ಭಾರತ ದೇಶವು ಆಹಾರದಲ್ಲಿ ಸ್ವಾವಲಂಬಿ ದೇಶ: ಶಾಸಕ ಟಿ.ಬಿ.ಜಯಚಂದ್ರ

KannadaprabhaNewsNetwork | Published : Jan 27, 2025 12:46 AM

ಸಾರಾಂಶ

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರಲು ದೇಶದಲ್ಲಿ ಲಕ್ಷಾಂತರ ಮಂದಿ ಹೋರಾಟ ಮಾಡಿದ್ದಾರೆ. ಅದರಲ್ಲಿ ಶಿರಾದ 100ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾಭಾರತಕ್ಕೆ ಸ್ವತಂತ್ರ ಬಂದಾಗ ನಮ್ಮ ದೇಶವು ಹಸಿವು ಮತ್ತು ಬಡತನ ತುಂಬಿದ ದೇಶವಾಗಿತ್ತು. ಆದರೆ, ಸರ್ಕಾರಗಳ ನೀರಾವರಿ ಸಾಧನೆ, ರೈತರ ಪರಿಶ್ರಮದಿಂದ ನಾವಿಂದು ಆಹಾರದಲ್ಲಿ ಸ್ವಾವಲಂಬಿಗಳಾಗಿದ್ದೇವೆ. ಆದರೂ ದೇಶವು ಇನ್ನೂ ಸಂಪೂರ್ಣ ಹಸಿವು ಮುಕ್ತ ಆಗಿಲ್ಲ. ಅಪೌಷ್ಟಿಕತೆ ಕಾಡುತ್ತಿದ್ದು, ಸೂಚ್ಯಂಕದ ರೀತ್ಯಾ ನಾವು 103ನೇ ಸ್ಥಾನದಲ್ಲಿದ್ದೇವೆ. ಇನ್ನೂ ಸಾಧಿಸುವುದು ಬಹಳಷ್ಟು ಇದೆ ಎಂದು ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿಗಳಾದ ಟಿ.ಬಿ.ಜಯಚಂದ್ರ ಹೇಳಿದರು.ಅವರು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶದಲ್ಲಿ ಹಿಂದುಗಳಿಗೆ ಭಗವದ್ಗೀತೆ, ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಧರ್ಮಗ್ರಂಥಗಳಿದ್ದಂತೆ ವೈವಿಧ್ಯಮಯ ದೇಶವಾದ ಭಾರತಕ್ಕೆ ಇರುವ ಏಕೈಕ ಶ್ರೇಷ್ಠ ಗ್ರಂಥ ಅದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಭಾರತ ಸಂವಿಧಾನ.

ಸ್ವಾತಂತ್ರ್ಯ ಭವನ ನಿರ್ಮಾಣ:

ಭಾರತ ದೇಶಕ್ಕೆ ಸ್ವಾತಂತ್ರ್ಯ ಬರಲು ದೇಶದಲ್ಲಿ ಲಕ್ಷಾಂತರ ಮಂದಿ ಹೋರಾಟ ಮಾಡಿದ್ದಾರೆ. ಅದರಲ್ಲಿ ಶಿರಾದ 100ಕ್ಕೂ ಹೆಚ್ಚು ಸ್ವಾತಂತ್ರ್ಯ ಹೋರಾಟಗಾರರು ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ಮುಂದಿನ ಪೀಳಿಗೆಗೆ ನೆನಪಿಸಲು ಅವರ ಹೆಸರಿನಲ್ಲಿ ಶಿರಾದಲ್ಲಿ ಸ್ವಾತಂತ್ರ್ಯ ಭವನ ನಿರ್ಮಿಸಲಾಗುವುದು. ಸ್ವಾತಂತ್ರ್ಯ ಭವನ ನಿರ್ಮಾಣಕ್ಕೆ 30 ಲಕ್ಷ ರು. ಅನುದಾನ ಮಂಜೂರಾಗಿದ್ದು, ಇನ್ನೊಂದು ವರ್ಷದಲ್ಲಿ ಸ್ವಾತಂತ್ರ್ಯ ಭವನ ನಿರ್ಮಿಸಿ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನು ಪ್ರದರ್ಶನ ಮಾಡುವ ಕಾರ್ಯ ಮಾಡುತ್ತೇನೆ ಎಂದರು.

ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ. ಗೌಡ ಮಾತನಾಡಿ, ಭಾರತ ಸಂವಿಧಾನವನ್ನು ಸಾರ್ವಭೌಮ ಸಮಾಜವಾದಿ ಸರ್ವಧರ್ಮ, ಪ್ರಜಾಸತ್ತತ್ಮಾಕ ಗಣರಾಜ್ಯವನ್ನಾಗಿ ಸಂವಿಧಾನವನ್ನು ರಾಷ್ಟ್ರದ ಒಕ್ಕೂಟ ವ್ಯವಸ್ಥೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ದುರ್ಬಲಗೊಳಿಸದಂತೆ ಸಂವಿಧಾನದ ಸುವ್ಯವಸ್ಥೆಯನ್ನು ಕಾಪಾಡೋಣ ಎಂದರು.

ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರು ಮಾತನಾಡಿ, ಭಾರತ ದೇಶದ ಸ್ವಾತಂತ್ರ್ಯಕ್ಕೆ ಸಾವಿರಾರು ಮಂದಿ ಹೋರಾಟ ಮಾಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ದೇಶವನ್ನು ಉತ್ತಮ ರೀತಿಯಲ್ಲಿ ಆಡಳಿತದಲ್ಲಿ ಕೊಂಡೊಯ್ಯಲು ಭಾರತದ ಸಂವಿಧಾನವನ್ನು ರಚಿಸಲಾಯಿತು. ಈ ಸಂವಿಧಾನವನ್ನು ಜನವರಿ 26 ರಂದು ಅಂಗೀಕರಿಸಲಾಯಿತು ಎಂದರು.

ಗಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮ:

ಗಣರಾಜ್ಯೋತ್ಸವ ಸಮಾರಂಭದಲ್ಲಿ ನಗರದ ಹಲವು ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು. ದೇಶ ಭಕ್ತಿಗೀತೆಗೆ ಸಂಬಂಧಪಟ್ಟ ನೃತ್ಯರೂಪಕಗಳು ನೆರದಿದ್ದವರ ಮನ ಸೆಳೆದವು.ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷ ಜೀಷಾನ್ ಮೊಹಮದ್, ಉಪಾಧ್ಯಕ್ಷ ಲಕ್ಷ್ಮೀಕಾಂತ್, ಸ್ಥಾಯಿ ಸಮಿತಿ ಅಧ್ಯಕ್ಷ ಅಜಯ್‌ಕುಮಾರ್, ಡಿವೈಎಸ್‌ಪಿ ಶೇಖರ್, ಪೌರಾಯುಕ್ತ ರುದ್ರೇಶ್ ಕೆ., ಬಿಇಓ ಸಿ.ಎನ್.ಕೃಷ್ಣಪ್ಪ, ತಾ.ಪಂ. ಇಓ ಹರೀಶ್, ನಗರಸಭೆ ಸದಸ್ಯರಾದ ಶಿವಶಂಕರ್, ಸಹಾಯಕ ಕೃಷಿ ನಿರ್ದೇಶಕ ಎಚ್.ನಾಗರಾಜು, ವಲಯ ಅರಣ್ಯಾಧಿಕಾರಿ ನವನೀತ್, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ್, ಶಿರಾ ಆಶ್ರಯ ಸಮಿತಿ ಸದಸ್ಯರಾದ ವಾಜರಹಳ್ಳಿ ರಮೇಶ್, ಜಯಲಕ್ಷ್ಮೀ, ನೂರುದ್ದೀನ್ ಹಾಜರಿದ್ದರು. 26ಶಿರಾ1: ಶಿರಾ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ತಹಸೀಲ್ದಾರ್ ಸಚ್ಚಿದಾನಂದ ಕುಚನೂರ ಅವರು ನೆರವೇರಿಸಿ ಧ್ವಜವಂದನೇ ಸ್ವೀಕರಿಸಿದರು. 26ಶಿರಾ2: ಶಿರಾ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.26ಶಿರಾ3: ಶಿರಾ ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ 76ನೇ ಗಣರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ವಿವಿಧ ಸಾಧಕರಿಗೆ ಸನ್ಮಾನಿಸಲಾಯಿತು. ಶಾಸಕ ಟಿ.ಬಿ.ಜಯಚಂದ್ರ, ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ತಹಶೀಲ್ದಾರ್ ಸಚ್ಚಿದಾನಂದ ಕುಚನೂರ, ಸೇರಿದಂತೆ ಹಲವರು ಹಾಜರಿದ್ದರು.

Share this article