- ಬೀದರ್ ಜಿಲ್ಲೆಯಲ್ಲಿ ರಸ್ತೆ ಕ್ರಾಂತಿ; 130 ಕಿ.ಮೀ. ಕಲ್ಯಾಣ ಪಥ ಯೋಜನೆಯ ಗುಣಮಟ್ಟದ ರಸ್ತೆಗಳು: ಸಚಿವ ಈಶ್ವರ ಖಂಡ್ರೆ ಭರವಸೆ
ಬೀದರ್ ಜಿಲ್ಲೆಯಲ್ಲಿ ರಸ್ತೆಗಳ ನಿರ್ಮಾಣದಲ್ಲಿ ಕ್ರಾಂತಿಯೇ ಆಗಲಿದ್ದು, ಕಲ್ಯಾಣ ಪಥ, ಬಸವ ಪಥ ಹೀಗೆಯೇ ವಿವಿಧ ಯೋಜನೆಗಳ ಮೂಲಕ ಬರುವ ಡಿಸಂಬರ್ ಒಳಗಾಗಿ ಚಿತ್ರಣ ಬದಲಾಗಲಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.ಅವರು ನಗರದ ನೆಹರು ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರ, ಗ್ರಾಮೀಣ ಭಾಗದಲ್ಲಿನ ರಸ್ತೆಗಳ ನಿರ್ಮಾಣಕ್ಕಾಗಿ ಸರ್ಕಾರ ಅನುದಾನ ನೀಡುತ್ತಲಿದೆ ಎಂದರು.ಬೀದರ್ ಜಿಲ್ಲೆಯಲ್ಲಿ 130ಕಿಮೀ ಕಲ್ಯಾಣ ಪಥ ಯೋಜನೆಯಡಿ ಗುಣಮಟ್ಟದ ರಸ್ತೆ ನಿರ್ಮಾಣ ಕಾಮಗಾರಿ ಸುಮಾರು 110ಕೋಟಿ ರು.ಗಳ ವೆಚ್ಚದಲ್ಲಿ ನಡೆಯುತ್ತಿದೆ. ಇದಲ್ಲದೆ 5ಸಾವಿರ ಕೋಟಿ ರು.ಗಳ ವೆಚ್ಚದಲ್ಲಿ ರಾಜ್ಯದಲ್ಲಿ ಮೂರುವರೆಯಿಂದ ನಾಲ್ಕು ಸಾವಿರ ಕಿಮೀ ರಸ್ತೆ ಮಾಡುವ ಯೋಜನೆ ಇದೆ ಇದರಲ್ಲಿಯೂ ಬೀದರ್ ಜಿಲ್ಲೆಯ ರಸ್ತೆ ಕಾಮಗಾರಿಗಳಿಗೆ ಅನುದಾನ ಸಿಗುತ್ತದೆ ಒಂದು ತಿಂಗಳ ಒಳಗಾಗಿ ಈ ಕಾಮಗಾರಿಯೂ ಆರಂಭವಾಗುತ್ತದೆ ಇದಲ್ಲದೆ ಬಸವಪಥ ರಸ್ತೆ ಯೋಜನೆಯ ವಿನ್ಯಾಸವೂ ಆಗುತ್ತಿದೆ ಎಂದರು.ನೂತನ ಅನುಭವ ಮಂಟಪಕ್ಕೆ ವಾರದೊಳಗೆ 50 ಕೋಟಿ:
ಬಸವಕಲ್ಯಾಣದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಅನುಭವ ಮಂಟಪಕ್ಕೆ ಈಗಾಗಲೇ 480ಕೋಟಿ ರು.ಗಳ ವೆಚ್ಚ ಮಾಡಲಾಗಿದೆ. ಅಗತ್ಯ ಅನುದಾನ ಬಿಡುಗಡೆ ಮಾಡಿ ಬರುವ ಬಸವ ಜಯಂತಿಯಂದು ಲೋಕಾರ್ಪಣೆಗೆ ಸಂಕಲ್ಪ ಮಾಡಿದ್ದೇವೆ ಎಂದು ಸಚಿವ ಖಂಡ್ರೆ ತಿಳಿಸಿದರು.ಇನ್ನೂ 50ಕೋಟಿ ರು. ಈ ವಾರದ ಒಳಗಾಗಿ ಬಿಡುಗಡೆ ಆಗಲಿದೆ. ಈಗಿನ ಅಧಿವೇಶನದಲ್ಲಿ 100ಕೋಟಿ ರು. ಹಾಗ ಮುಂದಿನ ಅಧಿವೇಶನದಲ್ಲಿ 100ಕೋಟಿ ರು. ಬಿಡುಗಡೆಗೆ ಕೋರಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ, ಮುಂಬರುವ ಬಸವ ಜಯಂತಿ ಒಳಗಾಗಿ ನೂತನ ಅನುಭವ ಮಂಟಪ ಉದ್ಘಾಟನೆಯ ಗುರಿ ಹೊಂದಿದ್ದೇವೆ ಎಂದರು.