ಕನ್ನಡಪ್ರಭ ವಾರ್ತೆ ನಾಗಮಂಗಲ
ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆ ಕಾಣುತ್ತಿರುವ ಭಾರತ ಮುಂದೊಂದು ದಿನ ವಿಶ್ವಗುರುವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂತಹ ಶಕ್ತಿ ಈ ದೇಶಕ್ಕೆ ಇದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದರು.ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಬಿಜಿಎಸ್ ಸಭಾಭವನದಲ್ಲಿ ಗುರುವಾರ ನಡೆದ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರ 12ನೇ ವಾರ್ಷಿಕ ಪಟ್ಟಾಭಿಷೇಕ ಹಾಗೂ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಜ್ಞಾನ ಇರುವುದು ಭಾರತದಲ್ಲಿ. ಅಮೆರಿಕಾ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಭಾರತದ ವಿಜ್ಞಾನಿಗಳಿರುವುದೇ ಇದಕ್ಕೆ ನಿದರ್ಶನ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ವೇಳೆ ಅಂದಿನ ರಾಷ್ಟ್ರಪತಿ ಅಬ್ದುಲ್‌ಕಲಾಂ ಅವರು ತಮ್ಮಲ್ಲಿರುವ ಜ್ಞಾನವನ್ನು ಬಳಸಿಕೊಂಡು ಇಡೀ ಪ್ರಪಂಚವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು ಎಂದರು.ಧರ್ಮ ಮಾರ್ಗದಲ್ಲಿ ನಡೆಯಿರಿ ಎಂದು ಬೋಧನೆ ಮಾಡುವುದು ಮಠಗಳ ಕೆಲಸ ಎಂಬುದು ಜನರ ನಂಬಿಕೆ. ಆದರೆ, ಜ್ಞಾನ, ವಿಜ್ಞಾನ ತಂತ್ರಜ್ಞಾನ ಮೇಳವನ್ನು ನಡೆಸುತ್ತಿರುವ ಶ್ರೀ ಆದಿಚುಂಚನಗಿರಿ ಮಠದ ಹಿನ್ನೆಲೆಯನ್ನು ಅರ್ಥೈಸಿಕೊಳ್ಳಬೇಕಿದೆ ಎಂದರು.
ವಿಜ್ಞಾನ ಧರ್ಮದ ಕೈಯಲ್ಲಿದ್ದರೆ ಅಲ್ಲಿ ಒಳಿತಾಗುತ್ತದೆ. ಅಧರ್ಮದ ಕೈಯಲ್ಲಿದ್ದರೆ ಕೆಡುಕಾಗುತ್ತದೆ. ಆದ್ದರಿಂದ ಜ್ಞಾನ ಯಾರ ಬಳಿ ಇರಬೇಕೋ ಅವರ ಬಳಿಯೇ ಇರಬೇಕು. ಜ್ಞಾನ ಅಧರ್ಮಿಗಳ ಸ್ವತ್ತಾಗಬಾರದು. ಧರ್ಮಿಗಳ ಸ್ವತ್ತಾಗಬೇಕು ಎಂಬ ದೃಷ್ಟಿಯಿಂದ ಆದಿಚುಂಚನಗಿರಿ ಮಠ ಜ್ಞಾನ ವಿಜ್ಞಾನ ಮೇಳ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಚಿಕ್ಕಬಳ್ಳಾಪುರ ಸಂಸದ ಡಾ. ಕೆ.ಸುಧಾಕರ್ ಮಾತನಾಡಿ, ಇಂದು ಜ್ಞಾನದ ಜೊತೆಗೆ ವಿಜ್ಞಾನವೂ ಅವಶ್ಯಕ. ಇದರ ಸಂಪೂರ್ಣ ಲಾಭವನ್ನು ಯುವ ಸಮುದಾಯ ಪಡೆದುಕೊಳ್ಳಬೇಕು. ಆದಿಚುಂಚನಗಿರಿ ಮಠವು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ನೀಡುತ್ತಿರುವ ಕೊಡುಗೆ ಅನನ್ಯವಾದುದು ಎಂದು ಶ್ರೀಮಠದ ಕಾರ್ಯವನ್ನು ಶ್ಲಾಘಿಸಿದರು.
