ಮಾಣೆಕ್ ಮೈದಾನದಲ್ಲಿ ಸ್ವಾತಂತ್ರ್ಯದ ವಿಜೃಂಭಣೆ

KannadaprabhaNewsNetwork | Published : Aug 16, 2024 1:45 AM

ಸಾರಾಂಶ

ಬೆಂಗಳೂರು ನಗರದ ಮಾಣೆಕ್‌ ಷಾ ಮೈದಾನದಲ್ಲಿ 78ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬ್ರಿಟೀಷರು ಮತ್ತು ಪೋರ್ಚುಗೀಸರ ದಬ್ಬಾಳಿಕೆ ವಿರುದ್ಧ ತೊಡೆ ತಟ್ಟಿ ನಿಂತ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕದೇವಿ ಪರಾಕ್ರಮಗಳ ನೃತ್ಯ ರೂಪಕಗಳ ಮೂಲಕ ಮರುಸೃಷ್ಟಿ, ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿದ ಪಂಚ ಗ್ಯಾರಂಟಿ ಯೋಜನೆಗಳ ಕುರಿತ ಜನಪದ ಕಲಾ ಪ್ರದರ್ಶನ ನೋಡುಗರ ಮನಸೂರೆಗೊಂಡಿತ್ತು.

ಇನ್ನು ಹಲವು ವಿಶ್ವ ದಾಖಲೆ ಬರೆದ ಖ್ಯಾತ ಮೋಟರ್ ಸೈಕಲ್ ತಂಡದಿಂದ ಮೈನವಿರೇಳಿಸುವ ಮೋಟರ್ ಸೈಕಲ್ ಸಾಹನ ಪ್ರದರ್ಶನ, ಮಲ್ಲಕಂಬ ಸಾಹಸ ಪ್ರದರ್ಶನ, ತ್ರಿವರ್ಣ ಧ್ವಜದೊಂದಿಗೆ ಆಗಸದಲ್ಲಿ ನಡೆಸಿದ ಸಾಹಸ ಪ್ರದರ್ಶನದ ಮೂಲಕ ಬೆರಗುಗೊಳಿಸಿದ ಕಮಾಂಡೋಗಳು...

ಇದು, ಗುರುವಾರ ಬೆಂಗಳೂರಿನ ಮಾಣೆಕ್ ಷಾ ಪರೇಡ್ ಮೈದಾನದಲ್ಲಿ ಪ್ರಮುಖ ಹೈಲೆಟ್ಸ್‌ಗಳು...

ತ್ರಿವರ್ಣ ಧ್ವಜ ಕೈಯಲ್ಲಿ ಹಿಡಿದು ಕೇಸರಿ, ಬಿಸಿ, ಹಸಿರು ಬಣ್ಣದ ಬಟ್ಟೆ ಧರಿಸಿ, ಕೆನ್ನೆಯ ಮೇಲೆ ತ್ರಿವರ್ಣ ಧ್ವಜದ ಬಣ್ಣ ಬಳಿದುಕೊಂಡ ಚಿಣ್ಣರು ಸಂಭ್ರಮಿಸಿದರು. ವಂದೇ ಮಾತರಂ, ಭಾರತ್ ಮಾತಾಕಿ ಜೈ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಬೆಳಗ್ಗೆ 8.56ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈದಾನದಕ್ಕೆ ಆಗಮಿಸಿ 8.58ಕ್ಕೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ಜೀಪಿನಲ್ಲಿ ಪೆರೇಡ್ ಪರಿವೀಕ್ಷಣೆ ಮತ್ತು ಗೌರವ ರಕ್ಷೆ ಸ್ವೀಕರಿಸಿ ನಾಡಿನ ಜನತೆಗೆ 78ನೇ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಬಳಿಕ ಪರೇಡ್ ಕಮಾಂಡರ್ ಗೋಪಾಲರೆಡ್ಡಿ ಹಾಗೂ ಡೆಪ್ಯುಟಿ ಕಮಾಂಡರ್ ಎಚ್.ಎನ್.ಹರೀಶ್ ನೇತೃತ್ವದಲ್ಲಿ ಕೆಎಸ್‌ಆರ್‌ಪಿ, ಬಿಎಸ್‌ಎಫ್, ಶ್ವಾನದಳ, ಸಿವಿಲ್‌ ಡಿಫೆನ್ಸ್‌ ಸೇರಿದಂತೆ ವಿವಿಧ ಇಲಾಖೆಯ 35 ತುಕಡಿಗಳಿಂದ ಪಥ ಸಂಚಲನ ನಡೆಯಿತು. ವಿವಿಧ ಶಾಲೆಯ 1450 ವಿದ್ಯಾರ್ಥಿಗಳಿಂದ ದೇಶಭಕ್ತಿ ಕಿಚ್ಚು ಹೊತ್ತಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದ ಎರಡು ನೃತ್ಯ ರೂಪಕ ಪ್ರರ್ದಶಿಸಿದರು.

