ಕನ್ನಡಪ್ರಭ ವಾರ್ತೆ ಭಾರತೀನಗರ
ಇಂದಿರಾಗಾಂಧಿ ಕಾಲದಿಂದಲೂ ಗರೀಬಿ ಹಟಾವೋ ಮಾಡುತ್ತೇವೆಂದು ಹೇಳಿದ ಕಾಂಗ್ರೆಸ್ ಸರ್ಕಾರದಿಂದ ಇಂದಿಗೂ ಬಡವರ ದೇಶ ಮುಕ್ತ ಮಾಡುವಲ್ಲಿ ವಿಫಲವಾಗಿದೆ ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.ಜೈಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಇಂದಿರಾಗಾಂಧಿ 17ವರ್ಷ ಪ್ರಧಾನ ಮಂತ್ರಿಯಾಗಿದ್ದ ವೇಳೆ ಕಾಂಗ್ರೆಸ್ ಸರ್ಕಾರ ಬಡವರ ಮುಕ್ತ ದೇಶ ಮಾಡುವ ಉದ್ದೇಶದಿಂದ ಬ್ಯಾಂಕ್‌ಗಳಿಂದ ಸಾಲ ಕೊಡಿಸಿದ್ದು, ಎಲ್ಲಾ ರೀತಿಯಲ್ಲೂ ಕಾರ್ಯಕ್ರಮ ಜಾರಿ ಮಾಡಿದ್ದರೂ ಕೂಡ ಇಂದಿಗೂ ಬಡವರು ಬಡವರಾಗಿಯೇ ಇದ್ದಾರೆ ಎಂದರು.ಎಲ್ಲರಿಗೂ ಸಮಾನ ಆರೋಗ್ಯ, ಶಿಕ್ಷಣ ನೀಡಿದಲ್ಲಿ ಮಾತ್ರ ಬಡತನದ ನಿವಾರಣೆ ಸಾಧ್ಯ ಎಂದು ತಿಳಿದಿದ್ದ ಎಚ್.ಡಿ. ಕುಮಾರಸ್ವಾಮಿ ಅವರು ಹಲವು ಯೋಜನೆಗಳ ಜಾರಿಗೆ ತರಲು ಮುಂದಾಗಿದ್ದರು. ಆದರೆ, ಎಚ್ಡಿಕೆ ಬೆಂಬಲಿಸದೆ ರಾಜ್ಯದ ಜನ ಕಾಂಗ್ರೆಸ್ ಘೋಷಿಸಿದ ಉಚಿತ ಭಾಗ್ಯಗಳಿಗೆ ಮಣೆ ಹಾಕಿದ್ದರಿಂದ ಸರ್ಕಾರ ದಿವಾಳಿಯಾಗುತ್ತಿದೆ ಎಂದರು.
ಸರ್ಕಾರದಿಂದ ಯಾವುದೇ ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರ್ಕಾರ ತಮ್ಮ ವೋಟ್ ಬ್ಯಾಂಕ್‌ಗಳಿಗೋಸ್ಕರ ಕೆಲಸ ಮಾಡುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಚಿಂತಿಸುತ್ತಿಲ್ಲ ಎಂದರು.ದುಡಿಮೆಯಲ್ಲಿ ಜೀವಿಸುತ್ತಿರುವವರು ಮಾತ್ರ ಕನ್ನಡದ ಹಬ್ಬ ಆಚರಣೆ ಮಾಡಲು ಹೊರ ಬರುತ್ತಿದ್ದಾರೆ. ಶ್ರೀಮಂತರು ಕನ್ನಡದ ಬಗ್ಗೆ ಪ್ರೀತಿ ಇದ್ದರೂ ರಕ್ಷಣೆ ಮಾಡುತ್ತಿಲ್ಲ. ಆಟೋ, ಕ್ಯಾಬ್ಸ್ ಸೇರಿದಂತೆ ಮತ್ತಿತರ ಮಾಲೀಕರು ಮತ್ತು ಚಾಲಕರಲ್ಲಿ ಇರುವ ಅಭಿಮಾನ ಎಲ್ಲರಲ್ಲೂ ಇದ್ದಲ್ಲಿ ನಾಡಿನಲ್ಲಿ ಎಲ್ಲೂ ಅನ್ಯಭಾಷೆ ಸದ್ದು ಕೇಳದು ಎಂದರು.
ಇದೇ ವೇಳೆ ಬೆಳ್ಳಿರಥದಲ್ಲಿ ಭುವನೇಶ್ವರಿ ಭಾವಚಿತ್ರವನ್ನಿಟ್ಟು ಮದ್ದೂರು-ಮಳವಳ್ಳಿ ಹೆದ್ದಾರಿಯಲ್ಲಿ ವೀರಗಾಸೆ, ಪೂಜಾಕುಣಿ, ಆಟೋಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಸಮಾರಂಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಜಿಪಂ ಮಾಜಿ ಸದಸ್ಯ ಕರಡಕೆರೆ ಹನುಮಂತೇಗೌಡ, ಪಿಎಸ್‌ಐ ದೇವರಾಜು ಅವರನ್ನು ಅಭಿನಂದಿಸಿ ಗೌರವಿಸಲಾಯಿತು.ಈ ವೇಳೆ ಸಾವಿರಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು. ಆಟೋ ಸಂಘದ ಗೌರವಾಧ್ಯಕ್ಷ ಕರಡಕೆರೆ ಹನುಮಂತು, ಕೋಶಾಧ್ಯಕ್ಷ ಅಣ್ಣೂರು ಯೋಗೇಂದ್ರ, ಅಧ್ಯಕ್ಷ ದಿಲೀಪ್, ಉಪಾಧ್ಯಕ್ಷ ಪ್ರಶಾಂತ್, ಖಜಾಂಚಿ ಕುಮಾರ್, ಕಾರ್ಯದರ್ಶಿ ರಮೇಶ್, ಅಣ್ಣೂರು ವಿನು, ದೇವರಹಳ್ಳಿ ತೈಲಪ್ಪ, ಪದಾಧಿಕಾರಿಗಳು ಇದ್ದರು.