ಅರಸೀಕೆರೆ: ರಾಷ್ಟ್ರದ ಸಂವಿಧಾನಾತ್ಮಕ ಮೌಲ್ಯಗಳು, ಏಕತೆ ಮತ್ತು ಅಖಂಡತೆಯನ್ನು ಸ್ಮರಿಸುವ ಉದ್ದೇಶದಿಂದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ನಗರದ ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅನಂತ ಸಮೂಹ ಶಿಕ್ಷಣ ಸಂಸ್ಥೆಗಳ ಚೇರ್ಮನ್ ಆರ್. ಅನಂತಕುಮಾರ್ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭಾರತವು ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಪರಂಪರೆಗಳನ್ನು ಹೊಂದಿದ್ದರೂ ‘ವಿವಿಧತೆಯಲ್ಲಿ ಏಕತೆ’ ಎಂಬ ತತ್ವವನ್ನು ಜೀವಂತವಾಗಿ ಉಳಿಸಿಕೊಂಡಿರುವ ರಾಷ್ಟ್ರವಾಗಿದೆ. ಪ್ರತಿ ನೂರು ಕಿಲೋಮೀಟರ್‌ಗೆ ವೇಷ-ಭಾಷೆ ಬದಲಾಗಿದ್ದರೂ ದೇಶಭಕ್ತಿ ಎಂಬ ಒಂದೇ ಭಾವನೆ ಭಾರತೀಯರನ್ನು ಒಗ್ಗೂಡಿಸುತ್ತಿದೆ ಎಂದು ಹೇಳಿದರು.ಭಾರತದ ಏಕತೆ, ಸಮಗ್ರತೆ ಹಾಗೂ ಸಂವಿಧಾನದ ಗೌರವವನ್ನು ಕಾಪಾಡುವ ಸಂಕಲ್ಪವನ್ನು ಪ್ರತಿಯೊಬ್ಬ ನಾಗರಿಕರೂ ಕೈಗೊಳ್ಳಬೇಕು. ಆಗ ಮಾತ್ರ ಸ್ವಾತಂತ್ರ್ಯಕ್ಕಾಗಿ ತ್ಯಾಗ ಹಾಗೂ ಬಲಿದಾನ ಮಾಡಿದ ಮಹನೀಯರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಬಾರಿ ಗಣರಾಜ್ಯೋತ್ಸವದ ಅಂಗವಾಗಿ ಪುಸ್ತಕಪ್ರೇಮಿ ಮಂಡ್ಯದ ಅಂಕೆಗೌಡ್ರು ಸೇರಿದಂತೆ ರಾಜ್ಯದ ಎಂಟು ಮಂದಿ ಸಾಧಕರು ಪದ್ಮಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವುದು ಸಂತಸದ ಸಂಗತಿ ಎಂದು ಹೇಳಿದರು.ರಾಷ್ಟ್ರಧ್ವಜಾರೋಹಣದ ನಂತರ ಹಾಜರಿದ್ದ ಗಣ್ಯರು ಮತ್ತು ಸದಸ್ಯರಿಗೆ ಸಿಹಿ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಟಿ. ಆನಂದ್, ಮಾಜಿ ಅಧ್ಯಕ್ಷ ಕಣಕಟ್ಟೆ ಕುಮಾರ್, ಉಪಾಧ್ಯಕ್ಷ ಹೇಮಂತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಸ್.ವಿ. ನವೀನ್ ಕುಮಾರ್, ಕಾರ್ಯದರ್ಶಿ ಟಿ.ಎ. ಸ್ವಾಮಿ, ನಿರ್ದೇಶಕರಾದ ವಿಜಯಕುಮಾರ್, ಜಗದೀಶ್, ರಾಘವೇಂದ್ರಚಾರ್ ಸೇರಿದಂತೆ ಸಂಘದ ಸದಸ್ಯರಾದ ಆನಂದ್ ಕೌಶಿಕ್ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.