- ಬಸವತತ್ವ ಪೀಠದಲ್ಲಿ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ
ಭಾರತ ಪ್ರಾಕೃತಿಕ, ಧಾರ್ಮಿಕ, ಸಾಂಸ್ಕೃತಿಕವಾಗಿ ಸಂಪದ್ಭರಿತ ದೇಶವಾಗಿದ್ದು, ಇಡೀ ಜಗತ್ತು ಅತ್ಯಂತ ಗೌರವದಿಂದ ನೋಡುವಂತಹ ಆಧ್ಯಾತ್ಮಿಕ ಆತ್ಮತೃಪ್ತಿ ಹೊಂದಿದೆ ಎಂದು ಸುತ್ತೂರು ಮಠದ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ನುಡಿದರು.
ಬಸವತತ್ವ ಪೀಠದಲ್ಲಿ ಶನಿವಾರ ನಡೆದ ಬಸವತತ್ವ ಸಮಾವೇಶ ಹಾಗೂ ಶ್ರೀಮಠದ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. ಚಿಕ್ಕಮಗಳೂರು ಜಿಲ್ಲೆ ಸೌಂದರ್ಯ ಭರಿತವಾಗಿದ್ದು, ಮಲೆನಾಡು, ಬಯಲು ಪ್ರದೇಶ ಹೊಂದಿರುವ ಅಪರೂಪದ ಜಿಲ್ಲೆ. ಐತಿಹಾಸಿಕ, ಧಾರ್ಮಿಕ ಕೇಂದ್ರಗಳ ಜೊತೆಗೆ ನಾನಾ ಕಾರಣಗಳಿಂದ ತನ್ನದೇ ಆದ ಮಹತ್ವ ಪಡೆದುಕೊಂಡಿದೆ. ಈ ಜಿಲ್ಲೆಯಲ್ಲಿ ಬಸವತತ್ವ ಪೀಠ ಸ್ಥಾಪನೆಯಾಗಿರುವುದು ಆರ್ಥಪೂರ್ಣ ಎಂದರು.ಧರ್ಮ ಎನ್ನುವುದು ಸಾವಿರಾರು ವರ್ಷಗಳ ವಿಕಾಸವಾಗಿದ್ದು ಈ ಬಗ್ಗೆ ಆತ್ಮಸಾಕ್ಷಿ ನಿರಂತರವಾಗಿ ನಡೆದಿದೆ, ದೊಡ್ಡ ಪರಂಪರೆ ದೇಶದಲ್ಲಿ ಬೆಳೆದಿದೆ. 12ನೇ ಶತಮಾನದಲ್ಲಿ ಆಧ್ಯಾತ್ಮಿಕ ತಿರುವು, ಆಧ್ಯಾತ್ಮಕ ಮಗ್ಗಲು ಬದಲಿಸಿದವರು ವಿಶ್ವಗುರು ಬಸವಣ್ಣನವರು. ಅವರ ಬದುಕೇ ಒಂದು ಪ್ರಯೋಗ ಶಾಲೆಯಾಗಿತ್ತು ಎಂದು ಹೇಳಿದರು.ಕಾನೂನಿನ ನೆರಳಿನಿಂದ ಮಾಡಲು ಅಸಾಧ್ಯವಾಗಿರುವುದನ್ನು ಹೃದಯ ವೈಶಾಲ್ಯತೆಯಿಂದ ಸಾಧ್ಯ ಎಂಬುದನ್ನು ಇಡೀ ಜಗತ್ತಿಗೆ ವಚನಗಳ ಮೂಲಕ ತೋರಿಸಿದವರು ಬಸವಣ್ಣ ಎಂದರು. ಕರ್ನಾಟಕ ರಾಜ್ಯದ ಸಾಕ್ಷರತೆ ಗಮನಿಸಿದರೆ ಬೇರೆ ರಾಜ್ಯಗಳಿಗಿಂತ ಸಾಕ್ಷರತೆ ಪ್ರಮಾಣ ಇಲ್ಲಿ ಹೆಚ್ಚಾಗಿದೆ. ರಾಜ್ಯದ ಮಠಮಾನ್ಯಗಳ ಕೊಡುಗೆ ಸಾಕ್ಷರತೆ ಬೆಳವಣಿಗೆಗೆ ಪೂರಕವಾಗಿದ್ದು, ಮಠಮಾನ್ಯಗಳು ಲೌಖಿಕ ಬದುಕಿನ ಜೊತೆಗೆ ಆಧ್ಯಾತ್ಮಿಕತೆ ಪಸರಿಸುವ ಜವಾಬ್ದಾರಿ ಹೊಂದಿದೆ ಎಂದು ಹೇಳಿದರು.ನೂತನ ಕಟ್ಟಡ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಿದ ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮಿ, ಬಸವತತ್ವ ಪೀಠದ ಹಳೇ ಕಟ್ಟಡವನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣ ಮಾಡ ಲಾಗಿದೆ. ಹಾಗೆ ಭಕ್ತರು ಹಳೆ ಮನಸ್ಸನ್ನು ಕೆಡವಿ ಹೊಸ ಮನಸನ್ನು ಕಟ್ಟಬೇಕು ಆಗ ಮಾತ್ರ ಬಸವತತ್ವ ಸಮಾವೇಶದ ಆಶೋತ್ತರ ಪೂರೈಸಿದಂತಾಗುತ್ತದೆ ಎಂದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಸಾಮಾಜಿಕ, ಧಾರ್ಮಿಕ ಭಾವನೆ ಈ ಕ್ಷೇತ್ರದ ಜನರಲ್ಲಿ ಮೂಡಲು ಡಾ.ಬಸವ ಮರುಳಸಿದ್ಧ ಸ್ವಾಮಿ ಕಾರಣಕರ್ತರು. ಭಕ್ತರ ಕಡೆ ಗುರುಗಳ ನಡಿಗೆ ಎಂಬ ಬಸವತತ್ವ ಸಮಾವೇಶ ನಡೆಸುವ ಮೂಲಕ ಜನರಿಗೆ ಬಸವಾದಿ ಶರಣರ ತತ್ವಗಳನ್ನು ಮನವರಿಕೆ ಮಾಡಿದ್ದು, ಕೇವಲ ಚಿಕ್ಕಮಗಳೂರಿಗೆ ಸೀಮಿತವಾಗಿದ್ದ ಬಸವತತ್ವ ಪೀಠವನ್ನು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಈ ಮೂರು ಜಿಲ್ಲೆಗಳಿಗೆ ಶ್ರೀಗಳು ವಿಸ್ತರಿಸಿದ್ದಾರೆ ಎಂದರು.
ಚಿಕ್ಕಮಗಳೂರಿನ ಬಸವತತ್ವ ಪೀಠದಲ್ಲಿ ಶನಿವಾರ ನಡೆದ ಬಸವತತ್ವ ಸಮಾವೇಶವನ್ನು ಸಿರಿಗೆರೆ ತರಳಬಾಳು ಮಠದ ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮಿ, ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ, ಶಾಸಕ ತಮ್ಮಯ್ಯ, ಎಂಎಲ್‌ಸಿ ಸಿ.ಟಿ. ರವಿ ಇದ್ದರು.
------------------------------