ತ್ಯಾಗ, ಹೋರಾಟಗಳ ಫಲವೇ ಸ್ವಾತಂತ್ರ್ಯೋತ್ಸವ

KannadaprabhaNewsNetwork |  
Published : Aug 16, 2025, 12:03 AM IST
ವಿಜಯಪುರದಲ್ಲಿ ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಅವರು ಧ್ವಜಾರೋಹಣ ನೆರವೇರಿಸಿದರು. | Kannada Prabha

ಸಾರಾಂಶ

ನಮಗೆ ಸಿಕ್ಕಿರುವ ಸ್ವಾತಂತ್ರ್ಯವು ನಮ್ಮ ಹಿರಿಯರ ನಿಸ್ವಾರ್ಥ, ತ್ಯಾಗ, ಸಂಕಲ್ಪ ಮತ್ತು ಹೋರಾಟಗಳ ಫಲವಾಗಿದೆ. ಅವರು ಮಾಡಿದ ಹೋರಾಟದಿಂದ ಇಂದು ನಾವೆಲ್ಲರೂ ಸುಖವಾಗಿದ್ದೇವೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಮಗೆ ಸಿಕ್ಕಿರುವ ಸ್ವಾತಂತ್ರ್ಯವು ನಮ್ಮ ಹಿರಿಯರ ನಿಸ್ವಾರ್ಥ, ತ್ಯಾಗ, ಸಂಕಲ್ಪ ಮತ್ತು ಹೋರಾಟಗಳ ಫಲವಾಗಿದೆ. ಅವರು ಮಾಡಿದ ಹೋರಾಟದಿಂದ ಇಂದು ನಾವೆಲ್ಲರೂ ಸುಖವಾಗಿದ್ದೇವೆ. ಇದನ್ನು ನಾವು ಎಂದಿಗೂ ಮರೆಯದೆ, ಆ ಹಿರಿಯರಿಗೆ ಕೃತಜ್ಞರಾಗಿರಬೇಕು ಮತ್ತು ಈ ಸಂದೇಶವನ್ನು ಕಿರಿಯ ತಲೆಮಾರಿಗೂ ಮುಟ್ಟಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಹೇಳಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಶಾಂತಿ ಮಾರ್ಗದ ಹೋರಾಟದ ಮೂಲಕ ಮಹಾತ್ಮಾ ಗಾಂಧಿ ಇಂದಿಗೂ ವಿಶ್ವದಲ್ಲಿ ಜನಸಾಮಾನ್ಯರ ನಾಯಕ ಎಂದು ಪ್ರಸಿದ್ಧಿಯಾಗಿದ್ದಾರೆ. ಸುಭಾಷ ಚಂದ್ರ ಬೋಸ್‌, ಭಗತ್ ಸಿಂಗ್ ತಮ್ಮ ಕ್ರಾಂತಿ ಮಾರ್ಗದಿಂದ ಯುವಶಕ್ತಿ ಪ್ರೇರಕರಾಗಿದ್ದಾರೆ. ಅಪ್ರತಿಮ ಶೌರ್ಯದಿಂದ ಹೋರಾಡಿದ ಎಲ್ಲ ಮಹನೀಯರು ನಮ್ಮೆಲ್ಲರಿಗೂ ಆದರ್ಶ ಪ್ರಾಯರಾಗಿರುತ್ತಾರೆ. ಅಂತೆಯೇ ಅವರೆಲ್ಲರ ತ್ಯಾಗ ಬಲಿದಾನಗಳಿಗೆ ಈ ವೇದಿಕೆಯ ಮೂಲಕ ಗೌರವ ಸಮರ್ಪಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ₹೬.೪೫ ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ನಾಗಠಾಣ ಮತ್ತು ದೇವರ ಹಿಪ್ಪರಗಿ ಬಸ್ ನಿಲ್ದಾಣಗಳು ಲೋಕಾರ್ಪಣೆಗೊಂಡಿದ್ದು, ದೇವರಹಿಪ್ಪರಗಿ ಬಸ್ ನಿಲ್ದಾಣಕ್ಕೆ ವೀರ ಶರಣ ಮಡಿವಾಳ ಮಾಚಿದೇವರ ಹೆಸರನ್ನು ಮತ್ತು ಸಿಂದಗಿ ಬಸ್ ನಿಲ್ದಾಣಕ್ಕೆ ಶ್ರೀ ಚನ್ನವೀರ ಮಹಾಸ್ವಾಮೀಜಿ ಹೆಸರನ್ನು ನಾಮಕರಣ ಮಾಡಲಾಗಿದೆ. ಅದರಂತೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ವೀರರಾಣಿ ಕಿತ್ತೂರ ಚನ್ನಮ್ಮ ಎಂದು ನಾಮಕರಣ ಮಾಡಲಾಗುವ ಪ್ರಸ್ತಾವನೆಗೆ ಶೀಘ್ರವೇ ಸರ್ಕಾರದಿಂದ ಅನುಮತಿ ಪಡೆದು ಕಾರ್ಯಗತಗೊಳಿಸಲಾಗುವುದು. ಜಿಲ್ಲೆಯ ಉಸ್ತುವಾರಿ ಹೊಣೆ ಹೊತ್ತಿರುವ ನಾನು, ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದೇನೆ ಎಂದು ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಇಲಾಖಾ ವ್ಯಾಪ್ತಿಯ ಸಿಎಸ್‌ಆರ್ ಘಟಕಗಳ ಮೂಲಕ ಜಿಲ್ಲೆಯ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ಆವರಣದಲ್ಲಿ ೧ ರಿಂದ ೨ ಎಕರೆ ಜಮೀನು ಲಭ್ಯವಿರುವ ಶಾಲೆಗಳಲ್ಲಿ ಮಕ್ಕಳ ಸ್ನೇಹಿ ಆಟದ ಪಾರ್ಕ್ ನಿರ್ಮಿಸಿ ಅಗತ್ಯ ಆಟೋಪಕರಣ ಒದಗಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಜಿಲ್ಲೆಯಲ್ಲಿ ಕೆಎಸ್‌ಡಿಎಲ್ ಉತ್ಪಾದನಾ ಘಟಕಕ್ಕಾಗಿ ೫೦ ಎಕರೆ ಜಮೀನು ಹಂಚಿಕೆ ಮಾಡಲಾಗಿದೆ. ಈ ಯೋಜನೆಯ ಶಂಕುಸ್ಥಾಪನೆ ಶೀಘ್ರದಲ್ಲಿ ನೆರವೇರಲಿದೆ. ಇದರೊಂದಿಗೆ ಕೆಎಸ್‌ಡಿಎಲ್ ಉತ್ತರ ಕರ್ನಾಟಕದಲ್ಲೂ ನೆಲೆಯೂರಲಿದೆ. ಅಲ್ಲದೆ, ಈ ಜಾಗವನ್ನು ಶ್ರೀಗಂಧ ಬೆಳೆಯಲು ಪ್ರೋತ್ಸಾಹ ನೀಡುವಂತಹ/ ಜಾಗೃತಿ ಮೂಡಿಸುವಂತಹ ತಾಣವಾಗಿಯೂ ಅಭಿವೃದ್ಧಿ ಮಾಡಲಾಗುವುದು. ಇದೊಂದು ರೈತ ಸ್ನೇಹಿ ತಾಣ ಮಾಡಲಾಗುವುದು ಎಂದರು. ವಿಜಯಪುರ ಅಂದರೆ ಬರಪೀಡಿತ ಪ್ರದೇಶ ಎನ್ನುವ ಕಾಲ ಮುಗಿದು ಹೋಗಿದೆ. ಈಗ ಇದು ತೋಟಗಾರಿಕೆ ಜಿಲ್ಲೆ ಎಂದು ಹೆಸರಾಗಿದೆ. ಇದರ ಜೊತೆಗೆ ವಿಜಯಪುರವನ್ನು ಕೈಗಾರಿಕಾ ಸಂಸ್ಕೃತಿ ಜಿಲ್ಲೆಯನ್ನಾಗಿ ಮಾಡಬೇಕೆಂಬುದು ನನ್ನ ಮಹದಾಸೆಯಾಗಿದೆಂದರು.