ರಾಷ್ಟ್ರೀಯ ಸೇವಾ ಯೋಜನೆಯ (ಎನ್‌ಎಸ್‌ಎಸ್) 400 ವಿದ್ಯಾರ್ಥಿಗಳು ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಕುರಿತು ಕಲಾ ಪ್ರದರ್ಶನದ ಮೂಲಕ ಯೋಜನೆಗಳ ಮಹತ್ವ ಸಾರಿದರು.

ಈ ಪೈಕಿ ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ 750 ವಿದ್ಯಾರ್ಥಿಗಳು ಆರ್ಯಭಟ ಪ್ರಶಸ್ತಿ ಪುರಸ್ಕೃತ ಮಹೇಶ್‌ ಕುಮಾರ್‌ ಪರಿಕಲ್ಪನೆ ಮತ್ತು ನಿರ್ದಶನದಲ್ಲಿ ಬ್ರಿಟೀಷರ ದಬ್ಬಾಳಿ ವಿರುದ್ಧ ತೊಡೆ ತಟ್ಟಿ ನಿಂತ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮುಂತಾದ ಹೋರಾಟದ ಪರಿ ಬಿಂಬಿಸುವ ‘ಜಯ ಭಾರತಿ’ ನೃತ್ಯರೂಪಕ ಕರ್ನಾಟಕದ ಸ್ವಾತಂತ್ರ್ಯ ಹೋರಾಟದ ಕಿಚ್ಚಿನ ತೀವ್ರತೆಯನ್ನು ಪ್ರದರ್ಶಿಸಿದರು.

ಧೀರ ಮಹಿಳೆ ರಾಣಿ ಅಬ್ಬಕ್ಕ

ಪಿಳ್ಳಣ್ಣ ಗಾರ್ಡನ್‌ನ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 700 ವಿದ್ಯಾರ್ಥಿಗಳಿಂದ ತುಳುನಾಡಿನಲ್ಲಿ ಪೋರ್ಚುಗೀಸರು ತಮ್ಮ ಆಡಳಿತ ಭದ್ರಗೊಳಿಸಿಕೊಳ್ಳು 1567ರಲ್ಲಿ ರಾಜವಂಶದಲ್ಲಿ ಅಂತಃ ಕಲಹ ಸೃಷ್ಟಿಸಿ ಅಕ್ರಮಣ ನಡೆಸಿದ್ದರು. ದೇಶದಲ್ಲಿ ಪರಕೀಯ ದಾಳಿಯನ್ನು ಪ್ರಪ್ರಥಮವಾಗಿ ಎದುರಿಸಿದ ಧೀರ ಮಹಿಳೆ ರಾಣಿ ಅಬ್ಬಕ್ಕದೇವಿ ಪೋರ್ಚುಗೀಸರ ವಿರುದ್ಧ ಹೋರಾಟ ನಡೆಸಿ ವೀರ ಮರಣ ಹೊಂದಿದ ಕಥೆಯನ್ನು ಎಳೆ ಎಳೆಯಾಗಿ ‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕದೇವಿ’ ನೃತ್ಯ ರೂಪದಲ್ಲಿ ಬಿಚ್ಚಿಡಲಾಯಿತು. ಇದು ಎಲ್ಲ ಮೆಚ್ಚುಗೆಗೆ ಪಾತ್ರವಾಯಿತು.