ಇನ್ನು ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿನ ಕ್ಯಾಥ್ ಲ್ಯಾಬ್ ಆರಂಭಕ್ಕೆ ಸರ್ಕಾರ ಸಾಕಷ್ಟು ಪ್ರಯತ್ನ ಮಾಡಿದೆ. ಸರ್ಕಾರದ ನಿಗದಿತ ಸಂಬಳಕ್ಕೆ ವೈದ್ಯರು, ತಂತ್ರಜ್ಞರು ಲಭ್ಯ ಆಗುತ್ತಿಲ್ಲ. ಹೀಗಾಗಿ ಪಿಪಿಪಿ ಮಾದರಿಯಲ್ಲಿ ಖಾಸಗಿ ಆಸ್ಪತ್ರೆಯ ವೈದ್ಯರೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಯೋಜನೆಗೆ ಮುಂದಾಗಿದ್ದೇವೆ ಎರಡ್ಮೂರು ತಿಂಗಳಲ್ಲಿ ಕ್ಯಾಥ್ ಲ್ಯಾಬ್ ಆರಂಭವಾಗಲಿದೆ ಎಂದು ಹೇಳಿದರು.ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಕಮ್ಮಿ ಅನುದಾನ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಚಿವರು, ಅವರ ಕಾಲದಲ್ಲಿ ನಮಗೆ ಅನುದಾನವನ್ನೇ ಕೊಟ್ಟಿರಲಿಲ್ಲ. ನಾವೀಗ ಎಲ್ಲರಿಗೂ ಕೊಟ್ಟಿದ್ದೇವೆ, ಅವಶ್ಯಕತೆಗೆ ಅನುಗುಣವಾಗಿ ನಾಲ್ಕೈದು ಕಿ.ಮೀ. ಹೆಚ್ಚುಕಮ್ಮಿ ಆಗಿರಬಹುದು. ಅದನ್ನು ಸರಿಪಡಿಸೋಣ ಎಂದರು.ಸುದ್ದಿಗೋಷ್ಟಿಯಲ್ಲಿ ಬೀದರ್ ಶಾಸಕ ರಹೀಮ್ ಖಾನ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಗಿರೀಶ ಬದೋಲೆ, ಎಸ್‌ಪಿ ಪ್ರದೀಪ ಗುಂಟಿ, ಬೀದರ್ ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್, ಅರಣ್ಯ ಉಪ ಸಂರಕ್ಷಣಾಧಿಕಾರಿ ಸುಮೀತ ಕುಮಾರ ಉಪಸ್ಥಿತರಿದ್ದರು.---
ಶೂಟೌಟ್ ದಾಳಿ: ಗಾಯಗೊಂಡಿದ್ದ
ಶೂಟೌಟ್ ದಾಳಿಯಲ್ಲಿ ಗಾಯಗೊಂಡಿದ್ದ ಶಿವಕುಮಾರ ಅವರಿಗೆ ವಯಕ್ತಿಕವಾಗಿ ಪರಿಹಾರ ಕಲ್ಪಿಸಿದ್ದೇನೆ. ಹೊರ ಗುತ್ತಿಗೆ ಆಧಾರದ ಮೇಲೆ ಮೂರು ಬಾರಿ ಉದ್ಯೋಗ ಕೊಟ್ಟಿದ್ದೇವೆ. ಖಾಯಂ ಉದ್ಯೋಗಕ್ಕೆ ಸಧ್ಯ ಪರಿಸ್ಥಿತಿಯಲ್ಲಿ ಅವಕಾಶವಿಲ್ಲ. ಅವರಿಗೆ ಇಂಥದ್ದೆ ಸ್ಥಳ ಬೇಕು ಎಂಬ ಬೇಡಿಕೆ ಇದೆ ಅದನ್ನೂ ಪರಿಶೀಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದ ಪೊಲೀಸ್ ತಂಡ ಜೀವದ ಹಂಗು ತೊರೆದು ಕೆಲಸ ಮಾಡಿದೆ ಎಂದು ಅವರು ಶ್ಲಾಘಿಸಿದರು.