ವಿಜ್ಞಾನ ಮತ್ತು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದು ಆಧ್ಯಾತ್ಮಿಕ ಕ್ಷೇತ್ರದಲ್ಲಿರುವ ಎಲ್ಲಾ ವಿಷಯಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ಸರ್ವ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿರುವ ಡಾ.ನಿರ್ಮಲಾನಂದನಾಥ ಶ್ರೀಗಳು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.ಈ ಹಿಂದೆ ಮೆದುಳಿಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆ ಮಾಡುವಾಗ ಮನುಷ್ಯನನ್ನು ಮುಟ್ಟಲು ಕಷ್ಟವಾಗುತ್ತಿತ್ತು. ಈಗ ರೋಬೋಟಿಕ್ ಸರ್ಜರಿ ಮೂಲಕ ಬಹಳಷ್ಟು ಅನುಕೂಲವಾಗುತ್ತಿದೆ. ಕೃತಕ ಬುದ್ಧಿಮತ್ತೆ ಒಂದನ್ನೇ ನಾವು ನಂಬಿಕೊಂಡು ಹೋಗಬಾರದು. ಮಾನವ ಬುದ್ಧಿವಂತಿಕೆಯೂ ಬಹುಮುಖ್ಯ. ಹಾಗಾಗಿ ಮಾನವ ಬುದ್ಧಿವಂತಿಕೆಗೂ ಹೆಚ್ಚು ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಭಾರತದ ವೈಶಿಷ್ಟ್ಯತೆ ಪ್ರದರ್ಶನವಾಗಿರುವುದು ಈ ದೇಶದ ಮಣ್ಣಿನ ಶಕ್ತಿಯಾಗಿದೆ. ಕುಂಭಮೇಳದಲ್ಲಿ 40 ಕೋಟಿ ಜನರು ಪುಣ್ಯಸ್ನಾನ ಮಾಡಿದ್ದಾರೆ. ಅಲ್ಲಿ ಕೋಟಿ ಕೋಟಿ ನಾಗಾಸಾಧುಗಳು ನೆರೆದಿದ್ದನ್ನು ನೋಡಿದ್ದೇವೆ. ಅವರೆಲ್ಲ ಜ್ಞಾನ ಮತ್ತು ಧರ್ಮದಿಂದ ಮಾತ್ರ ದೇಶವನ್ನು ರಕ್ಷಿಸಿಕೊಳ್ಳಲಾಗುವುದಿಲ್ಲ. ಅದಕ್ಕೆ ಶಸ್ತ್ರ ಜ್ಞಾನವೂ ಅವಶ್ಯಕ ಎಂದು ನಂಬಿ ನಡೆಯುತ್ತಿದ್ದಾರೆ ಎಂದರು.ಹರಿದ್ವಾರದ ಹಿಂದೂ ಧರ್ಮ ಆಚಾರ್ಯ ಸಭಾ ಅಧ್ಯಕ್ಷ ಶ್ರೀ ಸ್ವಾಮಿ ಅವಧೇಶಾನಂದ ಗಿರಿ ಮಹಾರಾಜ್ ಅವರು ಒಂದು ಲಕ್ಷಕ್ಕೂ ಹೆಚ್ಚು ಸನ್ಯಾಸಿಗಳಿಗೆ ದೀಕ್ಷೆ ಕೊಟ್ಟು ವೇದಾಂತ ಬೋಧನೆಗಳ ಮೂಲಕ ಅಸಂಖ್ಯಾತ ಅನ್ವೇಷಕರಲ್ಲಿ ವಿಜ್ಞಾನ ಮತ್ತು ಆಧ್ಯಾತ್ಮದ ಸ್ಫೂರ್ತಿ ತುಂಬಿದ್ದಾರೆ. ಅಂತಹ ಮಹಾನ್ ಸಂತರಿಗೆ ಈ ಬಾರಿ ಪ್ರತಿಷ್ಠಿತ ವಿಜ್ಞಾತಂ ಪ್ರಶಸ್ತಿ ನೀಡಿ ಗೌರವಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ತಿಳಿಸಿದರು.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಜ್ಞಾನ ಎಂದರೆ ಅಂತರಂಗದ ಶೋಧನೆ. ವಿಜ್ಞಾನ ಎಂದರೆ ಬಹಿರಂಗದ ಶೋಧನೆ. ಈ ಎರಡರ ಜೊತೆಗೆ ತಂತ್ರ ಜ್ಞಾನವನ್ನೂ ಅಳವಡಿಸಿಕೊಂಡು ಶ್ರೀಮಠದ ಕೀರ್ತಿಯನ್ನು ದೇಶ ವಿದೇಶಕ್ಕೂ ಪಸರಿಸುತ್ತಿರುವ ಡಾ. ನಿರ್ಮಲಾನಂದನಾಥಶ್ರೀಗಳು ಅಭಿನಂದನಾರ್ಹರು. ಆಸ್ತಿ ಮತ್ತು ಭೂಮಿಯನ್ನು ಹಂಚಿಕೊಂಡರೆ ಅದು ಕಡಿಮೆಯಾಗುತ್ತದೆ. ಆದರೆ ವಿದ್ಯೆಯನ್ನು ಹಂಚಿಕೊಂಡರೆ ಅದು ವೃದ್ಧಿಯಾಗುತ್ತದೆ ಎಂದು ಹೇಳಿದರು.