ಗ್ಯಾರಂಟಿ ಯೋಜನೆಗಳ ಮಹತ್ವ

ರಾಜ್ಯ ಸರ್ಕಾರವೂ ಜಾರಿಗೊಳಿಸಿದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಂದ ಆಗುತ್ತಿರುವ ಪ್ರಯೋಜನಗಳ ಕುರಿತು ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಘಟಕದ 400 ವಿದ್ಯಾರ್ಥಿಗಳಿಂದ ನೃತ್ಯ ಕಲಾ ಪ್ರದರ್ಶನ ನೀಡಿದರು. ಈ ವೇಳೆ ಪಂಚ ಗ್ಯಾರಂಟಿ ಯೋಜನೆಗಳ ಫಲಕಗಳನ್ನು ಪ್ರದರ್ಶಿಸಲಾಯಿತು.

ಶ್ವೇತಾಶ್ವ ಟೀಂ ಬೈಕ್ ಘಲಕ್

ಹಲವು ವಿಶ್ವ ದಾಖಲೆ ನಿರ್ಮಿಸಿದ ಕಾಪ್ಸ್‌ ಆಫ್‌ ಮಿಲಿಟರಿ ಪೊಲೀಸ್‌ ಮೋಟಾರು ಸೈಕಲ್ ತಂಡದ ಪ್ರದರ್ಶನವು ಮೈನವಿರೇಳಿಸುವಂತಿತ್ತು. ಮೋಟಾರ್ ಸೈಕಲಿಸ್ಟ್ ತಂಡ ಬೆಂಕಿ ಹಂಚಿದ್ದ ರಿಂಗ್‌ನಲ್ಲಿ ಬೈಕ್ ಚಲಾಯಿಸಿ ಪ್ರೇಕ್ಷಕರು ಅದ್ಭುತ ಎಂದು ಉದ್ಘರಿಸುವಂತೆ ಮಾಡಿತು. ಇದರ ಜತೆಗೆ ಸರ್ಕಲ್, ಫಿಶ್, ಲೋಟಸ್, ಪಿರಮಿಡ್, ಕ್ರಿಸ್ ಕ್ರಾಸ್ ಸಾಹಸಗಳನ್ನು ಪ್ರದರ್ಶಿಸಿದರು.ಮುಗಿಲೆತ್ತರದಲ್ಲಿ ಹಾರಿದ ತ್ರಿವರ್ಣ

ಪ್ಯಾರಚ್ಯೂಟ್‌ ರೆಜಿಮೆಂಟ್‌ ಟ್ರೈನಿಂಗ್‌ ಸೆಂಟರ್‌ನ ಇಬ್ಬರು ಕಮಾಂಡೋಗಳು ಕೆಂಪು, ಬಿಳಿ, ಹಸಿರು ಬಣ್ಣದ ಪ್ಯಾರಾ ಮೋಟಾರ್‌ನೊಂದಿಗೆ ಆಗಸದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಸಾಹಸ ಪ್ರದರ್ಶನ ನೀಡಿದರು. ಇದೇ ವೇಳೆ ಮರಾಠ ಲೈಟ್ ಇನ್‌ಫಂಟ್ರಿ ರೆಜಿಮೆಂಟ್ ಸೆಂಟರ್‌ನ ಕಮಾಂಡೋಗಳು ಮಲ್ಲಕಂಬದಲ್ಲಿ ಪಕ್ಷಿಗಳು ಹಾರುವಂತೆ, ನಟರಾಜನ ಆಕೃತಿ, ಮೆಟ್ಟಿಲು ಆಕಾರ, ಪದ್ಮಾಸನ ಹಾಕಿ ಕುಳಿತುಕೊಳ್ಳುವ ಮೂಲಕ ನೋಡುಗರನ್ನು ಬೆರೆಗುಗೊಳಿಸಿದರು.ಬಿಎಸ್‌ಎಫ್‌ಗೆ ಪಥ ಸಂಚಲನ ಬಹುಮಾನ

