ಕನ್ನಡಪ್ರಭ ವಾರ್ತೆ ಮಂಡ್ಯ
ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಹಾತ್ಮಗಾಂಧಿ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಧ್ವಜಾರೋಹಣ ನೆರವೇರಿಸಿದರು. ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹರಕ್ಷಕದಳ, ಎನ್‌ಸಿಸಿ, ಎನ್‌ಎಸ್‌ಎಸ್, ವಿವಿಧ ಶಾಲೆಗಳ ೩೯ ತುಕಡಿಗಳು ಪಥಸಂಚಲನ ನಡೆಸಿದರು. ಧ್ವಜವಂದನೆ ಸ್ವೀಕರಿಸಿದ ಸಚಿವರು ಸ್ವಾತಂತ್ರ್ಯೋತ್ಸವದ ಸಂದೇಶ ಭಾಷಣ ಮಾಡಿದರು.
ಪ್ರಸಕ್ತ ವರ್ಷ ಮುಂಗಾರು ಆಶಾದಾಯಕವಾಗಿಲ್ಲ. ವಾಡಿಕೆಯಂತೆ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಪರಿಣಾಮ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಆರಂಭಗೊಂಡಿಲ್ಲ. ಸರ್ಕಾರ ಈ ಬಗ್ಗೆ ಅವಲೋಕಿಸಲು ಬರ ಪರಿಸ್ಥಿತಿಯ ಅವಲೋಕನ ತಂಡ ರಿಸಿದ್ದು ಮಾರ್ಗಸೂಚಿಯನ್ವಯ ಬರ ಘೋಷಣೆ ಮಾಡುವ ಸಂಬಂಧ ಕ್ರಮ ವಹಿಸಲಾಗುವುದು ಎಂದರು.ಮಳೆ ಕೊರತೆಯಿಂದ ಕೆಆರ್‌ಎಸ್ ಅಣೆಕಟ್ಟು ಭರ್ತಿಯಾಗಿಲ್ಲ. ಕಳೆದ ೨೦ ದಿನಗಳಿಂದ ಸ್ವಲ್ಪಮಟ್ಟಿಗೆ ಅಣೆಕಟ್ಟೆಯ ಒಳಹರಿವು ಹೆಚ್ಚಿದೆ. ಒಂದು ವೇಳೆ ಮುಂಗಾರು ಅಂತ್ಯದವರೆಗೆ ನಿರೀಕ್ಷಿತ ಪ್ರಮಾಣದ ಮಳೆಯಾಗದೆ ಅಣೆಕಟ್ಟೆಯ ನೀರಿನ ಮಟ್ಟ ಹೆಚ್ಚಳವಾಗದಿದ್ದರೆ ಕಡಿಮೆ ನೀರನ್ನು ಬಳಸಿಕೊಂಡು ಪರ್ಯಾಯ ಬೆಳೆಗಳನ್ನು ಬೆಳೆಯುವತ್ತ ರೈತರು ಗಮನಹರಿಸಬೇಕು. ಕೃಷಿ ವಿಶ್ವವಿದ್ಯಾನಿಲಯದ ವಿಜ್ಞಾನಿಗಳ ಸಮನ್ವಯದಿಂದ ಪರ್ಯಾಯ ಬೆಳೆಗಳ ಕುರಿತ ಕ್ರಿಯಾಯೋಜನೆಯನ್ನು ಸಹ ತಯಾರಿಸಲಾಗಿದೆ ಎಂದರು.