ಆಕರ್ಷಕ ಪಥಸಂಚಲನ:

ತೆರೆದ ವಾಹನದಲ್ಲಿ ಪೆರೇಡ್ ತಂಡಗಳ ಪರಿವೀಕ್ಷಣೆ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಪರೇಡ್ ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ, ಐಆರ್‌ಬಿ ಪೊಲೀಸ್ ಪಡೆಯ ಗೃಹರಕ್ಷಕ ದಳ, ಅರಣ್ಯ ಇಲಾಖೆ, ಅಗ್ನಿಶಾಮಕ ಇಲಾಖೆ, ಸೈನಿಕ ಶಾಲೆ, ಎನ್‌ಸಿಸಿ ಸೀನಿಯರ್ ಡಿವಿಜನ್, ಪೊಲೀಸ್ ವಾದ್ಯ ವೃಂದ ಸೇರಿದಂತೆ ಹಾಗೂ ವಿವಿಧ ಶಾಲಾ ಕಾಲೇಜು ತಂಡಗಳು ಭಾಗವಹಿಸಿದ್ದವು. ಇದೇ ಸಂದರ್ಭದಲ್ಲಿ ವಿವಿಧ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿ ಕಾರ್ಯಕ್ರಮ ಪ್ರಸ್ತುತಪಡಿಸಿದರು.

ಸಂಸದ ರಮೇಶ ಜಿಗಜಿಣಗಿ, ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಪ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್, ಶಾಸಕ ಕೇಶವ ಪ್ರಸಾದ ಎಸ್, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಕಾಂತಾ ನಾಯಕ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ ಮುಶ್ರೀಪ್, ಮೇಯರ್ ಎಸ್.ಎಂ.ಕರಡಿ, ಉಪ ಮೇಯರ್ ಸುಮಿತ್ರಾ ಜಾಧವ, ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಮುಂತಾದವರು ಇದ್ದರು.

PREV

Recommended Stories

ಅಭಿಮಾನ್‌ ಸ್ಟುಡಿಯೋ ಬಳಿಯೇ ವಿಷ್ಣು ದರ್ಶನ ಕೇಂದ್ರ : ಕಿಚ್ಚ ಸುದೀಪ್‌ ಅವರಿಂದ ಜಾಗ ಖರೀದಿ
ಮುಸುಕುಧಾರಿಯು ಕಿಂದರಿ ಜೋಗಿ, ಎಸ್‌ಐಟಿ ಇಲಿ ಆಗದಿರಲಿ : ಸುರೇಶ್‌