ಗ್ರೂಪ್-1 ವಿಭಾಗದಲ್ಲಿ ಬಿಎಸ್‌ಎಫ್ ತಂಡಕ್ಕೆ ಪ್ರಥಮ ಬಹುಮಾನ ಲಭಿಸಿದ್ದು, ಕೆಎಸ್‌ಆರ್‌ಪಿ (ಪುರುಷ) ತಂಡಕ್ಕೆ ದ್ವಿತೀಯ ಹಾಗೂ ಸಿಆರ್‌ಪಿಎಫ್ (ಮಹಿಳಾ) ತಂಡಕ್ಕೆ ತೃತೀಯ ಬಹುಮಾನ ಪಡೆದಿದೆ. ಇದೇ ಕ್ರಮವಾಗಿ ಗ್ರೂಪ್-2 ವಿಭಾಗದಲ್ಲಿ ಅಗ್ನಿ ಶಾಮಕ ದಳ, ಗೃಹರಕ್ಷಕ ದಳ,ಗ್ರೂಪ್-3: ಎನ್‌ಸಿಸಿ, ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್, ಗ್ರೂಪ್-4: ರಾಷ್ಟ್ರೀಯ ಮಿಲಿಟರಿ ಶಾಲೆ, ಆರ್ಮಿ ಪಬ್ಲಿಕ್ ಸ್ಕೂಲ್‌, ಗ್ರೂಪ್-5 ಮಿತ್ರ ಅಕಾಡೆಮಿ, ಪೊಲೀಸ್ ಪಬ್ಲಿಕ್ ಶಾಲೆ, ಗ್ರೂಪ್-6 ರಾಜರಾಜೇಶ್ವರಿ ಇಂಗ್ಲಿಷ್‌ ಸ್ಕೂಲ್‌, ಫ್ಲೋರೆನ್ಸ್ ಪಬ್ಲಿಕ್ ಸ್ಕೂಲ್, ಗ್ರೂಪ್-೭:ಎನ್‌ಸಿಸಿ, ಪ್ರೆಸಿಡೆನ್ಸಿ ಶಾಲೆ ಪ್ರಶಸ್ತಿ ಭಾಜನವಾಗಿದೆ. ಶ್ವಾನದಳ, ಸಮರ್ಥನಂ ಹಾಗೂ ರಮಣಶ್ರೀ ಅಂದ ಮಕ್ಕಳ ತಂಡಕ್ಕೆ ಗೌರವ ಪ್ರಶಸ್ತಿ ನೀಡಲಾಯಿತು.ಸಾಂಸ್ಕೃತಿಕ ವಿಭಾಗದಲ್ಲಿ ಬಿಬಿಎಂಪಿ ಶಾಲೆ ಪ್ರಥಮ

‘ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಅಬ್ಬಕ್ಕದೇವಿ’ ನೃತ್ಯ ರೂಪದ ಪ್ರದರ್ಶಿಸಿದ ಪಿಳ್ಳಣ್ಣ ಗಾರ್ಡನ್‌ನ ಬಿಬಿಎಂಪಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆ ವಿಭಾಗದ ವಿದ್ಯಾರ್ಥಿಗಳಿಗೆ 78ನೇ ಸ್ವಾತಂತ್ರ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದ ವಿಭಾಗದಲ್ಲಿ ಪ್ರಥಮ ಬಹುಮಾನ ಲಭಿಸಿದೆ. ‘ಜಯ ಭಾರತಿ’ ನೃತ್ಯರೂಪಕ ಪ್ರದರ್ಶಿಸಿದ ಯಲಹಂಕದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ದ್ವಿತೀಯ ಬಹುಮಾನ ಬಹುಮಾನ ಲಭಿಸಿದೆ.2ನೇ ಬಾರಿ ಗೋವಾ ಪೊಲೀಸ್ ತಂಡ ಭಾಗಿ

ರಾಜ್ಯದ ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಗೋವಾದ ಪೊಲೀಸರ ತಂಡ ಎರಡನೇ ಬಾರಿ ಭಾಗಹಿಸಿದೆ. ಗೋವಾ ಪೊಲೀಸ್ ತಂಡ ಸೇರಿದಂತೆ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ತಂಡ, ಪ್ಯಾರಾಮೋಟಾರ್‌ ತಂಡ, ಮಲ್ಲಕಂಬ ಹಾಗೂ ಮೋಟರ್ ಸೈಕಲ್ ಸಾಹನ ಪ್ರದರ್ಶನ ತಂಡಗಳಿಗೆ ವಿಶೇಷ ಬಹುಮಾನ ನೀಡಿ ಈ ವೇಳೆ ಗೌರವಿಸಲಾಯಿತು.ಅಂಗಾಂಗ ದಾನ: ಪ್ರಶಂಸನಾ ಪತ್ರ

ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗಾಂಗ ದಾನ ಮಾಡಿದ 65 ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆಗೆ ಆಹ್ವಾನಿಸಿ ಪ್ರಶಂಸಾ ಪತ್ರ ನೀಡಿ ಗೌರವಿಸಿದರು.

Share this article