯೆ ಪರಿಹರಿಸಿಲ್ಲ. ಬದಲಾಗಿ 2022ರಿಂದ ಈವರೆಗೆ 10,500ಕ್ಕೂ ಹೆಚ್ಚಿನ ನೌಕರರನ್ನು ಕೆಲಸದಿಂದ ಕೈಬಿಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2022ರಿಂದ ನಿವೃತ್ತಿ ಹೊಂದಿದ ಮತ್ತು ನಿವೃತ್ತಿ ಹೊಂದುತ್ತಿರುವ ಬಿಸಿಯೂಟ ನೌಕರರಿಗೆ ₹1 ಲಕ್ಷ ಇಡುಗಂಟು ನೀಡಬೇಕು. ಕೇವಲ ₹3600-3700 ಸಂಬಳದಲ್ಲಿ ಬದುಕು ನಡೆಸುತ್ತಿದ್ದೇವೆ. ಹಿಂದೆ ಬಜೆಟ್‌ನಲ್ಲಿ ಹೆಚ್ಚಳ ಮಾಡಿದಂತೆ ₹1000 ವೇತನವನ್ನು 2023ರ ಜನವರಿಯಿಂದ ಅನ್ವಯಿಸುವಂತೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷೆ ಲಕ್ಷ್ಮೀದೇವಿ, ಪ್ರಮುಖರಾದ ಮಹಾದೇವಮ್ಮ , ಮಾಲಿನಿ ಮೇಸ್ತ ಇದ್ದರು.

ಪ್ರಮುಖ ಬೇಡಿಕೆಗಳು

ಬಿಸಿಯೂಟ ಸಾದಿಲ್ವಾರು ಜಂಟಿಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಸ್‌ ಪಡೆಯಬೇಕು. ಅಕ್ಷರ ದಾಸೋಹ ಕೈಪಿಡಿಯಲ್ಲಿ ಕೆಲಸದ ಅವಧಿಯನ್ನು 4ಗಂಟೆಯಿಂದ 6ಗಂಟೆಗೆ ಬದಲಿಸಬೇಕು. ಕರ್ತವ್ಯದ ಸ್ಥಳದಲ್ಲಿ ಮೃತಪಟ್ಟರೆ ₹ 25ಲಕ್ಷ ಪರಿಹಾರ ನೀಡಬೇಕು. ಶಾಲಾ ಸಿಬ್ಬಂದಿಯೆಂದು ನೇಮಿಸಿ ಆದೇಶ ನೀಡಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.

ಜೊತೆಗೆ, ಎಸ್‌ಡಿಎಂಸಿಯಿಂದ ಕಿರುಕುಳ ನಿಲ್ಲಬೇಕು. 2024ರ ಮಾ.31ಕ್ಕೆ ಬಿಸಿಯೂಟ ನೌಕರರನ್ನು ಬಿಡುಗಡೆಗೊಳಿಸುವ ಆದೇಶವನ್ನು 2025ರ ಏಫ್ರಿಲ್‌ಗೆ ಮುಂದೂಡಬೇಕು. ಬಿಸಿಯೂಟ ಯೋಜನೆಯನ್ನು ಕಾಯಂ ಮಾಡಬೇಕು. ಬೇಸಿಗೆ ರಜೆ, ದಸರಾ ರಜೆ ವೇತನವನ್ನು ಕಡ್ಡಾಯವಾಗಿ ನೀಡುವಂತೆ ಕೋರಿ ಧರಣಿ ನಡೆಸಲಾಗುತ್ತಿದೆ.

PREV

Recommended Stories

ಟಿಕೆಟ್ ಆಯ್ತು, ಮಲ್ಟಿಪ್ಲೆಕ್ಸ್‌ಗಳಲ್ಲಿ ತಿಂಡಿ ದರ ಇಳಿಸಿ : ಸಿನಿ ಪ್ರಿಯರು
ಮಂಗಳಮುಖಿಯರು, ಮಹಿಳೆಯರಿಗೆ ಸರ್ಕಾರದಿಂದಲೇ ಉಚಿತ ಆಟೋ