ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಭಾನುವಾರ ನಡೆದ 76 ನೇ ಗಣರಾಜ್ಯೋತ್ಸವದಲ್ಲಿ ಉಪವಿಭಾಗಾಧಿಕಾರಿ ಶ್ರೀನಿವಾಸ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.ಬಳಿಕ ಉಪವಿಭಾಗಾಧಿಕಾರಿಗಳು ತೆರೆದ ವಾಹನದ ಮೂಲಕ ವಿದ್ಯಾರ್ಥಿಗಳ ಬ್ಯಾಂಡೆಸೆಟ್ ತಂಡಗಳನ್ನು ಪರಿಚಹಿಸಿಕೊಂಡರು. ನಂತರ ವೇದಿಕೆಯಲ್ಲಿದ್ದ ಗಣ್ಯರಿಗೆ ಪಥಸಂಚಲನದ ಮೂಲಕ ಗೌರವವಂಧನೆ ಸಲ್ಲಿಸಿದರು.
ಉಪವಿಭಾಗಾಧಿಕಾರಿ ಶ್ರೀನಿವಾಸ್ ಮಾತನಾಡಿ, ಭಾರತ ಸ್ವಾತಂತ್ರ್ಯಸಿಕ್ಕ ನಂತರ ಅನೇಕ ಬದಲಾವಣೆ ಕಂಡುಕೊಂಡು ನೀರಾವರಿ, ಕೃಷಿ, ಕೈಗಾರಿಕೆ, ಸಾರಿಗೆ, ಕ್ರೀಡೆ, ಶೈಕ್ಷಣಿಕ, ಆರೋಗ್ಯ, ಉದ್ಯಮ ಸೇರಿದಂತೆ ಅನೇಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.ಕೇವಲ 200 ಕೋಟಿ ಇದ್ದ ಬಜೆಟ್‌ನ ಗಾತ್ರ ಸುಮಾರು 45 ಲಕ್ಷ ಕೋಟಿಗೆ ಏರಿಕೆಯಾಗಿದೆ. ವಿದೇಶದಿಂದ ಆಹಾರ ರಫ್ತು ಮಾಡಿಕೊಳ್ಳುತ್ತಿದ್ದ ಭಾರತದಲ್ಲಿ ಹಸಿರುಕರಣವಾಗಿದೆ. 140 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಿಕೊಡುವುದರ ಜತೆಗೆ ಬೇರೆ ರಾಷ್ಟ್ರಗಳಿಗೂ ಆಹಾರ ಪೂರೈಕೆ ಮಾಡುವಷ್ಟರ ಮಟ್ಟಿಗೆ ಬೆಳೆದಿದೆ ಎಂದರು.
ಪ್ರತಿಷ್ಠಿತ ವೈದ್ಯರು, ಎಂಜಿನಿಯರ್‌ಗಳನ್ನು ಉತ್ಪಾದನೆ ಮಾಡುವ ರಾಷ್ಟ್ರವಾಗಿದೆ. ವಿಶ್ವದ ಅನೇಕ ರಾಷ್ಟ್ರಗಳು ಭಾರತವನ್ನು ಗೌರವಿಸುವಷ್ಟರ ಮಟ್ಟಿಗೆ ಬೆಳೆದಿದೆ. ವಿದ್ಯಾರ್ಥಿಗಳು, ಯುವ ಜನಾಂಗ ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕು. ಮಹಾತ್ಮಗಾಂಧಿ, ವಿವೇಕನಂದರಂತಹ ಅಗ್ರಗಣ್ಯ ನಾಯಕರಂತೆ ಬೆಳೆದು ರಾಷ್ಟ್ರಕ್ಕೆ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.ಇಸ್ರೇಲ್, ಜಪಾನ್ ನಂತರ ಸಣ್ಣರಾಷ್ಟ್ರಗಳು ವಿಜ್ಞಾನ, ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳೆದು ವಿಶ್ವಕ್ಕೆ ಕೊಡುಗೆ ನೀಡುತ್ತಿವೆ. ಭಾರತ ದೇಶವು ಸಹ ಮುಂದುವರೆದ ರಾಷ್ಟ್ರಗಳ ಸಾಲಿಗೆ ಸೇರಬೇಕಿದೆ ಎಂದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಹಲವು ಮಹಾನೀಯರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯಸಿಕ್ಕಿ ಗಣರಾಜ್ಯಗೊಂಡಿದೆ. ವಿದ್ಯಾರ್ಥಿಗಳು ತ್ಯಾಗ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು, ಸಣ್ಣ ಸಣ್ಣ ತ್ಯಾಗ ಮಾಡಿದರೆ ಮಾತ್ರ ನಾವು ಮುಂದೆ ದೊಡ್ಡಮಟ್ಟಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಇದೇ ವೇಳೆ ವಿವಿಧ ಶಾಲಾ ಕಾಲೇಜು ಮಕ್ಕಳಿಂದ ದೇಶ, ನಾಡು-ನುಡಿಗೆ ಸಂಬಂಧಿಸಿದಂತೆ ಹಲವು ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡುವ ಮೂಲಕ ಎಲ್ಲರನ್ನು ರಂಜಿಸಿದರು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್‍ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಜ್ಯೋತಿಲಕ್ಷ್ಮಿ, ಉಪಾಧ್ಯಕ್ಷ ಅಶೋಕ್, ತಹಸೀಲ್ದಾರ್ ಸಂತೋಷ್, ಇಒ ಲೋಕೇಶ್‌ಮೂರ್ತಿ, ಬಿಇಒ ರವಿಕುಮಾರ್ ಸೇರಿದಂತೆ ಪುರಸಭೆ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.