ಬಡವರು ಮತ್ತು ಗ್ರಾಮೀಣ ಜ ನರಿಗೆ ಒಂದೇ ಸೂರಿನಡಿ ಕಡಿಮೆ ವೆಚ್ಚದಲ್ಲಿ ವೈದ್ಯಕೀಯ ಪರೀಕ್ಷೆ ಮಾಡುವ ಉದ್ದೇಶದಿಂದ ಹಾಲಿ ಇರುವ ಮಿಮ್ಸ್ ಲ್ಯಾಬೋರೇಟರಿಗಳನ್ನು ೯೫.೫೦ ಲಕ್ಷ ರು. ವೆಚ್ಚದಲ್ಲಿ ಉನ್ನತೀಕರಿಸಿ ಐಪಿಎಚ್‌ಎಲ್ ಲ್ಯಾಬ್‌ಗಲಾಗಿ ಪರಿವರ್ತಿಸಲಾಗುತ್ತಿದೆ. ತೀವ್ರತರದ ತುರ್ತು ಆರೋಗ್ಯ ಬಿಕ್ಕಟ್ಟನ್ನು ಎದುರಿಸುವ ರೋಗಿಗಳಿಗೆ ತಕ್ಷಣವೇ ಸೂಕ್ತ ಚಿಕಿತ್ಸೆ, ಆರೈಕೆ ನೀಡುವ ಉದ್ದೇಶದಿಂದ ಕ್ರಿಟಿಕಲ್ ಕೇರ್ ಘಟಕಗಳನ್ನು ಮಿಮ್ಸ್‌ನಲ್ಲಿ ಪ್ರಾರಂಭಿಸಲು ೧೬.೬೩ ಕೋಟಿ ರು. ವೆಚ್ಚದ ಕಾಮಗಾರಿಗೆ ಅನುಮತಿ ನೀಡಿದ್ದು, ೫೦ ಹಾಸಿಗೆಗಳ ಕ್ರಿಟಿಕಲ್ ಕೇರ್ ಬ್ಲಾಕ್ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಸಶಸ್ತ್ರ ಮೀಸಲು ಪಡೆ- ಪ್ರಥಮ, ಅಗ್ನಿಶಾಮಕ ದಳ- ದ್ವಿತೀಯ, ನಾಗರಿಕ ಮತ್ತು ಪೊಲೀಸ್ ಪಡೆ- ತೃತೀಯ. ಎನ್‌ಸಿಸಿ ವಿಭಾಗದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯ-ಪ್ರಥಮ, ಅನಿಕೇತನ ಕಾಲೇಜು-ದ್ವಿತೀಯ, ಅನಿಕೇತನ ಪ್ರೌಢಶಾಲೆ-ತೃತೀಯ, ಸ್ಕೌಟ್ಸ್ ಮತ್ತು ಗೈಡ್ಸ್ ವಿಭಾಗದಲ್ಲಿ ಸೆಂಟ್ ಜೋಸೆಫ್ ಪ್ರೌಢಶಾಲೆ ಬಾಲಕಿಯರ ತಂಡ-ಪ್ರಥಮ, ಕಾರ್ಮೆಲ್ ಬಾಲಕಿಯರ ಪದವಿಪೂರ್ವ ಕಾಲೇಜು-ದ್ವಿತೀಯ, ಲಕ್ಷ್ಮೀಜನಾರ್ದನ ಬಾಲಕಿಯರ ಪ್ರೌಢಶಾಲೆ-ತೃತೀಯ. ಪ್ರೌಢಶಾಲೆ-ಕಾಲೇಜು ವಿಭಾಗದಲ್ಲಿ ಡ್ಯಾಪೋಡಿಲ್ಸ್ ಪ್ರೌಢಶಾಲೆ ಬಾಲಕಿಯರ ವಿಭಾಗ-ಪ್ರಥಮ, ಆದರ್ಶ ಪ್ರೌಢಶಾಲೆ ಬಾಲಕಿಯರ ವಿಭಾಗ-ದ್ವಿತೀಯ, ರೋಟರಿ ಬಾಲಕ ಪ್ರೌಢಶಾಲೆ-ತೃತೀಯ. ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಭಿನವ ಭಾರತಿ ಬಾಲಕರ ವಿಭಾಗ-ಪ್ರಥಮ, ಕಾರ್ಮೆಲ್ ಕಾನ್ವೆಂಟ್ ಆಂಗ್ಲ ಮಾಧ್ಯಮ ಬಾಲಕಿಯರ ವಿಭಾಗ-ದ್ವಿತೀಯ, ಸೆಂಟ್ ಜೋಸೆಫ್ ಬಾಲಕಿಯರ ವಿಭಾಗ-ತೃತೀಯ.