ಸೂಡಿಯಲ್ಲಿ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಭಿಯಾನ

KannadaprabhaNewsNetwork |  
Published : Aug 15, 2025, 01:00 AM IST
ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದಲ್ಲಿ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಭಿಯಾನ ನಡೆಯಿತು. | Kannada Prabha

ಸಾರಾಂಶ

79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಭಿಯಾನ ನಡೆಸಲಾಗುತ್ತಿದೆ.

ಗಜೇಂದ್ರಗಡ: 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಸ್ವಚ್ಛತೆಯೊಂದಿಗೆ ಸ್ವಾತಂತ್ರ್ಯ ದಿನಾಚರಣೆ ಅಭಿಯಾನ ನಡೆಸಲಾಗುತ್ತಿದೆ.

ತಾಲೂಕಿನ ಸೂಡಿ ಗ್ರಾಪಂ ವ್ಯಾಪ್ತಿಯಲ್ಲಿ ತಾಪಂ ಇಒ ಚಂದ್ರಶೇಖರ ಕಂದಕೂರು ಹಾಗೂ ಎಡಿ ಬಸವರಾಜ ಬಡಿಗೇರ ಅವರು ಕಸದ ವಾಹನ ಡ್ರೈವಿಂಗ್ ಮಾಡಿ, ಸೂಡಿ ಗ್ರಾಮಸ್ಥರಲ್ಲಿ ಸ್ವಚ್ಛತೆ ಅರಿವು ಮೂಡಿಸಿದಷ್ಟೇ ಅಲ್ಲದೆ ಮನೆಗಳಿಂದ ಸ್ವತಃ ಒಣ ಕಸ ಮತ್ತು ಹಸಿ ಕಸ ಪ್ರತ್ಯೇಕಿಸಿ ಕಸದ ವಾಹನಕ್ಕೆ ಕಸ ಹಾಕುವ ಮೂಲಕ ಸೂಡಿ ಗ್ರಾಮದಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಿದರು.

ಗ್ರಾಮದ ವಿದ್ಯಾನಗರ, ಶೆಟ್ಟರ ಕಾಲನಿ, ಬಜಾರ ಮುಖ್ಯ ರಸ್ತೆ, ಬಡಿಕಟ್ಟೆ ಓಣಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಾತಂತ್ರ್ಯ ದಿನಾಚರಣೆ ಸಂದೇಶ ಸಾರಿದರು. ಸ್ವಚ್ಛತೆಗಾಗಿ ಗ್ರಾಪಂ ಸಿಬ್ಬಂದಿ ಜತೆ ಕೈಜೋಡಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿಕೊಂಡರು. ಪ್ರತಿ ಮನೆಗಳಿಗೆ ತೆರಳಿದ ಇಒ ಹಾಗೂ ಎಡಿ ಅವರು, 79ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿರುವ ನಾವೆಲ್ಲರೂ ನಮ್ಮ ಗ್ರಾಮವನ್ನು ಕಸಮುಕ್ತ ಮಾಡೋಣ ಎಂದರು.

ಮನೆಯ ಗೃಹಿಣಿಯರನ್ನು ಭೇಟಿಯಾಗಿ ಹಸಿ ಕಸ ಮತ್ತು ಒಣ ಕಸ ಪ್ರತ್ಯೇಕಗೊಳಿಸಿ ಕಸದ ವಾಹನದಲ್ಲೇ ಕಸ ಹಾಕಿ ಎಂದು ಮನವಿ ಮಾಡಿಕೊಂಡರು. ಕಿರಾಣಿ ಅಂಗಡಿ ಮಾಲೀಕರನ್ನು ಭೇಟಿಯಾಗಿ ಗುಟ್ಕಾ, ದಿನಸಿ ಸಾಮಗ್ರಿಗಳ ಪ್ಲಾಸ್ಟಿಕ್ ಕವರ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಕಸದ ಬುಟ್ಟಿಯಲ್ಲಿ ಸಂಗ್ರಹಿಸಿ ಕಸದ ವಾಹನ ಬಂದಾಗ ಹಾಕಿ ಎಂದು ತಿಳಿವಳಿಕೆ ಮೂಡಿಸಿದರು.

ಆ. 8ರಿಂದ ಆ. 15ರ ವರೆಗೆ ನಡೆಯುತ್ತಿರುವ ಈ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸುವ ಕಾರ್ಯ ನಡೆಯುತ್ತಿದೆ. ಅದರಂತೆ ಸೂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಇಒ ಕಂದಕೂರ ಅವರು, ಆರೋಗ್ಯ ಕೇಂದ್ರದ ಪರಿಸರ ಪರಿಶೀಲಿಸಿದರು. ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಅಸ್ಪತ್ರೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸೂಚಿಸಿದರು. ಆಸ್ಪತ್ರೆಯ ಬಳಿಯ ಶಿಥಿಲಾವಸ್ಥೆಯಲ್ಲಿರುವ ನೀರಿನ ಟ್ಯಾಂಕ್ ಪರಿಶೀಲಿಸಿ, ಸಂಬಂಧಿಸಿದ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಸಾರ್ವಜನಿಕರ ಹಿತದೃಷ್ಟಿಯಿಂದ ನೀರಿನ ಟ್ಯಾಂಕ್ ಗುಣಮಟ್ಟ ಪರಿಶೀಲಿಸಿ ವರದಿ ನೀಡುವಂತೆ ತಾಕೀತು ಮಾಡಿದರು.

ಪಿಡಿಒ ಅಶೋಕ ಕಂಬಿ, ಗ್ರಾಪಂ ಅಧ್ಯಕ್ಷೆ ಆಶಾಬೇಗಂ ಮೂಕಾಶಿ, ಸದಸ್ಯರಾದ ರೇಣುಕಾ ಹರಮನಿ, ಶಾಂತವ್ವ ಕದುರಿಕೋಟೆ, ಕೆ. ಶರಣಬಸವ, ರುದ್ರಪ್ಪ ಮಾರನಬಸರಿ, ಚೆನ್ನಪ್ಪ ನೂಲ್ವಿ ಹಾಗೂ ಸಿಬ್ಬಂದಿ ಹಾಜರಿದ್ದರು.

PREV

Recommended Stories

ಲೋಕಾ ಎಸ್ಪಿ ಬದ್ರಿನಾಥ್‌ ಸೇರಿ 19 ಪೊಲೀಸರಿಗೆ ರಾಷ್ಟ್ರ ಪದಕ
ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